Site icon Vistara News

ಕೆರೂರು ಗಲಭೆ ಪ್ರಕರಣ ಖಂಡಿಸಿ ಜುಲೈ 11ರಂದು ಬೃಹತ್ ಪ್ರತಿಭಟನೆಗೆ ಕರೆ

keruru

ಬಾಗಲಕೋಟೆ: ಇಲ್ಲಿನ ಕೆರೂರ ಪಟ್ಟಣದಲ್ಲಿ ಜುಲೈ 6ರಂದು ನಡೆದ ಗುಂಪು ಘರ್ಷಣೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಬೃಹತ್‌ ಪ್ರತಿಭಟನೆ ನಡೆಸಲು ಹಿಂದೂ ಜಾಗರಣ ವೇದಿಕೆ ಸಜ್ಜಾಗುತ್ತಿದೆ. ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಭಾರತದ ಸಂಚಾಲಕ ಜಗದೀಶ ಕಾರಂತ ನೇತೃತ್ವದಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.

ಜುಲೈ 11ರ ಸೋಮವಾರ ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಂದು ಜಿಲ್ಲೆಯ ಬಾದಾಮಿ, ಹುನಗುಂದ, ಬೀಳಗಿ, ಮುಧೋಳ, ಇಲಕಲ್, ಗುಳೇದಗುಡ್ಡ, ರಬಕವಿ ಬನಹಟ್ಟಿ ತಾಲೂಕು ಕೇಂದ್ರಗಳಲ್ಲಿಯೂ ಏಕಕಾಲಕ್ಕೆ ಪ್ರತಿಭಟನೆ ನಡೆಯಲಿದೆ. ಆದರೆ ಜಮಖಂಡಿಯಲ್ಲಿ ಮಾತ್ರ ಜುಲೈ 12 ರಂದು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ | ಕೆರೂರು ಗಲಾಟೆ | ಪಟ್ಟಣದಲ್ಲಿ ಗುಂಪು ಘರ್ಷಣೆಗೆ ಹುಡುಗಿಯನ್ನು ಚುಡಾಯಿಸಿದ್ದು ಮೂಲಕಾರಣವೇ?

ಪ್ರಕರಣದ ದಿಕ್ಕು ತಪ್ಪಿಸುತ್ತಿರುವ ಪೊಲೀಸರು

ಕೆರೂರು ಪಟ್ಟಣದಲ್ಲಿ ನಡೆದ ಘರ್ಷಣೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರು ಮತ್ತು ಗೋಪಾಲ ದಾಸ್ಮನಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಈ ಗಲಾಟೆಗೆ ವೈಯಕ್ತಿಕ ದ್ವೇಷವೆಂದು ಹೇಳುತ್ತಿದ್ದಾರೆ. ಆದರೆ, ಇದು ವೈಯಕ್ತಿಕ ದ್ವೇಷವಲ್ಲ. ಇದು ಹಿಂದುಗಳ‌ ಮೇಲೆ ನಡೆದ ದಬ್ಬಾಳಿಕೆ ಎಂದು ಜಗದೀಶ ಕಾರಂತ ಆರೋಪಿಸಿದ್ದಾರೆ.

ಈ ಘಟನೆ ಹಿಂದೆ ಕೆರೂರ ಪೊಲೀಸ್ ಠಾಣೆಯ  ಪಿಎಸ್ಐ ಹಾಗೂ ಐವರು ಪೊಲೀಸರ ಕೈವಾಡವಿದೆ. ಈ ಮಧ್ಯೆ ಐದು ಜನ ಪೊಲೀಸರು ಸ್ಥಳದಲ್ಲೇ ಇದ್ದರೂ ಆರೋಪಿಗಳು ಕೇರ್‌ ಮಾಡಿಲ್ಲ. ದೇಶದಲ್ಲಿ ಕನ್ಹಯ್ಯಲಾಲ್, ರುದ್ರೇಶ್, ಶರತ್ ಮಡಿವಾಳ, ಹರ್ಷರಂಥ ಇನ್ನೆಷ್ಟು ಜನರ ಹಿಂದೂಗಳ ಹತ್ಯೆಯಾಗಬೇಕೆಂದು ಕಿಡಿಕಾರಿದರು.

ಗಾಯಾಳುಗಳಿಗೆ ಚೆಕ್‌ ವಿತರಿಸಿದ ಶ್ರೀರಾಮುಲು

ಸಚಿವ ಶ್ರೀರಾಮುಲು ನಗರದ ಕೆರೂಡಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡಿದ್ದ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರು ಚುಂಗಿನ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ವೈದ್ಯರಿಂದ ಗಾಯಾಳುಗಳ ಆರೋಗ್ಯ ಸ್ಥಿತಿಗತಿ ತಿಳಿದು, ಸಮಾಜ ಕಲ್ಯಾಣ ಇಲಾಖೆಯಿಂದ ತಲಾ 50 ಸಾವಿರ ಧನಸಹಾಯ ಚೆಕ್ ವಿತರಿಸಿದರು.

ಗಾಯಾಳುಗಳನ್ನ ಭೇಟಿ ಮಾಡಿದ ಸಚಿವ ಶ್ರೀರಾಮುಲು

ಬಳಿಕ ಮಾತನಾಡಿದ ಶ್ರೀರಾಮುಲು ಕೆರೂರು ಗುಂಪು ಗಲಾಟೆಯಲ್ಲಿ ಗಾಯಾಳುಗಳು ಬದುಕಿ ಉಳಿದಿರುವುದೇ ಹೆಚ್ಚು. ಹೋರಾಟ ಮಾಡುವ ವ್ಯಕ್ತಿಗಳ ಮೇಲೆ ಈ ರೀತಿ ಹಲ್ಲೆ ನಡೆದರೆ ಕುಗ್ಗಬಹುದು ಎಂದು ಅಂದುಕೊಂಡು ಇರಬಹುದು. ಆದರೆ ನಾವೆಲ್ಲರೂ ಗಾಯಾಳುಗಳ ಹಿಂದೆ ಇರಲಿದ್ದೇವೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಈ ರೀತಿಯ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಆದೇಶವನ್ನು ನಾನು ಮಾಡುತ್ತೇವೆ ಎಂದರು.

ಕೆರೂರು ಸಮೀಪದ ಕುಳಗೇರಿ ಕ್ರಾಸ್ ಬಳಿಯ ಡಾಬಾದಲ್ಲಿ ಮತ್ತೊಂದು ಗಲಭೆ

ಕೆರೂರು ಪಟ್ಟಣದಲ್ಲಿ ನಡೆದ ಗಲಾಟೆ ಪ್ರಕರಣವು ಕೊಂಚ ತಿಳಿಯಾಗುತ್ತಿರುವ ಬೆನ್ನಲ್ಲೆ ಶುಕ್ರವಾರ ಕುಳಗೇರಿ ಕ್ರಾಸ್ ಬಳಿರುವ ಡಾಬಾವೊಂದರಲ್ಲಿ ಕೆಲ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಡಾಬಾದ ಮಾಲೀಕರ  ಮೇಲೆ ಹಲ್ಲೆ ಮಾಡಿದ್ದು, ಕೂಡಲೇ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬೆನ್ನಲ್ಲೆ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಎಸ್ಪಿ ಜಯಪ್ರಕಾಶ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ, ಡಾಬಾ ಬಳಿ ಹೆಚ್ಚುವರಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ. ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ತಪ್ಪಿತಸ್ಥರನ್ನು ಆದಷ್ಟು ಬೇಗ ಬಂಧಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ | ಕೆರೂರು ಗುಂಪು ಘರ್ಷಣೆ: 144 ನಿಷೇಧಾಜ್ಞೆ ಜಾರಿ, ಕೆರೂರು ಪಟ್ಟಣ ಸ್ತಬ್ಧ

Exit mobile version