ಚಾಮರಾಜನಗರ: ಇದು ಜಿಲ್ಲಾಧಿಕಾರಿಗೇ ಯಾಮಾರಿಸಲು ಸಖತ್ ಪ್ಲಾನ್ ಮಾಡಿದವನ ಕಥೆ. ಅವನಿಗೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಬೇಕಿತ್ತು, ಅಲ್ಲಿ ವಾಸ್ತವ್ಯವನ್ನೂ ಮಾಡಬೇಕಿತ್ತು. ಇದರ ಜೊತೆಗೆ ಜಂಗಲ್ ಸಫಾರಿ, ದೇವರ ದರ್ಶನವೂ ಆಗಬೇಕಿತ್ತು. ಇದೆಕ್ಕೆಲ್ಲ ವ್ಯವಸ್ಥೆ ಮಾಡಿ ಕೊಡಿ, ನಾನು ಪ್ರಧಾನ ಮಂತ್ರಿ ಕಾರ್ಯಾಲಯದ ಉನ್ನತ ಅಧಿಕಾರಿ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಕರೆ ಮಾಡಿದ್ದ. ಆದರೆ, ಆತನ ಆಟವನ್ನು ಜಿಲ್ಲಾಧಿಕಾರಿ ಅಲ್ಲಿಗೇ ನಿಲ್ಲಿಸಿದ್ದಾರೆ!
789274117 ನಂಬರಿನಿಂದ ರಾವ್ ಎಂಬ ಹೆಸರನ್ನು ಹೇಳಿಕೊಂಡ ವ್ಯಕ್ತಿಯೊಬ್ಬ ಶನಿವಾರ (ಜುಲೈ 2) ಕರೆ ಮಾಡಿದ್ದ. ತಾನು ಪ್ರಧಾನ ಮಂತ್ರಿಯವರ ಕಾರ್ಯಾಲಯದ ಉನ್ನತ ಅಧಿಕಾರಿಯಾಗಿದ್ದು, ಕುಟುಂಬ ಸಮೇತನಾಗಿ ಬಿಳಿಗಿರಿರಂಗನ ಬೆಟ್ಟಕ್ಕೆ ಬರುತ್ತಿದ್ದು, ವಾಸ್ತವ್ಯಕ್ಕೆ ಕೊಠಡಿ ಕಾಯ್ದಿರಿಸಬೇಕು. ಜೊತೆಗೆ ಜಂಗಲ್ ಸಫಾರಿ ಮತ್ತು ಬಿಳಿಗಿರಿ ರಂಗನಬೆಟ್ಟ ದೇವಸ್ಥಾನದಲ್ಲಿ ದರ್ಶನ ಹಾಗೂ ದೊಡ್ಡ ಸಂಪಿಗೆ ಮರ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದ.
ಇದನ್ನೂ ಓದಿ | Pavitra Lokesh | ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ಸೈಬರ್ ಠಾಣೆ ಮೆಟ್ಟಿಲೇರಿದ ನಟಿ
ಈ ವೇಳೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಆ ವ್ಯಕ್ತಿಯ ನಿಖರ ಹುದ್ದೆ ಕೇಳಿದಾಗ, ʻಗುಜರಾತ್‌ನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದೆ. ಈಗ ಪ್ರಧಾನಿ ಕಾರ್ಯಾಲಯದಲ್ಲಿದ್ದೇನೆʼ ಎಂದಿದ್ದ. ಸಂಪೂರ್ಣ ಹೆಸರು ಹಾಗೂ ಹುದ್ದೆಯ ಬಗ್ಗೆ ವಿಚಾರಿಸುವಾಗ, ಗೌಪತ್ಯೆ ಕಾಪಾಡಿಕೊಳ್ಳಬೇಕಿರುವುದರಿಂದ ಹೆಸರು ಮತ್ತು ನಿಖರ ಹುದ್ದೆಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ. ಆದರೆ, ಈ ವ್ಯಕ್ತಿಯ ಮಾತಿನ ಶೈಲಿ ಬಗ್ಗೆ ಅನುಮಾನಗೊಂಡ ಜಿಲ್ಲಾಧಿಕಾರಿಗಳು, ವಿವರವನ್ನು ಪರಿಶೀಲಿಸಿದ್ದಾರೆ. ಬಳಿಕ ಈ ವ್ಯಕ್ತಿ ಸುಳ್ಳು ಹೇಳುತ್ತಿರುವ ಬಗ್ಗೆ ಅನುಮಾನಗೊಂಡು ಶನಿವಾರವೇ (ಜು.೨) ಪೊಲೀಸರಿಗೆ ದೂರು ನೀಡಿದ್ದಾರೆ.
ಈಗ ವಂಚಿಸಲು ಯತ್ನಿಸಿರುವ ಅಪರಿಚಿತ ವ್ಯಕ್ತಿ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದು, ವ್ಯಕ್ತಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮೈಸೂರು ಮೂಲದ ವ್ಯಕ್ತಿ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ | ಭ್ರೂಣಗಳ ಪತ್ತೆ ಪ್ರಕರಣ, ಮರಣೋತ್ತರ ಪರೀಕ್ಷೆ ವರದಿ ಬಹಿರಂಗ