ಬೆಂಗಳೂರು: ಕಾಂಗ್ರೆಸ್‌ನಲ್ಲಿ ಲಿಂಗಾಯತರ ಕಡೆಗಣನೆ ಆಗುತ್ತಿರುವುದು ಶೇ. ನೂರಕ್ಕೆ ನೂರು ಸತ್ಯ. ಈ ಕುರಿತ ಶಾಮನೂರು ಶಿವಶಂಕರಪ್ಪ ಹೇಳಿಕೆ ನಿಜ. ಯಾರಾದರೂ ಲಿಂಗಾಯತರು ಪೋಸ್ಟಿಂಗ್‌ಗೆ ಬಂದರೆ ಕೊಡಬೇಡಿ ಅಂತ ಸಿಎಂ ಕಡೆಯಿಂದ ಸಚಿವರಿಗೆ ಕರೆ ಹೋಗುತ್ತಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ (BC Patil) ಆರೋಪಿಸಿದ್ದಾರೆ.
ನಗರದಲ್ಲಿ ಬಿಜೆಪಿ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಬರ ಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಆದರೆ, ಈವರೆಗೆ ರೈತರಿಗೆ ಒಂದು ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಕೊಟ್ಟಿಲ್ಲ. ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರ ಪರಿಹಾರಕ್ಕೆ ಕಾಯದೆ ಪರಿಹಾರ ಕೊಟ್ಟಿತ್ತು. ಹೀಗಾಗಿ ಈ ಕೂಡಲೇ ಕಾಂಗ್ರೆಸ್ ಸರ್ಕಾರ ರೈತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಇದು ರೈತರ ಆತ್ಮಹತ್ಯೆ ಗ್ಯಾರಂಟಿ ಸರ್ಕಾರ
ಕಾಂಗ್ರೆಸ್ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದ್ದು, ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 11,527 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ. ಆದರೆ, ಒಂದು ಪೈಸೆ ಬೆಳೆ ಪರಿಹಾರ ಕೂಡ ಸರ್ಕಾರ ಕೊಟ್ಟಿಲ್ಲ. ನಾವು ಅಧಿಕಾರದಲ್ಲಿದ್ದಾಗ ರೈತರಿಗೆ ಸರ್ವೆ ರಿಪೋರ್ಟ್ ತರಿಸಿ ಪರಿಹಾರ ಕೊಟ್ಟಿದ್ದೆವು. ನಾವು ಕೇಂದ್ರ ಪರಿಹಾರ ಕೊಡಲಿ ಅಂತ ಕಾಯಲಿಲ್ಲ. ಆದ್ರೆ ಇವರು ಕೇಂದ್ರದ ಕಡೆ ಪರಿಹಾರ ಕೊಟ್ಟಿಲ್ಲ ಅಂತ ಬೊಟ್ಟು ಮಾಡುತ್ತಿದ್ದಾರೆ. ಇವರಿರುವುದು ಯಾಕೆ, ಇವರೇ ಪರಿಹಾರ ಕೊಡಬಹುದಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Cauvery Water Dispute : ಜಲಾಘಾತ ನೀಡಲೇ ಕಾವೇರಿ ಪ್ರಾಧಿಕಾರ – ನಿಯಂತ್ರಣ ಸಮಿತಿ ಇದೆಯೇ? ಎಚ್‌ಡಿಕೆ ಕಿಡಿ
ಇದುವರೆಗೆ ಒಬ್ಬೇ ಒಬ್ಬ ಸಚಿವ ರೈತರ ಜಮೀನಿಗೆ ಹೋಗಲಿಲ್ಲ. ರೈತರ ಮೇಲೆ ಇವರ ಸರ್ಕಾರಕ್ಕೆ ಕಾಳಜಿ ಇಲ್ಲ. ಈ ವರ್ಷ ಸೆಪ್ಟೆಂಬರ್ ಅಂತ್ಯದವರೆಗೆ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಲ ಅತೀ ಹೆಚ್ಚು ಆತ್ಮಹತ್ಯೆಗಳು ಆಗಿವೆ. ಇದು ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ಸರ್ಕಾರ. ಇದ್ದಬದ್ದ ಹಣ ಗ್ಯಾರಂಟಿಗಳಿಗೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪರಿಹಾರದ ಮೊತ್ತ ಹೆಚ್ಚಳದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರೈತರ ಬಗ್ಗೆ ಶಿವಾನಂದ ಪಾಟೀಲ್ ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಯಾವ ರೈತನೂ ಸರ್ಕಾರ ಕೊಡೋ ನಾಲ್ಕೈದು ಲಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲ್ಲ. ರೈತರಿಗೆ ಅವಮಾನ ಆಗುವ ರೀತಿಯಲ್ಲಿ ಸಚಿವ ಹೇಳಿಕೆ ಕೊಟ್ಟಿದ್ದಾರೆ. ಶಿವಾನಂದ ಪಾಟೀಲರಿಗೆ ಏಳೆಂಟು ಕೋಟಿ ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.
ಶಾಸಕ ಮುನಿರತ್ನ ಕ್ಷೇತ್ರದ ಅನುದಾನ ಕಡಿತ ಮಾಡಿರುವುದು ತಪ್ಪು. ಹೀಗಾಗಿ ಮುನಿರತ್ನ ಧರಣಿ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಯಡಿಯೂರಪ್ಪ ಬೆಂಬಲ ಕೊಟ್ಟಿದ್ದಾರೆ. ಕ್ಷೇತ್ರಗಳ ಅನುದಾನ ವಿಚಾರದಲ್ಲಿ ರಾಜ್ಯ ಸರ್ಕಾರ ಪಕ್ಷಪಾತ ಮಾಡಬಾರದು ಎಂದರು.
ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ದರಿದ್ರ ಬರುತ್ತದೆ
ಎಂಎಲ್‌ಸಿ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ದರಿದ್ರವನ್ನು ಜತೆಗೇ ತರುತ್ತದೆ. ರೈತರನ್ನು ಕೈ ಬಿಡಬಾರದಿತ್ತು. ಕೇಂದ್ರ ಹಣ ಕೊಟ್ಟಿಲ್ಲ ಅಂತ ಬಿಜೆಪಿ ಸರ್ಕಾರ ಯಾವತ್ತೂ ಹೇಳಿಲ್ಲ, ಈಗ ಕಾಂಗ್ರೆಸ್ ಕೇಂದ್ರದ ಕಡೆ ಕೈ ತೋರಿಸ್ತಿದೆ.. 193 ಕಡೆ ಬರ ಪರಿಸ್ಥಿತಿ ಇದೆ ಅಂತ ನೀವೇ ಹೇಳಿದ್ದೀರಿ. ನೀವು ಕೇವಲ ಗ್ಯಾರಂಟಿಗಳನ್ನು ಮಾತ್ರ ಗಮನಿಸುವುದಾ ಎಂದು ಪ್ರಶ್ನಿಸಿದರು.
ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು. ನಾವು ಖಾಲಿ ಆಗಿದ್ದೀವಿ ಅಂತ ಘೋಷಣೆ ಮಾಡಿಕೊಳ್ಳಿ. ಶಾಸಕರ ಅನುದಾನವನ್ನೂ ಬೇರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಬ್ರ್ಯಾಂಡ್ ಬೆಂಗಳೂರು ಅಂತ ಹೇಳಿಕೊಳ್ಳುತ್ತೀರಿ. ಅದು ಬ್ಯಾಂಡ್ ಬೆಂಗಳೂರು ಆಗಿದೆ. ಈಗಾಗಲೇ ಬೆಂಗಳೂರು ವಿಶ್ವಮಟ್ಟದಲ್ಲಿ ಗಮನಸೆಳೆದಿದೆ. ಇದನ್ನು ನೀವೇನು ಹೊಸದಾಗಿ ಮಾಡಬೇಕಾಗಿಲ್ಲ. ಬೆಂಗಳೂರು ಸುತ್ತ ನೀವು ಮಾಡುತ್ತಿರೋ ಬ್ರ್ಯಾಂಡ್ ನಮಗೆ ಗೊತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Revenge politics : ಕಾಂಗ್ರೆಸ್‌ಗೆ ಮತ ಹಾಕದ ಬೂತ್ ಅಭಿವೃದ್ಧಿ ಮಾಡಲ್ಲ; ಕೈ ಶಾಸಕನ ದ್ವೇಷ ರಾಜಕಾರಣ
ಮೊದಲು ರೈತರ ಬಗ್ಗೆ ಯೋಚನೆ ಮಾಡಿ. ಇಲ್ಲಿನ ರೈತರಿಗೆ ನೀರಿಲ್ಲ. ತಮಿಳುನಾಡು ರೈತರ ಬಗ್ಗೆ ಮಾತನಾಡುತ್ತೀರಾ? ಚುನಾವಣೆಗಾಗಿ ಯಾರನ್ನೋ ಓಲೈಕೆ ಮಾಡಬಾರದು. ನಿಮ್ಮ ಮುಖ ನೋಡಿ ಯಾರೂ ಓಟ್ ಹಾಕಿಲ್ಲ. ಗ್ಯಾರಂಟಿಗಳನ್ನು ನೋಡಿ ಓಟ್ ಹಾಕಿದ್ದಾರೆ. ನುಡಿದಂತೆ ನಡೆವ ಸರ್ಕಾರ ಅಂತೀರಲ್ಲ, ಏನು ನುಡಿದಂತೆ ನಡೆದಿದ್ದೀರಾ ಹೇಳಿ. ನಮ್ಮ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ನಿಮ್ಮ ಶಾಸಕರ ಮನೆಗಳಿಗೆ ಬಂದು ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.