Site icon Vistara News

Adani Group Shares: ಮೋದಿ, ಶಾ ಒಪ್ಪಿಗೆ ಇಲ್ಲದೇ ಎಲ್‌ಐಸಿಯಿಂದ ಅದಾನಿ ಗ್ರೂಪ್‌ ಮೇಲೆ ಹೂಡಿಕೆ ಸಾಧ್ಯವೇ?: ಪ್ರಿಯಾಂಕ್‌ ಖರ್ಗೆ

Can LIC invest in Adani Group Shares without Modi, Shah consent says Priyank Kharge

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಮುಗಿಬಿದ್ದಿದ್ದು, ಉದ್ಯಮಿ ಗೌತಮ್‌ ಅದಾನಿ ಗ್ರೂಪ್‌ ಕಂಪನಿ ವಿದೇಶದಲ್ಲಿ ನಕಲಿ ಕಂಪನಿ ತೆರೆದು, ನಕಲಿ ಲೆಕ್ಕಾಚಾರಗಳನ್ನು ತೋರಿಸಿ ಷೇರು ವ್ಯವಹಾರಗಳಲ್ಲಿ ಅಕ್ರಮ ನಡೆಸಿದೆ ಎಂಬ ಆರೋಪವನ್ನು ಇಟ್ಟುಕೊಂಡು ವಾಗ್ದಾಳಿ ನಡೆಸಿರುವ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್, ಎಲ್‌ಐಸಿಯಂತಹ ಸಾರ್ವಜನಿಕ ಉದ್ದಿಮೆ ಹಣವನ್ನು ಅದಾನಿ ಕಂಪನಿ ಷೇರುಗಳ (Adani Group Shares) ಮೇಲೆ ಹೂಡಿಕೆ ಮಾಡಿದ್ದು ಹೇಗೆ? ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅನುಮತಿ ಇಲ್ಲದೇ ಇದು ನಡೆಯಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸೆಬಿ ಹಾಗೂ ಜಂಟಿ ಸದನ ಸಮಿತಿ ಮೂಲಕ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ ಹಾಗೂ ಪ್ರೊ. ಬಿ.ಕೆ. ಚಂದ್ರಶೇಖರ್, ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೌತಮ್‌ ಅದಾನಿ ಕಂಪನಿ ವಿರುದ್ಧ ಹರಿಹಾಯ್ದರು.

ಈ ವೇಳೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಎಲ್ಐಸಿಯಂತಹ ಸಾರ್ವಜನಿಕ ಉದ್ದಿಮೆಯಿಂದ 36,500 ಕೋಟಿ ರೂಪಾಯಿ ಹೂಡಿಕೆ ಮಾಡಿಸಲಾಗಿದೆ. 28 ಕೋಟಿ ಭಾರತೀಯರು ಎಲ್ಐಸಿಯಲ್ಲಿ ಹೂಡಿಕೆ ಮಾಡಿದ್ದಾರೆ. ಈ ಎಲ್‌ಐಸಿಯಿಂದ ಅದಾನಿ ಕಂಪನಿಗೆ ಬಂಡವಾಳವನ್ನು ಹೂಡಿಕೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವರು, ಪ್ರಧಾನಿಗಳ ಅನುಮತಿ ಇಲ್ಲದೆ ಹೂಡಿಕೆ ಅಸಾಧ್ಯ. ಈ ವಿಚಾರದಲ್ಲಿ ಬಿಜೆಪಿಯವರು ಚರ್ಚೆಗೆ ಬರಲು ಸಿದ್ಧರಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Karanataka Election : ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಸಿಎಂ ಎಂದರೆ ಸಿದ್ದರಾಮಯ್ಯ ಎಂದ ಬೊಮ್ಮಾಯಿ

ದೇಶದ ಇತಿಹಾಸದಲ್ಲೇ ಮೊದಲು

ಅದಾನಿ ಸಮೂಹ ರಕ್ಷಿಸಲು ಪ್ರಧಾನಿಯೊಬ್ಬರು ಮುಂದಾಗಿರುವುದು ದೇಶದ ಇತಿಹಾಸದಲ್ಲೇ ಮೊದಲು. ಪ್ರಧಾನಮಂತ್ರಿಗಳು ಹಾಗೂ ಅದಾನಿ ಅವರ ಬೆಳವಣಿಗೆ ಏಕಕಾಲದಲ್ಲಿ ಆಗಿದೆ. ಒಬ್ಬ ವ್ಯಕ್ತಿಗಾಗಿ ದೇಶದ ದಿಕ್ಕು ತಪ್ಪಿಸುವುದು ತಪ್ಪು. ಈ ವಿಚಾರದಲ್ಲಿ ಪರಿಣಾಮಕಾರಿ ತನಿಖೆ ಆಗಬೇಕು. ಸರ್ಕಾರ ಹಾಗೂ ಉದ್ಯಮಿಗಳ ತನಿಖೆ ಮಾಡುವ ಅಧಿಕಾರವನ್ನು ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಕಳೆದ ಮೂರು ವರ್ಷಗಳಲ್ಲಿ ಅದಾನಿ ಅವರ ಸಮೂಹದ ಆಸ್ತಿ 8200 ಕೋಟಿಯಿಂದ 9.94 ಲಕ್ಷ ಕೋಟಿ ಆಗಲು ಕಾರಣ ಏನು? ನೀವು ವಿಶ್ವದ ಅತಿ ಶ್ರೀಮಂತರನ್ನೇ ತೆಗೆದುಕೊಳ್ಳಿ. ಅವರ ಸಂಪತ್ತು 1, 2 ಬಿಲಿಯನ್ ಆಗಲು 20-30 ವರ್ಷ ಶ್ರಮ ಹಾಕಿರುತ್ತಾರೆ. ಆದರೆ ಕೇವಲ 3 ವರ್ಷಗಳಲ್ಲಿ ಒಂದು ಸಮೂಹದ 7 ಕಂಪನಿಗಳು ಹೇಗೆ ಇಷ್ಟು ದೊಡ್ಡ ಸಂಪತ್ತು ಪಡೆಯಿತು. ಒಬ್ಬ ವ್ಯಕ್ತಿಗಾಗಿ ನೀವು ಅಧಿವೇಶನ ಸಮಯ ಹಾಳು ಮಾಡಲು ಸಿದ್ಧರಿದ್ದೀರಾ? ಎಂದು ಪ್ರಶ್ನಿಸಿದರು.

ಇನ್ನು 80 ಸಾವಿರ ಕೋಟಿ ರೂಪಾಯಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದು, ಇದರಲ್ಲಿ ಸಾರ್ವಜನಿಕರ ಹಣ ಸೇರಿದೆ. ಇದು ಸಾರ್ವಜನಿಕ ಚರ್ಚೆ ಆಗಬೇಕಲ್ಲವೇ? ಕಳೆದ ಮೂರು ದಿನಗಳಿಂದ ಸದನದಲ್ಲಿ ಈ ವಿಚಾರ ಚರ್ಚೆ ಮಾಡಲು ಸಿದ್ಧರಿಲ್ಲ. ಇವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಂಡವಾಳಶಾಹಿಗಳಿಗೆ ನೆರವು ನೀಡುವುದು ಮಾತ್ರವಲ್ಲ ಅವರನ್ನು ರಕ್ಷಣೆ ಮಾಡಲು ಸಂಸತ್ತನ್ನು ಬಳಸಿಕೊಳ್ಳುತ್ತಿದ್ದಾರೆ. ಮಾತೆತ್ತಿದರೆ ದೇಶಭಕ್ತಿ ಬಗ್ಗೆ ಮಾತನಾಡುವ ಬಿಜೆಪಿ ಅವರಿಗೆ ನಿಜವಾದ ದೇಶಭಕ್ತಿ ಇದ್ದರೆ, ಅದಾನಿ ಕಂಪನಿಯಲ್ಲಿ ಹೂಡಿಕೆಯಾಗಿರುವ ದೇಶದ 28 ಕೋಟಿ ಜನರ ಹಣ ಹೇಗೆ ರಕ್ಷಣೆ ಮಾಡುತ್ತೀರಿ? ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

ಹಿಂಡನ್ ಬರ್ಗ್ ರಿಸರ್ಚ್‌ನಿಂದ ಸಾಕಷ್ಟು ತನಿಖಾ ವರದಿ: ಚಂದ್ರಶೇಖರ್

‘ಹಿಂಡನ್ ಬರ್ಗ್ ರಿಸರ್ಚ್‌ ಕಂಪನಿ ಸಾಕಷ್ಟು ತನಿಖಾ ವರದಿಯನ್ನು ನೀಡಿದೆ. 2008ರಲ್ಲಿ ಈ ಕಂಪನಿ ಆರಂಭವಾಗಿದ್ದು, ಇವರು ಷೇರುಪೇಟೆ ಹಾಗೂ ಕಂಪನಿಗಳಲ್ಲಿ ಅಕ್ರಮದ ಬಗ್ಗೆ ತನಿಖೆ ಮಾಡಿ ವರದಿ ನೀಡಲಾಗುತ್ತದೆ. ಈ ಸಂಸ್ಥೆ ಅದಾನಿ ಅವರ ಕಂಪನಿಗೂ ಮುನ್ನ ಒಂದೆರಡು ಕಂಪನಿ ಬಗ್ಗೆ ತನಿಖೆ ಮಾಡಿದೆ. ನಿಕಾಲ್ ಎಂಬ ಕಂಪನಿ ಬಗ್ಗೆ ವರದಿ ಪ್ರಕಟಿಸಿತ್ತು. ಈ ಕಂಪನಿ ಎಲೆಕ್ಟ್ರಿಕ್ ವಾಹನ ನಿರ್ಮಾಣ ಮಾಡುತ್ತೇವೆ. ಕೇವಲ ಸಣ್ಣ ವಾಹನ ಮಾತ್ರವಲ್ಲ ದೊಡ್ಡ ವಾಹನ ತಯಾರಿಸುತ್ತೇವೆ ಎಂದು ಹೇಳಿತ್ತು. ಹೀಗಾಗಿ ಹಿಂಡನ್ ಬರ್ಗ್ ಈ ಕಂಪನಿ ಬಗ್ಗೆ ತನಿಖೆ ಮಾಡಿದ ನಂತರ ಕಂಪನಿಯವರು ತಪ್ಪಿತಸ್ಥರೆಂದು ತೀರ್ಮಾನವಾಗಿ ಜೈಲಿಗೆ ಹೋಗಿದ್ದರು ಎಂದು ಬಿ.ಕೆ. ಚಂದ್ರಶೇಖರ್‌ ಹೇಳಿದರು.

ಇದನ್ನೂ ಓದಿ: Prajadhwani : ಕಾಂಗ್ರೆಸ್‌ನಲ್ಲಿ ಭಿನ್ನಮತ ಒಪ್ಪಿಕೊಂಡ ಮುನಿಯಪ್ಪ, ರಾಜಕೀಯವಾಗಿ ಕೊಂದೇಬಿಟ್ರು ಎಂದ ಸುಧಾಕರ್‌

ಬಿಬಿಸಿ ಪ್ರಕಟಿಸಿದ ಸಾಕ್ಷ್ಯಚಿತ್ರದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯವರು ತೀವ್ರ ವಾಗ್ದಾಳಿ ನಡೆಸಿ, ದೇಶದ ಮೇಲೆ ಹಾಗೂ ಪ್ರಧಾನಿ ಮೇಲಿನ ದಾಳಿ ಎಂದು ಬಣ್ಣಿಸಿತ್ತು. ಇದೊಂದು ಬೇಜವಾಬ್ದಾರಿ ಹೇಳಿಕೆಯಾಗಿದೆ. ಗೌತಮ್ ಅದಾನಿ ಅವರನ್ನು ನಮ್ಮ ಮನೆಯಲ್ಲಿ ಹುಟ್ಟಿದ ಮಗುವನ್ನು ಹೇಗೆ ಮುದ್ದಿನಿಂದ ಬೆಳೆಸುತ್ತಾರೋ ಆ ರೀತಿ ಅವರನ್ನು ಮೋದಿ ಬೆಳೆಸಿದ್ದಾರೆ. ಇದರ ಫಲಿತಾಂಶ ಏನು ಎಂಬುದನ್ನು ಈಗ ನೋಡಬೇಕಾಗಿದೆ ಎಂದರು.

ಮೋದಿ ಅವರು ಆರಂಭದಿಂದಲೂ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅವರಿಗೆ ಕಡಿಮೆ ದರದಲ್ಲಿ ಭೂಮಿ, ಸಾಲ ನೀಡುತ್ತಾ ಬಂದಿದ್ದಾರೆ. ಆದರೆ, 1990ರ ನಂತರ ಈ ಪರಿಸ್ಥಿತಿ ಮತ್ತಷ್ಟು ಬದಲಾಯಿತು. ಮೋದಿ ಅವರು ರಾಜಕಾರಣ ಮತ್ತು ಕೈಗಾರಿಕೋದ್ಯಮಿಗಳ ನಡುವಣ ಸಂಬಂಧವನ್ನು ತೀರಾ ಹತ್ತಿರಕ್ಕೆ ತಂದರು. ಕೈಗಾರಿಕೋದ್ಯಮಿಗಳಿಗೆ ನೀಡುವ ನೆರವಿನ ಚೌಕಟ್ಟನ್ನು ಮೋದಿ ದಾಟಿದರು. ಪರಿಣಾಮ ಮೋದಿ ಅವರ ನೇತೃತ್ವದ ಗುಜರಾತಿನ ಸರ್ಕಾರ 1999ರ ನಂತರ ಅಲ್ಲಿ 1 ಚದರ ಕಿ.ಮೀಗೆ 10 ಸಾವಿರ ರೂ ಮೌಲ್ಯವಿದ್ದರೂ ಅದನ್ನು ಕೇವಲ 900 ರೂ ನಂತೆ ಟಾಟಾ ಅವರಿಗೆ ಒಟ್ಟು 1100 ಎಕರೆಯನ್ನು ನೀಡಿದರು. ಈ ಹಣವನ್ನು ಕಂತಿನಲ್ಲಿ ಪಾವತಿಸುವಂತೆ ತಿಳಿಸಿದರು. 20 ಕೋಟಿಯಷ್ಟು ಸ್ಟಾಂಪ್ ಡ್ಯೂಟಿ ಮನ್ನಾ ಮಾಡಿದರು. ಮೌಲ್ಯಾಧಾರಿತ ತೆರಿಗೆಯನ್ನು ಮುಂದೂಡಿದರು. ಅಲ್ಲದೆ ಗುಜರಾತ್ ಸರ್ಕಾರ 2900 ಕೋಟಿ ಮೌಲ್ಯದ ಉದ್ಯಮಕ್ಕೆ 10 ಸಾವಿರ ಕೋಟಿ ಸಾಲ ನೀಡಿದ್ದರು. ಅರಣ್ಯ ಭೂಮಿಯನ್ನು ಕೊಟ್ಟರು. 2013ರಲ್ಲಿ ಸಿಎಜಿ ವರದಿಯಲ್ಲಿ 15 ಸಾವಿರ ಆಡಿಟ್ ಪ್ರಶ್ನೆಗಳನ್ನು ಗುಜರಾತ್ ಸರ್ಕಾರಕ್ಕೆ ನೀಡಲಾಗಿತ್ತು. ಇದಕ್ಕೆ ಆ ಸರ್ಕಾರ ಸರಿಯಾದ ಉತ್ತರ ನೀಡಲಿಲ್ಲ. ಇದು ಗುಜರಾತ್ ಮಾಡೆಲ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಅದಾನಿ ಅವರು 2013ರ ಸೆಪ್ಟೆಂಬರ್ ವೇಳೆಗೆ ಅದಾನಿ ಅವರ ಸಂಪತ್ತು ಅಂಬಾನಿ ಸಂಪತ್ತಿನಷ್ಟಿತ್ತು. ನಂತರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಒಂದು ವರ್ಷದಲ್ಲಿ 2014ರ ಸೆಪ್ಟೆಂಬರ್ ಅವಧಿಗೆ ಹೆಚ್ಚಾಯಿತು. ಮೋದಿ ಅವರು ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದ ತಕ್ಷಣವೇ ಅದಾನಿ ಗ್ರೂಪ್ ಷೇರುಗಳು ಗಗನಕ್ಕೇರಿತು. 60 ಸಾವಿರ ಕೋಟಿಗೆ ಸಂಪತ್ತು ಏರಿತ್ತು. ಇವರನ್ನು ರಾತ್ರೋರಾತ್ರಿ ವ್ಯವಹಾರ ಮಾಡುವವರು ಎನ್ನಬಹುದು. ಇವರ ಸಂಪತ್ತು ಹೆಚ್ಚಳಕ್ಕೆ ಮೋದಿ ಹಾಗೂ ಅದಾನಿ ಅವರ ಸಂಬಂಧವೇ ಕಾರಣ ಎಂದು ಮಾಧ್ಯಮಗಳು ತಿಳಿಸಿದವು ಎಂದು ಚಂದ್ರಶೇಖರ್‌ ಹೇಳಿದರು.

ಇದನ್ನೂ ಓದಿ: Karnataka Election | ಬಿಜೆಪಿಯವರೇ ನಳಿನ್‌ ಅವರನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟಿದ್ದಾರೆ ಎಂದ ಬಿ.ಕೆ. ಹರಿಪ್ರಸಾದ್‌

ಬಂಡವಾಳಶಾಹಿಗಳ ಪರವಾಗಿ ಸರ್ಕಾರ ನಿಲ್ಲುವುದು ಅಪಾಯಕಾರಿ. ಹೀಗಾಗಿ ಈ ವಿಚಾರದಲ್ಲಿ ಸೆಬಿ ಮೂಲಕ ತನಿಖೆ ಮಾಡಿಸಬೇಕು ಎಂದು ನಮ್ಮ ನಾಯಕರು ಹೇಳಿದ್ದಾರೆ. ನನ್ನ ಪ್ರಕಾರ ನಿವೃತ್ತ ನ್ಯಾಯಾಧೀಶರು, ಪ್ರತಿಷ್ಠಿತ ಕಾರ್ಪೋರೇಟ್, ಪ್ರಭಾವಿ ವ್ಯಕ್ತಿಗಳನ್ನೊಳಗೊಂಡ ಸಮಿತಿ ರಚಿಸಿ ತನಿಖೆಗೆ ಒಳಪಡಿಸಬೇಕು. ಈ ವಿಚಾರವಾಗಿ ಎಲ್ಲ ವಿರೋಧ ಪಕ್ಷಗಳು ಜಂಟಿ ಸದನ ಸಮಿತಿ ಮೂಲಕ ಮಾಡಿಸಬೇಕು ಎಂದು ಆಗ್ರಹಿಸಿದರು.

Exit mobile version