ಬೆಂಗಳೂರು: ನಮ್ಮನ್ನು ಕಾಡುವ ಅನಾರೋಗ್ಯ ಸಮಸ್ಯೆಯು ಒಮ್ಮೊಮ್ಮೆ ಆತ್ಮಸ್ಥೈರ್ಯವನ್ನೇ ಕುಗ್ಗಿಸಿ, ಸಾವಿನ ಕದ ತಟ್ಟುವಂತೆ ಮಾಡಿ ಬಿಡುತ್ತದೆ. ಮಾರಕ ಕ್ಯಾನ್ಸರ್ ರೋಗದಿಂದ (Cancer disease) ಬಳಲುತ್ತಿದ್ದ ಬೆಂಗಳೂರಿನ ಸಂಚಾರಿ ಮುಖ್ಯಪೇದೆಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶೋಕನಗರ ಸಂಚಾರಿ ಪೊಲೀಸ್ ಠಾಣೆಯ (Ashoknagar Traffic Police) ಹೆಡ್ ಕಾನ್ಸ್‌ಟೇಬಲ್ (Head Constable) ಕುಮಾರ್ ಮೃತ ದುರ್ದೈವಿ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕುಮಾರ್ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಇತ್ತೀಚೆಗೆ ಕುಮಾರ್ ಅವರ ಮಗಳಿಗೂ ಕ್ಯಾನ್ಸರ್ ರೋಗದ ಲಕ್ಷಣಗಳು ಇರುವುದು ತಿಳಿದು ಬಂದಿತ್ತು. ನನ್ನಿಂದಲೇ ನನ್ನ ಮಗಳಿಗೂ ಈ ಕಾಯಿಲೆ ಹರಡಿದೆ ಎಂದುಕೊಂಡು ಅವರು ದುಃಖಿಸಿದ್ದರು. ಮಾನಸಿಕ ಖಿನ್ನತೆಗೆ ಜಾರಿದ್ದ ಅವರು ಮನನೊಂದಿದ್ದರು.
ತಾವು ಚಿಕಿತ್ಸೆ ಪಡೆಯುತ್ತಾ ಜತೆಯಲ್ಲಿ ಮಗಳಿಗೆ ಕ್ಯಾನ್ಸರ್ ಟ್ರೀಟ್ಮೆಂಟ್ ಕೊಡಿಸಿದ್ದರು. ಕುಮಾರ್ ಮಗಳು ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದ್ದರು. ಆದರೆ ತನ್ನಿಂದಲೇ ಮಗಳಿಗೆ ಕ್ಯಾನ್ಸರ್ ಬಂದಿದೆ ಎಂದು ಭಾವಿಸಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೇರಿ ಸರ್ಕಲ್ ಬಳಿಯ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದ ಕುಮಾರ್, ಬುಧವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Murder Case: ಕುಡಿದ ನಶೆಯಲ್ಲಿ ತಂದೆ ತಲೆ ಮೇಲೆ ಒರಳು ಕಲ್ಲು ಎತ್ತಿಹಾಕಿದ ಪಾಪಿ ಮಗ
ಸಾವಿನಲ್ಲೂ ಸಾರ್ಥಕತೆ
ಕುಟುಂಬ ಸದಸ್ಯರು ಕುಮಾರ್ ಅವರ ಅಗಲಿಕೆಯ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕುಮಾರ್ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ. ಸದ್ಯ ಮೃತದೇಹವನ್ನು ಹುಟ್ಟುರೂ ಚನ್ನಗಿರಿಗೆ ತೆಗೆದುಕೊಂಡು ಹೋಗಲು ಕುಟುಂಬ ಸದಸ್ಯರು ಸಿದ್ಧತೆ ನಡೆಸುತ್ತಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ