ಹಾವೇರಿ: ಮುಂಬರುವ ಚುನಾವಣೆಗೆ ಎಲ್ಲ ಅಭ್ಯರ್ಥಿಗಳನ್ನು ಒಂದೆಡೆ ಸೇರಿಸಿ ಪ್ರಮಾಣ ವಚನ ಮಾಡಿಸಬೇಕು. ಕಂಠೀರವ ಕ್ರೀಡಾಂಗಣದಲ್ಲಿ ಅವರೆಲರನ್ನು ನಿಲ್ಲಿಸಿ ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಪ್ರಮಾಣ ಮಾಡಿಸಬೇಕು. ರಾಜ್ಯಪಾಲರು ಈ ಪ್ರಮಾಣ ವಚನ ಬೋಧನೆ ಮಾಡಬೇಕು ಎಂದು ಸಿರಿಗೆರೆ ತರಳಬಾಳು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಗುರು ಶಿವಯೋಗಿ ಸಿದ್ಧರಾಮೇಶ್ವರರ 851ನೇ ಜಯಂತಿಯಲ್ಲಿ (Siddarameshwara Jayanti) ಮಾತನಾಡಿದ ಅವರು, ಚುನಾವಣೆ ವೇಳೆ ಯಾವುದೇ ಭ್ರಷ್ಟಾಚಾರ ಮಾಡದೆ, ನೀತಿ ಸಂಹಿತೆಯ ಪ್ರಕಾರ ಚುನಾವಣೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಒಬ್ಬರಿಗೊಬ್ಬರು ತೆಗಳುವ ಕಾರ್ಯ ಮಾಡುವುದಿಲ್ಲ ಅಂತ ಹೇಳಬೇಕು. ಈ ಪ್ರಮಾಣ ವಚನವನ್ನು ಚುನಾವಣೆಗೆ ಮೊದಲು ಮಾಡಬೇಕು ಎಂದು ತಿಳಿಸಿದರು.
ಅಭ್ಯರ್ಥಿಗಳಿಗೆ ನಾವು ಗೆದ್ದ ಮೇಲೆ ಭ್ರಷ್ಟಾಚಾರ ಮಾಡಲ್ಲ, ರೆಸಾರ್ಟ್ ರಾಜಕೀಯ ಮಾಡಲ್ಲ, ವ್ಯಕ್ತಿ ನಿಂದನೆ ಮಾಡಲ್ಲ ಎಂದು ಬೋಧನೆ ಮಾಡಬೇಕು. ಈ ವ್ಯವಸ್ಥೆ ನಮ್ಮಲ್ಲಿ ಆಗಬೇಕು ಎಂದರು. ಇದೇ ವೇಳೆ ಪಕ್ಕದಲ್ಲಿಯೇ ಕೂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಇದಕ್ಕೇನಂತಿಯಪ್ಪ ಎಂದು ಕೇಳಿದ ಶ್ರೀಗಳು, ನೀನು ಕೂಡ ಕ್ರೀಡಾಂಗಣಕ್ಕೆ ಬರ್ತಿಯಲ್ಲಪ್ಪಾ ಎಂದು ಕೇಳಿದರು.
ಇದನ್ನೂ ಓದಿ | ಮೊಗಸಾಲೆ ಅಂಕಣ: ಅಂದು ಡಿಸಿಎಂ ಬೇಡ; ಇಂದು ಮೂವರು ಡಿಸಿಎಂ ಬೇಕೆಂಬ ಕೂಗು!
ಬೆಂಬಲ ಬೆಲೆಗಾಗಿ ಹೋರಾಟ: ಬಿಎಸ್‌ವೈ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತ ನೆಮ್ಮದಿಯಿಂದ ಬದುಕಲಾರದ ಸಂದರ್ಭವಿದೆ. ಉತ್ತಮ ಬೆಳೆ ಬೆಳೆದು ನೆಮ್ಮದಿಯ ಜೀವನ ಅವನದಾಗಿಲ್ಲ ಎಂಬ ನೋವು ಇದೆ. ರೈತರಿಗೆ ಸಿಗಬೇಕಾದ ಬೆಂಬಲ ಬೆಲೆಗಾಗಿ ರಾಜ್ಯದ ಉದ್ದಗಲಕ್ಕೆ ನಾನು ಪ್ರವಾಸ ಹೊರಟಿದ್ದೇನೆ. ದಿನಕ್ಕೆ ಎರಡು ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ ಎಂದರು.
ಶಿವಯೋಗಿ ಸಿದ್ದರಾಮೇಶ್ವರರು ಪವಾಡ ಪುರುಷರು. ಮಳೆಗಾಗಿ ಪ್ರಾರ್ಥನೆ ಮಾಡಿದರೆ ಮಳೆ ಬರುತ್ತೆ ಅನ್ನೋ ಪ್ರತೀತಿ ಇದೆ. 4 ಸಾವಿರ ಕೆರೆಗಳನ್ನು ಸಿದ್ದರಾಮ ಶ್ರೀಗಳು ಕಟ್ಟಿದರೂ ಅನ್ನೋ ಹೆಸರಿದೆ. ಶ್ರೀಗಳು ಕೆರೆಕಟ್ಟೆಗಳು ಹಾಗೂ ಅನ್ನದಾಸೋಹ ಮಾಡಿ ಈ ನೆಲವನ್ನು ಪಾವನಗೊಳಿಸಿದ್ದಾರೆ ಎಂದು ತಿಳಿಸಿದರು.
ಕೋಟ್ಯಂತರ ಜನರ ಆಸೆಯಂತೆ ಜ.22 ರಂದು ರಾಮಮಂದಿರ ಉದ್ಘಾಟನೆ ಆಗಲಿದೆ. ರಾಮನಿಗೆ ಹಾಗೂ ಕರ್ನಾಟಕಕ್ಕೂ ಒಂದು ಸಂಬಂಧವಿದೆ. ರಾಮಾಯಣ ಕಾಲದಿಂದಲೂ ಸಹ ಕರುನಾಡು ಧಾರ್ಮಿಕತೆ ರೂಢಿಸಿಕೊಂಡು ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಮಂದಿರ ನಿರ್ಮಾಣ ವಿರೋಧ ಮಾಡುವುದು ಸರಿಯಲ್ಲ. ವಿದೇಶಗಳು ಭಯೋತ್ಪಾದನೆಯಿಂದ ನಲುಗುತ್ತಿವೆ, ಆದರೆ, ಮೋದಿ ನೇತೃತ್ವದಲ್ಲಿ ದೇಶ ಉತ್ತಮ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಶಿಕ್ಷಣ ಜತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು: ವಿಜಯೇಂದ್ರ
ಬಿ.ವೈ. ವಿಜಯೇಂದ್ರ ಮಾತನಾಡಿ, ನೊಳಂಬ ಲಿಂಗಾಯತ ಸಮಾಜ ಒಗ್ಗಟಾಗಿರಬೇಕು. ಸಮಾಜ ಒಗ್ಗಟ್ಟಾಗಿದ್ದರಿಂದ ರಾಜಕೀಯ ಶಕ್ತಿ ಸಿಕ್ಕಿದೆ. ಆದರೆ, ಕೆಲವರು ರಾಜಕೀಯವಾಗಿ ಒಡೆದು ಆಳುವ ಯತ್ನ ಮಾಡುತ್ತಿದ್ದಾರೆ. ದೇಶವನ್ನು 2042ರ ವೇಳೆಗೆ ಎಲ್ಲ ಕ್ಷೇತ್ರದಲ್ಲಿ ಶಕ್ತಿಶಾಲಿಯನ್ನಾಗಿಸಬೇಕು. ಇದಕ್ಕಾಗಿ ಯುವಜನತೆ ಶ್ರಮಿಸಬೇಕು. ಆದರೆ, ಯುವಕರು ನಿರಾಸಕ್ತಿ ಹೊಂದಿರುವುದು ಕಂಡು ಬರುತ್ತಿದೆ. ತಂದೆ-ತಾಯಿ ಕಷ್ಟ ಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಆದರೆ, ಸಾಧನೆ ಮಾಡಿದ ಬಳಿಕ ತಂದೆ ತಾಯಿಯರನ್ನು ಮರೆಯುತ್ತಿದ್ದಾರೆ. ಯುವಕರು ಶಿಕ್ಷಣ ಜತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು. ಯುವಕರು ಸರಿದಾರಿಯಲ್ಲಿ ತೆಗೆದುಕೊಂಡು ಹೋಗದಿದ್ದರೆ ಸಮಾಜ ಉಳಿಯಲ್ಲ. ಭಗವಂತ ಕೊಟ್ಟ ಸಮಯದಲ್ಲಿ ದ್ವೇಷ ಬಿಟ್ಟು, ಪ್ರೀತಿ ಹಂಚೋಣ ಎಂದು ಹೇಳಿದರು.
ಇದನ್ನೂ ಓದಿ | Ram Mandir: ರಾಜ್ಯಾದ್ಯಂತ ಬಿಜೆಪಿ ಸ್ವಚ್ಛತೀರ್ಥ ಅಭಿಯಾನ; ಬಿ.ವೈ. ವಿಜಯೇಂದ್ರ ಸೇರಿ ಹಲವರಿಂದ ದೇಗುಲಗಳ ಸ್ವಚ್ಛತೆ
ಕೆರೆಗಳಿಗೆ ನೀರು ತುಂಬಿಸಿದ್ದೇ ಎಂದ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನೀರಾವರಿ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸಿದ್ದೇ ಯಡಿಯೂರಪ್ಪ. ವಿಜಯಪುರದಿಂದ ಯಾದಗಿರಿವರೆಗೂ 1 ಸಾವಿರ ಕೆರೆಗಳನ್ನು ತುಂಬಿಸಿದ್ದಾರೆ. ಸಣ್ಣ ಕೆರೆಗಳನ್ನು ಸಣ್ಣ ನೀರಾವರಿ ಮೂಲಕ ತುಂಬಿಸಬಹುದು ಎಂದು ತೋರಿಸಿದ್ದು ಮಾಧುಸ್ವಾಮಿ. ಯಡಿಯೂರಪ್ಪರ ಕಾಲದಲ್ಲಿ ನೀರಾವರಿ ಮಂತ್ರಿಯಾಗಿದ್ದು ನನ್ನ ಪುಣ್ಯ. ಕೃಷಿಯನ್ನ ಉಳಿಸಬೇಕೆಂದರೆ ಜಲಸಂಪನ್ಮೂಲ ಬಳಸಬೇಕು. ಇಂದು ಬರಗಾಲ ಇದೆ, ರೈತರು ಸಂಕಷ್ಟದಲ್ಲಿದ್ದಾರೆ. ಮೇವಿನ ಕೊರತೆ, ಹಾಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತೆ. ಕೆರೆ ತುಂಬಿದರೆ ಮಾತ್ರ ಹಸಿರು ಕಾಣುತ್ತದೆ. ನಮ್ಮ ಸರ್ಕಾರದಲ್ಲಿ ನೊಳಂಬ ಅಭಿವೃದ್ದಿ ನಿಗಮ ರಚಿಸಿ ಆದೇಶ ಮಾಡಿದ್ದೆವು. ಅದು ಮುಂದಿನ ದಿನಗಳಲ್ಲಿ ಬರಲಿದೆ. ನಿಗಮವು ಸಮುದಾಯದ ಜನರಿಗೆ ಉತ್ತಮ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.