ಬೆಂಗಳೂರು, ಕರ್ನಾಟಕ: ಸದಾ ತಮ್ಮ ಟ್ವೀಟ್‌ಗಳ ಮೂಲಕ ವಿವಾದವನ್ನು ಸೃಷ್ಟಿಸುವ ನಟ ಚೇತನ್ ಅಹಿಂಸಾ (Chetan Ahimsa) ಅವರು ಈಗ ಮ್ತತೊಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಮಾದಕ ವಸ್ತು ಎಂದು ಗುರುತಿಸಲಾಗಿರುವ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಬೇಕೆಂದು (Cannabis Cultivation) ಅವರು ಹೇಳಿದ್ದಾರೆ. ಅವರ ಈ ಟ್ವೀಟ್‌ಗೆ ವ್ಯಾಪಕ ವಿರೋಧ ಕೇಳಿ ಬಂದಿದೆ. ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದೇರ್ ಸುಖು ಅವರು ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಚಿತ್ತ ಹರಿಸಿದ್ದಾರೆ. ಈ ಸುದ್ದಿಯನ್ನು ಬಳಸಿಕೊಂಡು ಅವರು ಗಾಂಜಾ ಕೃಷಿಗೆ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದೇರ್ ಸುಖು ಅವರು ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವ ಯೋಜನೆಯನ್ನು ಹಾಕಿಗೊಂಡಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ. ಇದು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ರೋಗಿಗಳಿಗೆ ಔಷಧೀಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುದನ್ನು ಐದು ಸದಸ್ಯ ಸಮಿತಿಯು ಅಧ್ಯಯನ ಮಾಡುತ್ತದೆ. ಹಿಮಾಚಲ ಪ್ರದೇಶದ ರೀತಿಯಲ್ಲೇ ಉತ್ತರಾಖಂಡ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳೂ ಈ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಯೋಚಿಸಬೇಕೆಂದು ನಟ ಚೇತನ್ ಅಹಿಂಸಾ ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ನಟ ಚೇತನ್ ಅಹಿಂಸಾ ಅವರ ಟ್ವೀಟ್
ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಬೇಕೆಂಬ ಬೇಡಿಕೆ ಮೊದಲಿನಿಂದಲೂ ಇದೆ. ಅಲ್ಲದೇ, ಈ ಬಗ್ಗೆ ಹಲವು ಸೆಲೆಬ್ರಿಟಿಗಳು ಆಗಾಗ ಧ್ವನಿ ಎತ್ತುತ್ತಾರೆ. ಆದರೆ, ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವುದರಿಂದಾಗುವ ಲಾಭಗಳಿಗಿಂತಲೂ ಹಾನಿಗಳೇ ಹೆಚ್ಚು. ಹಾಗಾಗಿ, ಭಾರತದಲ್ಲಿ ಈವರೆಗೂ ಯಾವುದೇ ರಾಜ್ಯದಲ್ಲಿ ಗಾಂಜಾ ಕೃಷಿಗೆ ಮಾನ್ಯತೆ ಇಲ್ಲ. ಯಾರಾದರೂ ಗಾಂಜಾ ಬೆಳೆದರೆ ಅದು ಕಾನೂನು ಪ್ರಕಾರ ಅಪರಾಧ. ಆ ಕಾರಣಕ್ಕಾಗಿ ಶಿಕ್ಷೆ ಕೂಡ ಆಗುತ್ತದೆ. ಆದರೆ, ಈಗ ನಟ ಚೇತನ್ ಅವರ ಟ್ವೀಟ್ ಗಾಂಜಾ ಕೃಷಿಗೆ ಮಾನ್ಯತೆ ನೀಡಬೇಕಾ, ಬೇಡ್ವಾ ಎಂಬ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಚೇತನ್ ಅವರ ಹೇಳಿಕೆಯನ್ನು ಹಲವರು ವಿರೋಧಿಸಿದ್ದಾರೆ.
ಇದನ್ನೂ ಓದಿ: Actor Chetan Ahimsa : ಹಿಂದು ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್; ನಟ ಚೇತನ್ ಅಹಿಂಸಾ ಅರೆಸ್ಟ್
ಒಂದೊಮ್ಮೆ ಗಾಂಜಾ ಕೃಷಿಗೆ ಅನುಮತಿ ನೀಡಿದರೆ ಅದರಿಂದ ಆಗುವ ದುಷ್ಪರಿಣಾಮಗಳೇ ಹೆಚ್ಚು. ಯುವಕರ ನಶೆ ಗುಂಗಿನಲ್ಲೇ ಇರುತ್ತಾರೆ. ಈಗಾಗಲೇ, ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಾದಕ ವಸ್ತುಗಳಿಂದಾಗುತ್ತಿರುವ ದುಷ್ಪರಿಣಾಮಗಳು ಕಣ್ಣಮುಂದಿವೆ. ಹೀಗಿದ್ದೂ, ಚೇತನ್ ಅವರು ಗಾಂಜಾದಂಥ ಅಮಲು ತರುವ ಪದಾರ್ಥಗಳನ್ನು ಬೆಳೆಯಲು ಅನುಮತಿಸಬೇಕೆಂದು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.