ಬೆಳಗಾವಿ: ಸಚಿವ ಅಶ್ವತ್ಥ ನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ನೀವು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಹತ್ಯೆ ಮಾಡಲು ಬಯಸಿದ್ದರೆ ಜಾಗ ಹೇಳಿ, ನಾವು ಅವರನ್ನು ಕರೆದುಕೊಂಡು ಬರುತ್ತೇವೆ. ಅವರನ್ನು ಹತ್ಯೆ ಮಾಡಿಬಿಡಿ ನೋಡೋಣ? ಒಬ್ಬ ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡುವುದರಿಂದ ಕಾಂಗ್ರೆಸ್ ಅನ್ನು ತಡೆಯೋಕೆ ಆಗುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಗುಡುಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಚುನಾವಣಾ (Karnataka Election 2023) ಕಾವು ಜೋರಾಗುತ್ತಿದೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ತಾಕತ್ತಿದ್ದರೆ ಸ್ಥಳ ಹೇಳಲಿ, ಯಾವ ಮೈದಾನಕ್ಕೆ ಕರೆದುಕೊಂಡು ಬರಬೇಕು ಎಂಬುದನ್ನು ಹೇಳಿದರೆ ನಾವು ನಮ್ಮ ನಾಯಕರನ್ನು ಕರೆದುಕೊಂಡು ಬರುತ್ತೇವೆ. ಅಲ್ಲಿ ಅವರ ಹತ್ಯೆಯನ್ನು ಮಾಡಲಿ ನೋಡೋಣ. ಹತ್ಯೆ ಮಾಡುವುದರಿಂದ ಅಭಿವೃದ್ಧಿ ನಿಲ್ಲುವುದಿಲ್ಲ. ನಾವು ಹಿಂಸೆಗೆ ಹೆದರಲ್ಲ, ನಾವು ತ್ಯಾಗ ಮಾಡಿ ದೇಶವನ್ನು ನಡೆಸಿದ್ದೇವೆ. ಒಬ್ಬ ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಿ ಕಾಂಗ್ರೆಸ್ ಅನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸಿಎಂ ಬೊಮ್ಮಾಯಿ, ಕಟೀಲ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರ ಕುರಿತು ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದಾರೆ. ಸೋತವರು ಮಾತ್ರ ಹಿಂಸೆಯ ಬಗ್ಗೆ ಮಾತನಾಡುತ್ತಾರೆ. ಈ ಚುನಾವಣೆಯಲ್ಲಿ ಬಿಜೆಪಿಯವರು ಸೋಲುವವರಿದ್ದಾರೆ. ಹೀಗಾಗಿ ಹತ್ಯೆ ಬಗ್ಗೆ ಮಾತುಗಳು ಬರುತ್ತಿವೆ. ಮುಂದೆಯೂ ಸಹ ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ ಅವರನ್ನು ಹತ್ಯೆ ಮಾಡಿ ಎಂಬೆಲ್ಲ ಮಾತುಗಳು ಅವರಿಂದ ಕೇಳಿಬರುತ್ತವೆ. ಮಹಾತ್ಮ ಗಾಂಧಿಯವರನ್ನು ಗೋಡ್ಸೆ ಗುಂಡು ಹಾರಿಸಿ ಕೊಂದಿದ್ದಾನೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿ ಹಲವು ಕಾಂಗ್ರೆಸ್ ನಾಯಕರನ್ನು ಹತ್ಯೆ ಮಾಡಲಾಗಿದೆ. ಆದರೆ, ನಾವು ಇದಕ್ಕೆ ಹೆದರುವುದಿಲ್ಲ ಎಂದು ಹೇಳಿದ ಸುರ್ಜೇವಾಲ, ಕಾಂಗ್ರೆಸ್ ವತಿಯಿಂದ ಘೋಷಣೆಯಾಗಿರುವ ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರಂಟಿ ಕಾರ್ಯಕ್ರಮವನ್ನು ಪ್ರತಿ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಒಯ್ಯುತ್ತಾರೆ ಎಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ: Sindhuri Vs Roopa : ರೂಪಾಗೆ ಮಾನಸಿಕ ಕಾಯಿಲೆ, ನಾನು ಯಾರಿಗೆ ಫೋಟೊ ಕಳಿಸಿದ್ದೆ ಅಂತ ಹೇಳಲಿ: ರೋಹಿಣಿ ಸಿಂಧೂರಿ ತಿರುಗೇಟು
ಮಾರ್ಚ್ ಮೊದಲ ವಾರದಲ್ಲಿ ಟಿಕೆಟ್ ಘೋಷಣೆ- ಸತೀಶ್ ಜಾರಕಿಹೊಳಿ
ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯಿಂದ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಉಚಿತ ವಿದ್ಯುತ್, 2 ಸಾವಿರ ಯೋಜನೆ ಗ್ಯಾರಂಟಿಯನ್ನು ಕೊಟ್ಟಿದೆ. ರಾಜಕೀಯದಲ್ಲಿ ಸುಳ್ಳು ಹೇಳುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ನಂಬಿಕೆ ಹೋಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಕಾಂಗ್ರೆಸ್ ಪಕ್ಷದ ಭರವಸೆಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಕಾಂಗ್ರೆಸ್ ಪಕ್ಷದ ಇನ್ನೂ ಕೆಲವು ಗ್ಯಾರಂಟಿಗಳನ್ನು ಘೋಷಣೆ ಮಾಡಬೇಕಿದೆ. ಪ್ರಾಂತವಾರು, ಜಿಲ್ಲಾವಾರು ಪ್ರಣಾಳಿಕೆಯನ್ನು ಘೋಷಣೆ ಮಾಡಬೇಕಿದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಟಿಕೆಟ್ ಪಟ್ಟಿ ಘೋಷಣೆ ಮಾಡುತ್ತೇವೆ. ಮಾರ್ಚ್ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆ ಆಗಬಹುದು. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಒಟ್ಟಾಗಿ ಕೆಲಸ ಮಾಡಬೇಕು. ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಗೆಲವಿಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕರೆ ನೀಡಿದ್ದಾರೆ.