Site icon Vistara News

ಬಂಡವಾಳಶಾಹಿಯಿಂದಲೇ ಭಾರತದ ಅಭಿವೃದ್ಧಿ ಸಾಧ್ಯ! ಇನ್ಫಿ ಮೂರ್ತಿ ಅಭಿಪ್ರಾಯ

Narayana Murthy

Infosys founder Narayana Murthy says he starved for 120 hours straight during hitchhike in Europe 50 years ago

ಬೆಂಗಳೂರು: ಭಾರತದಂಥ ಬಡ ರಾಷ್ಟ್ರವು ಸಮೃದ್ಧಿ ರಾಷ್ಟ್ರವಾಗಬೇಕಾದರೆ ಬಂಡವಾಳಶಾಹಿಯೇ (capitalism) ಪರಿಹಾರವಾಗಿದೆ. ಹಾಗೆಯೇ ಯಾವುದನ್ನೂ ಉಚಿತವಾಗಿ ನೀಡಬಾರದು(Don’t give Free) ಎಂದು ಇನ್ಫೋಸಿಸ್ ಸಂಸ್ಥಾಪಕ (Infosys Founder), ಐಟಿ ಕ್ಷೇತ್ರದ ದಿಗ್ಗಜ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಅವರು ಹೇಳಿದ್ದಾರೆ. ಚುನಾವಣೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಉಚಿತ ಕೊಡುಗೆಗಳನ್ನು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಮೂರ್ತಿ ಅವರ ಹೇಳಿಕೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ. ಸರ್ಕಾರದಿಂದ ಉಚಿತ ಸೇವೆಗಳನ್ನು ಪಡೆದುಕೊಳ್ಳುವ ಜನರು ಸಮಾಜಕ್ಕೆ ಮತ್ತೆ ವಾಪಸ್ ಕೊಡುಗೆ ನೀಡಬೇಕು ಎಂದು ನಾರಾಯಣಮೂರ್ತಿ ಅವರು ಹೇಳಿದ್ದಾರೆ(Bengaluru Tech Summit).

ನೀವು ಆ ಸೇವೆಗಳನ್ನು ಒದಗಿಸಿದಾಗ, ನೀವು ಆ ಸಬ್ಸಿಡಿಗಳನ್ನು ಒದಗಿಸಿದಾಗ, ಅವರು ಏನನ್ನಾದರೂ ಮಾಡಲು ಸಿದ್ಧರಾಗಿರಬೇಕು. ಉದಾಹರಣೆಗೆ, ನಾನು ನಿಮಗೆ ಉಚಿತ ವಿದ್ಯುತ್ ನೀಡುತ್ತೇನೆ. ಆದರೆ, ಪ್ರಾಥಮಿಕ ಶಾಲೆಗಳು ಮತ್ತು ಮಧ್ಯಮ ಶಾಲೆಗಳಲ್ಲಿ ಶೇಕಡಾ 20 ರಷ್ಟು ಹಾಜರಾತಿಯನ್ನು ನಾವು ನೋಡಲು ಬಯಸುತ್ತೇವೆ. ಇದ ಸಾಧ್ಯವಾದರೆ ನಾವು ಉಚಿತ ವಿದ್ಯುತ್ ನೀಡುತ್ತೇವೆ ಎಂದು ಜನರಿಗೆ ಸರ್ಕಾರ ತಿಳಿಸಿ ಹೇಳಬೇಕು ಎಂದು ಮೂರ್ತಿ ಹೇಳಿದರು.

ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಎನ್ ಆರ್ ನಾರಾಯಣಮೂರ್ತಿ ಅವರು, ಯಾವುದನ್ನೂ ಉಚಿತವಾಗಿ ನೀಡಬಾರದು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ನಾಗರಿಕರ ಕೊಡುಗೆಯೂ ಇರಬೇಕು ಎಂದು ಅವರು ಹೇಳಿದರು.

ನಾನು ಸೇವೆಗಳನ್ನು ಒದಗಿಸುವುದರ ವಿರುದ್ಧ ಇಲ್ಲ. ನಾನು ಬಡತನ ಹಿನ್ನೆಲೆಯಿಂದ ಬಂದಿದ್ದರಿಂದ ನನಗೆ ಅರ್ಥವಾಗುತ್ತದೆ. ಆದರೆ, ಯಾರು ಸಬ್ಸಿಡಿಗಳನ್ನು ಪಡೆದುಕೊಳ್ಳುತ್ತಾರೋ ಅವರಿಂದ ವಾಪಸ್ ಕೊಡುಗೆಯನ್ನು ನಿರೀಕ್ಷಿಸಬೇಕಾಗುತ್ತದೆ. ಸಬ್ಸಿಡಿ ಪಡೆದುಕೊಳ್ಳುವವರ ಭವಿಷ್ಯ, ಮುಂದಿನ ತಲೆಮಾರು, ಅವರ ಮಕ್ಕಳು, ಮೊಮ್ಮಕ್ಕಳು ಉತ್ತಮ ಜೀವನಕ್ಕಾಗಿ ಇದು ಅಗತ್ಯ. ಅಂದರೆ, ಶಾಲೆಗಳ ಸುಧಾರಣೆ, ಹಾಜರಾತಿ ಹೆಚ್ಚಳಂಥ ಸಂಗತಿಗಳನ್ನು ಸೇರಿಸಬಹುದು ಎಂದು ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

ಅನಿಮೇಷನ್‌ ನೀತಿ ಪ್ರಕಟಿಸಿದ ಸರ್ಕಾರ; 30 ಸಾವಿರ ಉದ್ಯೋಗ ಸೃಷ್ಟಿ ಗುರಿ

ರಾಜ್ಯದಲ್ಲಿ ಮುಂದಿನ ಹಂತದ ತಂತ್ರಜ್ಞಾನ ನಾವೀನ್ಯತೆಯ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆಗಳನ್ನು ಉತ್ತೇಜಿಸಲು ಹೊಸ ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ (ಎವಿಜಿಸಿ-ಎಕ್ಸ್ಆರ್) ನೀತಿ ಮತ್ತು ಪರಿಷ್ಕೃತ ಜೈವಿಕ ತಂತ್ರಜ್ಞಾನ ನೀತಿಯನ್ನು ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ರಾಜ್ಯ ಸರ್ಕಾರ ಅನಾವರಣಗೊಳಿಸಿದ್ದು, ಇದರಿಂದ 2028ರ ವೇಳೆಗೆ ಎವಿಜಿಸಿ-ಎಕ್ಸ್ಆರ್ ಸಂಬಂಧಿತ ಕ್ಷೇತ್ರಗಳಲ್ಲಿ 30,000 ಉದ್ಯೋಗ ಸೃಷ್ಟಿ ಗುರಿಯನ್ನು ಹೊಂದಲಾಗಿದೆ.

26ನೇ ಬೆಂಗಳೂರು ಟೆಕ್ ಸಮ್ಮಿಟ್‌-2023ರಲ್ಲಿ ಎವಿಜಿಸಿ-ಎಕ್ಸ್ಆರ್ ಕರಡು ಮುನ್ನೋಟ ಮತ್ತು ಜೈವಿಕ ತಂತ್ರಜ್ಞಾನ ಕಾರ್ಯನೀತಿಯ ಪರಿಷ್ಕೃತ ಕರಡನ್ನು ಬಿಡುಗಡೆಗೊಳಿಸಲಾಗಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ತಂತ್ರಜ್ಞಾನ ಹಾಗೂ ಸೃಜನಶೀಲತೆಯನ್ನು ಗುರುತಿಸಿರುವ ನಾವು ಅನಿಮೇಷನ್, ವಿಷುವಲ್ ಎಫೆಕ್ಟ್, ಗೇಮಿಂಗ್, ಕಾಮಿಕ್ಸ್ (ಎವಿಜಿಸಿ) ಮಹತ್ವವನ್ನು ಅರಿತಿದ್ದೇವೆ. ಹೀಗಾಗಿ ಕರ್ನಾಟಕ ಸರ್ಕಾರವು ಎವಿಜಿಸಿ- ಏಕ್ಸ್ಆರ್ ನೀತಿಗೆ ಚಾಲನೆ ನೀಡಲು ರಾಜ್ಯ ಸಜ್ಜಾಗಿದ್ದು, ದೇಶದ ಎವಿಜಿಸಿ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ನಮಗಿರುವ ಬದ್ಧತೆ ಹಾಗೂ ಪ್ರಗತಿಶೀಲ ನಿಲುವಿಗೆ ಇದು ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಕರ್ನಾಟಕ ನಾವೀನ್ಯತಾ ಕ್ಷೇತ್ರವಷ್ಟೇ ಅಲ್ಲದೆ 2001ರಲ್ಲಿ ಬಯೋಟೆಕ್ ನೀತಿಯನ್ನು ರೂಪಿಸಿದ ಮುಂಚೂಣಿ ರಾಜ್ಯವೆನಿಸಿದೆ. ಬಯೋ ಟೆಕ್ನಾಲಜಿಯಲ್ಲೂ ಮುಂದಿರುವ ನಾವು ಟೆಕ್ ಸಮ್ಮಿಟ್ ಪರಿಷ್ಕೃತ ಬಯೋಟೆಕ್ ನೀತಿಯನ್ನು ಬಿಡುಗಡೆ ಮಾಡಿಲಿದ್ದೇವೆ ಎಂದು ಘೋಷಿಸಲು ಸಂತಸಪಡುತ್ತೇನೆ. ಹೂಡಿಕೆ, ಪ್ರತಿಭೆ ಹಾಗೂ ಅವಕಾಶಗಳನ್ನು ಆಕರ್ಷಿಸುವ ಇಕೋಸಿಸ್ಟಮ್ ಸೃಷ್ಟಿಸಲು ನಮ್ಮ ಸರ್ಕಾರ ಗಮನ ವಹಿಸಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Bengaluru Tech Summit: ದೇಶದ ಡಿಜಿಟಲ್ ಭವಿಷ್ಯ ಮುನ್ನಡೆಸುವ ಸಾಮರ್ಥ್ಯ ಕರ್ನಾಟಕಕ್ಕಿದೆ: ಸಿಎಂ ಸಿದ್ದರಾಮಯ್ಯ

Exit mobile version