Site icon Vistara News

Captain Pranjal: ವೀರಯೋಧ ಪ್ರಾಂಜಲ್‌ ಅಂತಿಮ ಯಾತ್ರೆ; ಕಣ್ಣೀರಿಟ್ಟ ಸಹಸ್ರಾರು ಮಂದಿ

Captain Pranjal

ಆನೇಕಲ್‌: ವೀರಪುತ್ರನನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದ್ದರೆ, ಇತ್ತ ಸಹಸ್ರಾರು ಜನರು ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು. ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕ್‌ ಮೂಲದ ಭಯೋತ್ಪಾದಕರ ಜತೆಗೆ ಗುಂಡಿನ ಕಾಳಗದಲ್ಲಿ (Rajouri Encounter) ಕರ್ನಾಟಕದ ವೀರ ಯೋಧ ಪ್ರಾಂಜಲ್‌ (Captain Pranjal) ಮೃತಪಟ್ಟಿದ್ದರು.

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ನಿಸರ್ಗ ಬಡಾವಣೆಯಲ್ಲಿರುವ ಪ್ರಾಂಜಲ್‌ ಮನೆಗೆ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಕುಟುಂಬಸ್ಥರು ಹಾಗೂ ಸಹಸ್ರಾರು ಸಾರ್ವಜನಿಕರು ಅಂತಿಮ ದರ್ಶನವನ್ನು ಪಡೆದರು. ದುಃಖದಲ್ಲಿ ಮುಳುಗಿದ ಕುಟುಂಬಸ್ಥರಿಗೆ ಸಂತೈಸಿದರು.

ಶಾಲಾ ಮಕ್ಕಳು, ವಯಸ್ಸಾದವರು ಕೂಡ ವೀರಯೋಧನ ಅಂತಿಮ ದರ್ಶನವನ್ನು ಪಡೆದುಕೊಂಡರು. ಪೊಲೀಸ್ ಇಲಾಖೆಯು ಹುತಾತ್ಮಯೋಧನಿಗೆ ಸರ್ಕಾರಿ ಗೌರವನ್ನು ಸಲ್ಲಿಸಿತು. ಬೆಂ.ಗ್ರಾಮಾಂತರದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಬೆಂಗಳೂರು ದಕ್ಷಿಣ ಜಿಲ್ಲಾ ಉಪವಿಭಾಗಧಿಕಾರಿ ರಜನಿಕಾಂತ್ ಉಪಸ್ಥಿತಿ ಇದ್ದರು.

30 ಕಿ.ಮೀ ಅಂತಿಮ ಯಾತ್ರೆ ಮೂಲಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ. ಜಿಗಣಿ ನಿವಾಸದಿಂದ ಕೂಡ್ಲು ವಿದ್ಯುತ್‌ ಚಿತಾಗಾರದವರೆಗೆ ಅಂತಿಮ ಯಾತ್ರೆ ನಡೆಯಲಿದೆ. ಸೇನಾ ವಾಹನದಲ್ಲಿ ಅಂತಿಮ ಯಾತ್ರೆ ಪ್ರಾರಂಭವಾಗಿದ್ದು, ದೇಶ ಪ್ರೇಮದ ಜೈಕಾರಗಳ ಮೂಲಕ ಹುತಾತ್ಮ ಯೋಧ ಪ್ರಾಂಜಲ್ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಲಾಗುತ್ತಿದೆ.

ದೇಶಕ್ಕಾಗಿ ಬಲಿಯಾದ ಯೋಧ

ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್‌ಗೆ ಸಂಸದೆ ಶೋಭಾ ಕರಂದ್ಲಾಜೆ ಶ್ರದ್ಧಾಂಜಲಿ ಸಲ್ಲಿಸಿದರು. ಕ್ಯಾಪ್ಟನ್ ಪ್ರಾಂಜಲ್ ಇಂದು ನಮ್ಮ‌ ಜತೆ ಇಲ್ಲ. ಅವರ ತಂದೆ- ತಾಯಿ ದೇಶದ ಸೇವೆಗೆ ಅವರನ್ನು ಕಳಿಸಿದ್ದರು. ಇಷ್ಟು ಚಿಕ್ಕ ವಯಸ್ಸಿಗೆ ಅವರ ಬಲಿದಾನವಾಗುತ್ತದೆ ಎಂದು ಕನಸಲ್ಲೂ ನೆನಸಿರಲಿಲ್ಲ. ದೇಶಕ್ಕಾಗಿ ಅವರ ಬಲಿದಾನವನ್ನು ಯುವ ಪೀಳಿಗೆ ಮತ್ತು ದೇಶದ ಇತಿಹಾಸ ನೆನಪಿನಲ್ಲಿಡುತ್ತದೆ. ದೇವರು ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದರು.

ಕ್ಯಾಪ್ಟನ್ ಪ್ರಾಂಜಲ್ ನಮ್ಮೆಲ್ಲರನ್ನು ಅಗಲಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಸಂತಾಪ ಸೂಚಿಸಿದರು. ಯುದ್ಧ ಭೂಮಿಯಲ್ಲಿ ಧೈರ್ಯ ಶೌರ್ಯದಿಂದ ಹೋರಾಡಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪುಣ್ಯ ಪ್ರಾಂಜಲ್‌ ಅವರಿಗೆ ಸಿಕ್ಕಿದೆ. ನಮ್ಮೆಲರ ಹೃದಯದಲ್ಲಿ ಅವರು ಭದ್ರವಾಗಿದ್ದಾರೆ ಎಂದರು.

ಸಂಸದ‌ ಡಿ.ಕೆ‌ ಸುರೇಶ್ ಅವರು ಪ್ರಾಂಜಲ್‌ರವರ ಅಂತಿಮ ದರ್ಶನ ಪಡೆದರು. ಯೋಧರಿಲ್ಲ ಎಂದರೇ ನಾವೆಲ್ಲರೂ ಬದುಕುವುದೇ ಕಷ್ಟ. ಅವರ ಕುಟುಂಬಕ್ಕೆ ಭಾರತೀಯ‌ ಸೈನ್ಯಕ್ಕೆ ಇದನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version