ವಿಜಯನಗರ: ಕೂಡ್ಲಿಗಿ ತಾಲೂಕಿನ ಇಮಡಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರು ಡಿಕ್ಕಿಯಾಗಿ (Car Accident) 16ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಇಮಾಡಾಪುರ ಗ್ರಾಮದ ವಿರೂಪಾಕ್ಷಿ, ತಿಮ್ಮಣ್ಣ, ವಿರೇಶ್, ಶಿವರಾಜ್, ಮೂಗಣ್ಣ ಎಂಬುವವರಿಗೆ ಸೇರಿದ ಕುರಿಗಳು ಅಪಘಾತದಿಂದ ಅಸುನೀಗಿವೆ.
ರಸ್ತೆ ದಾಟುವ ಸಂದರ್ಭದಲ್ಲಿ ಚಿತ್ರದುರ್ಗ ಕಡೆಯಿಂದ ಬಂದ ಕಾರೊಂದು ಕುರಿ ಹಿಂಡಿಗೆ ಡಿಕ್ಕಿ ಹೊಡೆದಿದೆ. ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ಸರ್ವಿಸ್ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಿಂದಾಗಿ ಸುಮಾರು ಒಂದು ಕಿಲೋ ಮೀಟರ್‌ಗೂ ಅಧಿಕ ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಕಾನಹೊಸಹಳ್ಳಿ ಪಿಎಸ್ಐ ಎರಿಯಪ್ಪ ಎ. ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆ ಮಾಡಿದ್ದಾರೆ. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಡೆಲಿವರಿ ಬಾಯ್ ಸಾವು
ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬ ಬೈಕ್ ಚಲಾಯಿಸುತ್ತಿದ್ದಾಗ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾತ್ರಿ 12.30 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ವಿಗ್ಗಿ ಡೆಲಿವರಿ ಬಾಯ್ ನಾಗಪ್ಪ (31) ಮೃತ ಸವಾರ.
ಬೆಂಗಳೂರಿನ ಹೆಗ್ಗನಹಳ್ಳಿ ಕ್ರಾಸ್‌ನಲ್ಲಿರುವ ತಮ್ಮ ಮಾವನ ಮನೆಯಲ್ಲಿ ವಾಸವಿದ್ದ ನಾಗಪ್ಪ, ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ (ಮೇ 3) ಫುಡ್ ಡೆಲಿವರಿ ಕೊಡಲು ಹೋಗುತ್ತಿದ್ದಾಗ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಮೃತದೇಹ ಲಾರಿಯ ಹಿಂಭಾಗದಲ್ಲಿ ನೇತಾಡುತ್ತಿತ್ತು. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉರುಳಿದ ವಿದ್ಯುತ್ ಕಂಬಗಳು
ಆನೇಕಲ್: ರಾತ್ರಿ ಸುರಿದ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುತ್ತಾನಲ್ಲೂರು ಗ್ರಾಮದ ವೃತ್ತದಿಂದ ಸಪ್ಪಲಮ್ಮ ದೇವಾಲಯದ ವರೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ.
ಇದನ್ನೂ ಓದಿ: ಮಣಿಪುರದಲ್ಲಿ ತೀವ್ರ ಹಿಂಸಾಚಾರ; ರಕ್ಷಿಸಿ ಎಂದು ಟ್ವೀಟ್ ಮಾಡಿ, ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿದ ಮೇರಿ ಕೋಮ್
ರಾಜಕಾಲುವೆಗಳಲ್ಲಿ ನೀರು ಹೊರಹೋಗದೆ ನಿಂತ ಪರಿಣಾಮ ಕಂಬಗಲ ಕೆಳಗಿನ ಮಣ್ಣು ಕುಸಿದುಹೋಗಿ ಕಂಬಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿವೆ. ರಾತ್ರಿ ಸಮಯ ಆಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.