Site icon Vistara News

Mysore Expressway: ಮೈಸೂರು ‘ಡೆಡ್ಲಿ’ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ; ಒಬ್ಬನ ಸಾವು, ನಾಲ್ವರಿಗೆ ಗಾಯ

Accident In Mandya

Car Accident In Bangalore Mysore Expressway, One Dead, 4 Injured

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Mysore Expressway) ಕೆಲ ದಿನಗಳಿಂದ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ ಬೆನ್ನಲ್ಲೇ ಮತ್ತೊಂದು ಅಪಘಾತ ಸಂಭವಿಸಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಬಳಿಯ ಹೆದ್ದಾರಿಯಲ್ಲಿ ಅಪರಚಿತ ವಾಹನಕ್ಕೆ ಕಾರು ಡಿಕ್ಕಿಯಾಗಿ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಅಪರಿಚಿತ ವಾಹನಕ್ಕೆ ಕಾರು ಡಿಕ್ಕಿಯಾಗಿದೆ. ಇದಾದ ಬಳಿಕ ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಆನೇಕಲ್‌ ಮೂಲದ ಕಿಶೋರ್‌ ಬಾಬು (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ನಾಲ್ವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಹೊತ್ತಿ ಉರಿದ ಕಾರು

ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಇವರು ಆನೇಕಲ್‌ನಿಂದ ಊಟಿಗೆ ತೆರಳುತ್ತಿದ್ದರು. ಕಾರು ಹೊತ್ತಿ ಉರಿಯುತ್ತಲೇ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಕಾರಣ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Death News: ಮೂಲ್ಕಿ ಅಪಘಾತದಲ್ಲಿ 21ರ ಯುವತಿ ದಾರುಣ ಮೃತ್ಯು; ಬಾಗಲಕೋಟೆಯಲ್ಲಿ ವೈದ್ಯ ವಿದ್ಯಾರ್ಥಿನಿ ಶವ ಪತ್ತೆ

ಅಪಘಾತ ಸಂಖ್ಯೆ ಇಳಿಕೆ

ಕೆಲ ದಿನಗಳಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹಾಗೂ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಮೇ ತಿಂಗಳಿನಲ್ಲಿ ನಡೆದ ಅಫಘಾತಗಳಲ್ಲಿ ಒಟ್ಟು 29 ಮಂದಿ ಪ್ರಾಣ ಕಳೆದುಕೊಂಡಿದ್ದರು. ಜೂನ್‌ ತಿಂಗಳಲ್ಲಿ ಈ ಸಂಖ್ಯೆ 28 ಆಗಿತ್ತು. ಆದರೆ ಈ ಸಂಖ್ಯೆ ಜುಲೈ ತಿಂಗಳ ಹೊತ್ತಿಗೆ 8ಕ್ಕೆ ಇಳಿದಿದೆ. ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯ ವ್ಯಾಪ್ತಿಯಲ್ಲಿ 5 ಮಂದಿ ಸಾವು ಸಂಭವಿಸಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದರು.

ಈ ನಡುವೆ ಮುಂದಿನ ದಿನಗಳಲ್ಲಿ ಅಪಘಾತ ಸಂಖ್ಯೆ ಮತ್ತಷ್ಟು ಇಳಿಮುಖ ಆದ್ರೆ ವೇಗ ಮಿತಿ ಏರಿಕೆಗೆ ಚಿಂತನೆ ಇದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ. ಇದು ನಿಜವಾದರೆ ಈಗ ಇರುವ ಪ್ರತಿ ಗಂಟೆಗೆ 100 ಕಿಮೀ ವೇಗಮಿತಿ 120ಕಿ.ಮೀಗೆ ಏರಿಕೆಯಾಗುವ ಸಾಧ್ಯತೆ ಇದೆ.

Exit mobile version