ತುಮಕೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಕರಾವಳಿ ಜನಪದ ಕ್ರೀಡೆಯಾದ ಕಂಬಳ (Bangalore Kambala) ವೀಕ್ಷಿಸಿ ವಾಪಸ್ ಹೋಗುವಾಗ ಕಾರು-ಲಾರಿ ಡಿಕ್ಕಿಯಾಗಿ (Accident) ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ (Tumkur District) ಕುಣಿಗಲ್ ತಾಲೂಕಿನ ಚಿಗಣಿಪಾಳ್ಯ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶನಿವಾರ (ನವೆಂಬರ್ 25) ರಾತ್ರಿ ಕಂಬಳ ನೋಡಿದ ಐವರು ಕಾರಿನಲ್ಲಿ ಮಂಗಳೂರಿಗೆ ವಾಪಸಾಗುತ್ತಿದ್ದರು. ಇದೇ ವೇಳೆ ಕಾರು ಹಾಗೂ ಬೋರ್‌ವೆಲ್ ಕೊರೆಯುವ ಲಾರಿ ಡಿಕ್ಕಿಯಾಗಿವೆ. ಮಂಗಳೂರಿನ ಪರೆರಾರ ಬಜಪ್ಪೆ ಗ್ರಾಮದ ವಾಸಿ ಕಿಶಾನ್ ಶೆಟ್ಟಿ(20) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟ ಗ್ರಾಮದ ವಾಸಿ ಫಿಲಿಪ್ ನೇರಿ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐವರು ಕಂಬಳ ವೀಕ್ಷಿಸಲೆಂದೇ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದರು. ಕಂಬಳ ವೀಕ್ಷಿಸಿದ ಬಳಿಕ ಅವರು ಮಂಗಳೂರಿಗೆ ತೆರಳುತ್ತಿದ್ದರು. ಆದಾಗ್ಯೂ, ಅಪಘಾತ ಸಂಭವಿಸುತ್ತಲೇ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಲಾರಿ ಹಾಗೂ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಕಾರು ನಜ್ಜುಗುಜ್ಜಾಗಿದೆ. ಹಾಗಾಗಿಯೇ, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Bangalore Kambala : ಕಂಬಳ ನೋಡಲು ಹೋಗ್ತೀರಾ? ಹಾಗಿದ್ದರೆ ಈ ಸಂಗತಿಗಳನ್ನು ತಿಳಿದುಕೊಳ್ಳಿ
ಬೆಂಗಳೂರು ಕಂಬಳವು ಶನಿವಾರ (ನವೆಂಬರ್ 25) ಬೆಳಗ್ಗೆ ಆರಂಭವಾಗಿದ್ದು, ಭಾನುವಾರ (ನವೆಂಬರ್ 26) ಸಂಜೆಯವರೆಗೂ ನಡೆಯಲಿದೆ. ಸುಮಾರು 158 ಜೋಡಿ ಕೋಣಗಳು ಭಾಗವಹಿಸಿದ ಈ ಕೂಟಕ್ಕೆ ಮುಂಜಾನೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಚಾಲನೆ ನೀಡಿದರೆ, ಸಂಜೆ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಉದ್ಘಾಟಿಸಿದರು. ಕೋಣಗಳ ಓಟವಲ್ಲದೆ, ಸಾಂಸ್ಕೃತಿಕ ವೈಭವ, ಆಹಾರ ಮೇಳ, ಕರಾವಳಿಯ ಸಂಸ್ಕೃತಿಯ ಪ್ರತಿಬಿಂಬಗಳ ವಸ್ತುಪ್ರದರ್ಶನ ನಡೆಯುತ್ತಿವೆ. ಹಾಗಾಗಿ ಲಕ್ಷಾಂತರ ಜನ ಭಾಗವಹಿಸಿದ್ದಾರೆ.