ಚಿಕ್ಕಬಳ್ಳಾಫುರ: ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಬಳಿ ವೇಗವಾಗಿ ಬಂದ ಕಾರೊಂದು ರಸ್ತೆ ಬದಿಯಿದ್ದ ತಳ್ಳುವ ಗಾಡಿ ಹಾಗೂ ಎರಡು ಬೈಕ್‌ಗಳಿಗೆ ಡಿಕ್ಕಿ (Road Accident) ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟರೆ, ಮೂವರಿಗೆ ಗಂಭೀರ ಗಾಯಗಳಾಗಿವೆ.
ವೇಗವಾಗಿ ಬಂದ ಕಾರು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಚಿನ್ನಸಂದ್ರ ನಿವಾಸಿ ಸೈಯದ್ ಬಸೀರ್ (65) ಮೃತಪಟ್ಟಿದ್ದಾರೆ. ಜಾಕೀರ್ ಖಾನ್, ಪೈರೋಜ್ ಖಾನ್, ಜಹೀರ್‌ಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರಿನಲ್ಲಿ ಬೆಂಗಳೂರು ಕಡೆಯಿಂದ ಚಿಂತಾಮಣಿ ಕಡೆಗೆ ಬರಲಾಗುತ್ತಿತ್ತು. ಈ ವೇಳೆ ಚಾಲಕನಿಗೆ ನಿದ್ದೆ ಮಂಪರು ಬಂದಿದೆ ಎನ್ನಲಾಗಿದ್ದು, ಕಾರಿನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಸರಿದಿದೆ ಎನ್ನಲಾಗಿದೆ. ಈ ವೇಳೆ ತಳ್ಳುಗಾಡಿ ಹಾಗೂ ನಿಲ್ಲಿಸಲಾಗಿದ್ದ ಬೈಕ್‌ಗಳಿಗೆ ಕಾರು ಡಿಕ್ಕಿ ಹೊಡೆದಿದೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾರು ಹಾಗೂ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ; 60ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದೇ ಪವಾಡ
ತುಮಕೂರು: ಇಲ್ಲಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಬಂಡೇಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ವೊಂದು (Private Bus) ಪಲ್ಟಿಯಾಗಿದೆ. ಅದೃಷ್ಟವಶಾತ್ ಬಸ್‌ನೊಳಗೆ ಇದ್ದ 60ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಿರಿಯೂರು ಕಡೆಯಿಂದ ಚಿಕ್ಕನಾಯಕನಹಳ್ಳಿ ಕಡೆಗೆ ಬರುತ್ತಿದ್ದಾಗ ಬಂಡೇಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಬದಿಯ ಖಾಲಿ ಜಾಗದಲ್ಲಿ ಪಲ್ಟಿ ಹೊಡೆದಿದೆ. ಬಸ್ ಪಲ್ಟಿಯಿಂದಾಗಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಸುಮಾರು 60 ರಿಂದ 70 ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದೆ. ಸದ್ಯ ಯಾವುದೇ ಪ್ರಾಣ ಹಾನಿ ಆಗಿಲ್ಲವೆಂದು ತಿಳಿದು ಬಂದಿದೆ.
ಬಸ್‌ವೊಳಗೆ ಸಿಲುಕಿದವರನ್ನು ಸ್ಥಳೀಯರು ರಕ್ಷಿಸಿದ್ದು, ಗಾಯಾಳುಗಳಿಗೆ ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಲ್ಟಿಯಾದ ಬಸ್ ಅನ್ನು ಮೇಲಕ್ಕೆ ಎತ್ತುವ ಕೆಲಸದಲ್ಲಿ ನಿರತರಾಗಿದ್ದಾರೆ.
ವ್ಯಕ್ತಿಯ ಕಾಲಿನ ಮೇಲೆ ಹರಿದ ಬಿಎಂಟಿಸಿ ಬಸ್, ಕಾಲು ಕಟ್
ಬೆಂಗಳೂರು: ವ್ಯಕ್ತಿಯೊಬ್ಬರ ಕಾಲಿನ ಮೇಲೆ ಬಿಎಂಟಿಸಿ ಬಸ್ ಹರಿದು ಎರಡೂ ಕಾಲುಗಳು ತುಂಡಾಗಿವೆ. ಬೆಂಗಳೂರಿನ ಯಶವಂತಪುರ ಸರ್ಕಲ್‌ನಲ್ಲಿ ಈ ದುರ್ಘಟನೆ ನಡೆದಿದೆ. ರಾತ್ರಿ 9.30ಕ್ಕೆ ನಡೆದಿರುವ ಈ ಘಟನೆಯಲ್ಲಿ ಸರಿಸುಮಾರು 60 ವರ್ಷದ ವ್ಯಕ್ತಿಯ ಎರಡೂ ಕಾಲುಗಳು ಕತ್ತರಿಸಿಹೋಗಿವೆ. ವ್ಯಕ್ತಿ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಅವರ ಬಗ್ಗೆ ಇನ್ನಷ್ಟು ವಿವರಗಳು ತಿಳಿದುಬರಬೇಕಿವೆ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಸದ ವಾಹನಕ್ಕೆ ಗುದ್ದಿದ ಲಾರಿ, ಚೆಲ್ಲಾಡಿದ ಕಸಕ್ಕೆ ಹೈರಾಣಾದ ಸವಾರರು
ಯಶವಂತಪುರದಲ್ಲಿರುವ ಇಸ್ಕಾನ್ ದೇವಾಲಯದ ಮುಂದೆ ನೀರಿನ ಲಾರಿ ಮತ್ತು ಕಸ ಸಾಗಿಸುತ್ತಿದ್ದ ಮಹೇಂದ್ರ ಬೊಲೇರೋ ನಡುವೆ ಅಪಘಾತವಾಗಿದೆ. ಬೆಳಗ್ಗೆ 5.30ರ ಹೊತ್ತಿಗೆ ಹೋಟೆಲ್ ತ್ಯಾಜ್ಯ ತೆಗೆದುಕೊಂಡು ಹೋಗುತ್ತಿದ್ದ ಬೊಲೇರೋ ಪಿಕ್‌ಅಪ್ ಗಾಡಿಗೆ ವಾಟರ್ ಟ್ಯಾಂಕರ್ ಗುದ್ದಿದ್ದು, ಅಪಘಾತಕ್ಕೆ ಬೊಲೇರೋದಲ್ಲಿದ್ದ ತ್ಯಾಜ್ಯ ಸಂಪೂರ್ಣ ರಸ್ತೆಗೆ ಬಿದ್ದಿದೆ. ರಸ್ತೆ ತುಂಬಾ ಹೋಟೆಲ್ ತ್ಯಾಜ್ಯ ಚೆಲ್ಲಾಡಿದೆ. ಇದರಿಂದ ಈ ಮಾರ್ಗವಾಗಿ ಸಂಚರಿಸುತ್ತಿದ್ದ ಹಲವಾರು ಬೈಕ್ ಸವಾರರು ಸ್ಕಿಡ್ ಆಗಿ ಬೀಳುವಂತಾಯಿತು.
ಇದನ್ನೂ ಓದಿ: Karnataka Elections : ಸಿಎಂ ಸ್ಥಾನದ ಅವಕಾಶ ಖರ್ಗೆಗೆ ಬಿಟ್ಟು ಕೊಡಲು ರೆಡಿ ಎಂದ ಡಿಕೆಶಿ; ಏನಿದು ಹೊಸ ವರಸೆ
ರೋಡ್ ಸ್ಕಿಡ್ ಆಗುತ್ತಿರುವುದರಿಂದ ಬೈಕ್ ಸವಾರರು ನಿಯಂತ್ರಣ ಕಳೆದುಕೊಂಡು ಬೀಳುತ್ತಿದ್ದು, 20ಕ್ಕೂ ಹೆಚ್ಚು ಬೈಕ್ ಸವಾರರು ಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡಿದ್ದಾರೆ. ಸ್ಥಳೀಯರು ಜಾಗದಲ್ಲಿ ನಿಂತು ಬೈಕ್ ಸವಾರರಿಗೆ ನಿಧಾನವಾಗಿ ಚಲಿಸಿ ಎಂದು ಗೈಡ್ ಮಾಡಿದರು.