ದಕ್ಷಿಣ ಕನ್ನಡ: ಶ್ರೀನಿವಾಸ್ ಗೌಡ ಎಂಬ ಯುವಕ ಕಂಬಳ (Kambala) ಸ್ಪರ್ಧೆಯಲ್ಲಿ 180 ಮೀಟರ್ ದೂರವನ್ನು ಕೇವಲ 13 ಸೆಕೆಂಡಿನಲ್ಲಿ ಪೂರ್ಣಗೊಳಿಸಿ ದಿಗ್ಗಜ ಹುಸೇನ್ ಬೋಲ್ಟ್ ಅವರ ದಾಖಲೆಯನ್ನು ಹಿಮ್ಮೆಟ್ಟಿದ್ದಾರೆ ಎಂಬ ಸುದ್ದಿಗೆ ಈಗ ಟ್ವಿಸ್ಟ್ ಸಿಕ್ಕಿದೆ. ಇದೊಂದು ಮ್ಯಾಚ್ ಫಿಕ್ಸಿಂಗ್ ಪ್ರಕರಣ ಎಂದು ಕಂಬಳ ಸಮಿತಿಯವರು ಆರೋಪಿಸಿದ್ದಾರೆ.
ತೀರ್ಪುಗಾರರಾದ ಡಾ. ಗುಣಪಾಲ ಅವರು ಸುಳ್ಳು ದಾಖಲೆಯನ್ನು ಪ್ರಚುರಪಡಿಸಿದ್ದಾರೆ. ಅವರು ಈ ದಾಖಲೆಯನ್ನು ಮಾಡಿಯೇ ಇಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ?
2019ರಲ್ಲಿ ಶ್ರೀನಿವಾಸ ಗೌಡ ಅವರು ಕಂಬಳ ಸ್ಪರ್ಧೆಯಲ್ಲಿ 180 ಮೀ. ದೂರ ಕೋಣಗಳೊಂದಿಗೆ ಓಡಿದ್ದರು. ಈ ಸ್ಪರ್ಧೆ ಭಾರಿ ಪ್ರಚಾರವನ್ನು ಪಡೆದುಕೊಂಡಿತ್ತು. ಕಾರಣ, ಪ್ರಸಿದ್ಧ ಚಾಂಪಿಯನ್ ಓಟಗಾರ ಹುಸೇನ್ ಬೋಲ್ಟ್ ಅವರ ದಾಖಲೆಯನ್ನು ಮುರಿದಿರುವುದಾಗಿ ಕಂಡುಬಂದಿತ್ತು. ಅವರ ಈ ಸಾಧನೆ ಕೇವಲ ಕಂಬಳ ಅಭಿಮಾನಿಗಳಲ್ಲಷ್ಟೇ ಅಲ್ಲ, ದೇಶ-ವಿದೇಶದಲ್ಲೂ ಸಂಚಲನ ಸೃಷ್ಟಿಸಿತ್ತು. ಕರ್ನಾಟಕ ಸರ್ಕಾರ, ಯುವಜನ ಕ್ರೀಡಾ ಇಲಾಖೆ ವತಿಯಿಂದ ಶ್ರೀನಿವಾಸ ಗೌಡ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನ ಮಾಡಿ ಬಹುಮಾನವನ್ನು ನೀಡಿ ಗೌರವಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಶ್ರೀನಿವಾಸ ಗೌಡರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದ 2021ರಲ್ಲಿ ಹಮ್ಮಿಕೊಂಡಿದ್ದ ಕಂಬಳ ಸ್ಪರ್ಧೆಯಲ್ಲಿ ಶ್ರೀನಿವಾಸ ಗೌಡ ಮತ್ತೊಮ್ಮೆ ಸದ್ದು ಮಾಡಿದ್ದರು. ಅವರ ದಾಖಲೆಗಳಿಂದ ಸಾಕಷ್ಟು ಪ್ರಚಾರವನ್ನು ಪಡೆದಿದ್ದರು.
ಈಗ ಈ ದಾಖಲೆಗಳೆಲ್ಲವೂ ಸುಳ್ಳು ಎಂದು ಹೇಳಲಾಗುತ್ತಿದೆ. ಇದೆಲ್ಲವೂ ಕಂಬಳ ಸ್ಪರ್ಧೆಯ ತೀರ್ಪುಗಾರ ಡಾ.ಗುಣಪಾಲ ಕಡಂಬ ಎಂಬುವರು ಸೃಷ್ಟಿಸಿದ ಸುಳ್ಳು ದಾಖಲೆ ಎಂದು ಕಂಬಳ ಸಮಿತಿ ಆರೋಪಿಸಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಲೋಕೇಶ್ ಗೌಡ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸುಳ್ಳು ದಾಖಲೆ ಸೃಷ್ಟಿಸಿದ ಆರೋಪ:
ಶ್ರೀನಿವಾಸ ಗೌಡ ಎಂಬ ಯುವಕ ದಿಗ್ಗಜ ಓಟಗಾರ ಹುಸೇನ್ ಬೋಲ್ಟ್ ದಾಖಲೆಗೆ ಸಮನಾಗಿ ಓಡಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಕಂಬಳ ಸಮಿತಿ ಆರೋಪಿಸಿದೆ. ಕಂಬಳದ ಬಗ್ಗೆ ಅಧ್ಯಯನ ಮಾಡಿಕೊಂಡಿರುವ, ಅನೇಕ ಪ್ರಬಂಧಗಳನ್ನು ಪ್ರಕಟಿಸಿರುವ ತೀರ್ಪುಗಾರರಾದ ಡಾ. ಗುಣಪಾಲ ಕಡಂಬ ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಲಾಗಿದೆ. ಗುಣಪಾಲ್ ಹಾಗೂ ಇನ್ನೋರ್ವ ಸಹ ತೀರ್ಪುಗಾರ ರತ್ನಾಕರ ಎಂಬುವರು ಜತೆಯಾಗಿ ಶ್ರೀನಿವಾಸ್ ಗೌಡ ಅವರ ದಾಖಲೆಯ ಕುರಿತು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಸಮಿತಿಯವರು ಹೇಳಿದ್ದಾರೆ.
ಕಂಬಳಗಳು ಎಲ್ಲಿ, ಹೇಗೆ ನಡೆಯಬೇಕು? ಇದಕ್ಕೆ ನಿಯಮಗಳೇನು? ಎಂಬುದನ್ನು ಕಂಬಳ ಸಮಿತಿ ತೀರ್ಮಾನಿಸುತ್ತದೆ. ಆದರೆ, ಗುಣಪಾಲ ಕಡಂಬ ಹಾಗೂ ರತ್ನಾಕರ ಈ ಸಮಿತಿಯನ್ನು ವಿಶ್ವಾಸಕ್ಕೆ ಪಡೆಯದೆ ಸುಳ್ಳು ಹೇಳಿದ್ದಾರೆ. ಶ್ರೀನಿವಾಸ ಗೌಡ ಅವರ ದಾಖಲೆಯ ಕುರಿತು ಯಾವದೇ ಆಧಾರಗಳನ್ನು ಸಮಿತಿಗೆ ನೀಡಿಲ್ಲ ಎಂದು ಸಮಿತಿಯವರು ಆರೋಪಿಸಿದ್ದಾರೆ. ಅಲ್ಲದೆ, ಈ ಮೂಲಕ ಅವರು ಕಂಬಳ ಅಭಿಮಾನಿಗಳಿಗೆ ಅವಮಾನಿಸಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಬಿ ಆರ್. ಶೆಟ್ಟಿ ಹೇಳಿದ್ದಾರೆ.
ಕರಾವಳಿಯ ಆರಾಧನಾ ಕ್ರಮ ಕಂಬಳ:
ಕಂಬಳ ಎನ್ನುವುದು ಕೇವಲ ಒಂದು ಜಾನಪದ ಕ್ರೀಡೆಯಾಗಿ ಮಾತ್ರ ಉಳಿದಿಲ್ಲ. ಕರಾವಳಿಯ ಜನರಿಗೆ ಇದೊಂದು ಆರಾಧನಾ ಕ್ರಮ. ಪುತ್ತೂರು, ಮುಲ್ಕಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಈ ಕ್ರೀಡೆಯನ್ನು ದೇವರ ಹೆಸರಿನಲ್ಲಿ ನಡೆಸಲಾಗುತ್ತದೆ. ಕಂಬಳ ಓಟದ ಸಮಯದಲ್ಲಿ ಸಾಮಾನ್ಯವಾಗಿ ಕೋಣಗಳನ್ನು ಜೋಡಿಯಾಗಿ ಓಡಿಸಲಾಗುತ್ತದೆ. ಇವುಗಳನ್ನು ನೇಗಿಲು ಮತ್ತು ಹಗ್ಗ ಬಳಸಿ ನಿಯಂತ್ರಿಸಲಾಗುತ್ತದೆ. ಕಂಬಳದ ಕೋಣಗಳನ್ನು ಕಟ್ಟುಮಸ್ತಾದ ಆಳೊಬ್ಬನು ಮರದ ಹಲಗೆಯ ಮೇಲೆ ನಿಂತು ನಿಯಂತ್ರಿಸುತ್ತಾನೆ.
ಈ ಹಿಂದೆ ಇದರಿಂದ ಪ್ರಾಣಿಗೆ ಹಾನಿ ಉಂಟಾಗುತ್ತದೆ ಎಂದು ಆರೋಪಿಸಿ ಅನೇಕರು ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ, ಇದರಿಂದ ಪ್ರಾಣಿಗಳಿಗೆ ಹಿಂಸೆ ಆಗುವುದಿಲ್ಲ ಎಂದು ಮತ್ತೊಮ್ಮೆ ಆರಂಭಿಸಲಾಗಿತ್ತು. ಕೆಲವು ನಿಯಮಗಳೊಂದಿಗೆ ಉಡುಪಿ, ಮಂಗಳೂರು ಹಾಗೂ ನೆರೆಯ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ನಡೆಸಲಾಗುತ್ತಿದೆ.
ಇದನ್ನೂ ಓದಿ | ಹಲಸಿನ ಎಲೆಯಲ್ಲಿ ರಾಷ್ಟ್ರಗೀತೆ ಬರೆದ ಬಾಲಕಿ; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ