Site icon Vistara News

ಗ್ರಾಮ ಪಂಚಾಯಿತಿ ಜಾಗದಲ್ಲೇ ಶವ ಹೂತಿದ್ದ ಪ್ರಕರಣ; ಮಾಂಬಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ

ಚಾಮರಾಜನಗರ: ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲೇ ಶವ ಹೂತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮದಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಲಾಗಿದೆ. ಅಲ್ಲದೆ, ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಕೆಲವು ತಾಲೂಕುಗಳಲ್ಲಿ ತಗ್ಗುಪ್ರದೇಶಗಳು ಜಲಾವೃತವಾಗಿದ್ದವು. ಇದೇ ವೇಳೆ ಅನಾರೋಗ್ಯದಿಂದ ಮೃತಪಟ್ಟಿದ್ದ ಮಹಿಳೆಯೊಬ್ಬರ ಶವ ಹೂಳಲು ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ಸಮಸ್ಯೆಯಾಗಿದ್ದು, ಬೇರೆ ಸ್ಥಳ ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಆವರಣದಲ್ಲೇ ಶವವನ್ನು ಹೂತಿದ್ದರು.

ಗುರುವಾರ ಹೆಣ ಹೂಳುವ ವಿಷಯಕ್ಕೆ ಸಂಬಂಧಪಟ್ಟಂತೆ ಗ್ರಾಪಂ ಸಿಬ್ಬಂದಿ, ಪೊಲೀಸರೊಂದಿಗೆ ಗ್ರಾಮಸ್ಥರು ತೀವ್ರ ವಾಗ್ವಾದ ನಡೆಸಿದ್ದರು. ಕೊನೆಗೆ ಪಟ್ಟುಬಿಡದೆ ಗ್ರಾಮ ಪಂಚಾಯಿತಿ ಆವರಣದಲ್ಲಿಯೇ ಶವವನ್ನು ಹೂತಿದ್ದರು. ಈಗ ಮಾಂಬಳ್ಳಿಯಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಿದ್ದು, ಶುಕ್ರವಾರ ರಾತ್ರಿ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ತಹಸೀಲ್ದಾರ್ ಅನಂದಪ್ಪ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಗ್ರಾಮವನ್ನು ಸಾರ್ವಜನಿಕ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

ಸ್ಮಶಾನಕ್ಕಾಗಿ ಹಲವು ವರ್ಷಗಳ ಹೋರಾಟ
ಹಲವು ವರ್ಷಗಳಿಂದ ಮಾಂಬಳ್ಳಿಯಲ್ಲಿ ಸ್ಮಶಾನಕ್ಕಾಗಿ ಗ್ರಾಮಸ್ಥರು ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಮಶಾನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈಗ ಆ ಸ್ಮಶಾನದಲ್ಲೂ ಪ್ರವಾಹದಿಂದ ನೀರು ತುಂಬಿಕೊಂಡಿದ್ದರಿಂದ ಗ್ರಾ.ಪಂ ಆವರಣದಲ್ಲಿಯೇ ಗ್ರಾಮಸ್ಥರು ಶವಸಂಸ್ಕಾರ ಮಾಡಿದ್ದರು. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪರಿಸ್ಥಿತಿ ನಿಯಂತ್ರಿಸಲು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.

ಇದನ್ನೂ ಓದಿ | Rain Effect | ಸ್ಮಶಾನವಿಲ್ಲದ್ದಕ್ಕೆ ಗ್ರಾ.ಪಂ. ಆವರಣದಲ್ಲಿಯೇ ಹೆಣ ಹೂಳಿದ ಮಾಂಬಳ್ಳಿ ಗ್ರಾಮಸ್ಥರು

Exit mobile version