ಬೆಂಗಳೂರು: ಎಚ್. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’ ವರದಿ (ಜಾತಿ ಗಣತಿ – Caste Census) ಬಗ್ಗೆ ಬಿಜೆಪಿ ನಾಯಕರು ಆಕ್ರೋಶವನ್ನು ಹೊರಹಾಕಿದ್ದಾರೆ. ಆರ್ಥಿಕ ಸಮೀಕ್ಷೆ, ಜಾತಿ ಗಣತಿ ನೆಪದಲ್ಲಿ ಹಿಂದುಳಿದ ವರ್ಗಗಳಿಗೆ ಮೋಸ ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar) ಅವರು ಆಕ್ಷೇಪಿಸಿದರೆ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ (Former Deputy CM Ashwathnarayan), ಕಾಂತರಾಜು ವರದಿ ಸಮಾಜದಲ್ಲಿ ಸಮಸ್ಯೆ ಬಗೆಹರಿಸುವುದಕ್ಕಿಂತ ರಾಜಕೀಯ ಪ್ರೇರಿತವಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಸಹಿತ ಕಾಂಗ್ರೆಸ್‌ನವರ ದುರುದ್ದೇಶ ಇದರ ಹಿಂದೆ ಇದೆ” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಸುನಿಲ್ ಕುಮಾರ್, ಆರ್ಥಿಕ ಸಮೀಕ್ಷೆ, ಜಾತಿ ಗಣತಿ ನೆಪದಲ್ಲಿ ಹಿಂದುಳಿದ ವರ್ಗಗಳಿಗೆ ಮೋಸ ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. 10 ವರ್ಷಗಳ ಹಿಂದೆ ಈ ವರದಿ ಕೊಡಲಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವರೇ ವಿರೋಧ ಸೂಚಿಸುತ್ತಿದ್ದು, ಸಾರ್ವಜನಿಕವಾಗಿ ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಕತ್ತಲಲ್ಲಿ ಇಡುವ ಪ್ರಯತ್ನ
ಹಿಂದುಳಿದ ವರ್ಗಗಳನ್ನು ಪರೋಕ್ಷವಾಗಿ ಕತ್ತಲಲ್ಲಿ ಇಡುವ ಪ್ರಯತ್ನವನ್ನೂ ಸರ್ಕಾರ ಮಾಡುತ್ತಿದೆ ಎಂದು ಆರೋಪ ಮಾಡಿದ ಸುನಿಲ್ ಕುಮಾರ್, ಈ ಕುರಿತು ಸಾರ್ವಜನಿಕ ಚರ್ಚೆ ನಡೆಸಬೇಕು. ತಜ್ಞರಿಂದ ಸಾಧಕ, ಬಾಧಕಗಳ ಕುರಿತು ಚರ್ಚೆ ಮಾಡಲು ವೇದಿಕೆ ಸೃಷ್ಟಿಸಬೇಕು. ವರದಿಯ ಮೂಲ ಪ್ರತಿ ಕಳವಾಗಿದ್ದರೆ ಯಾವ ಪ್ರತಿಯನ್ನು ಇಟ್ಟುಕೊಂಡು ಈ ವಾದ- ವಿವಾದ ನಡೆದಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು ವಿಸ್ತೃತವಾಗಿ ಮಾಹಿತಿ ಕೊಡಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು. ಒಂದೆಡೆ ವರದಿ ಸರಿಯಿಲ್ಲ ಎಂದು ಡಿಸಿಎಂ ಹೇಳುತ್ತಾರೆ. ವರದಿ ಸ್ವೀಕಾರಕ್ಕೆ ಸಿದ್ಧ ಎಂದು ಸಿಎಂ ಹೇಳುತ್ತಾರೆ. ವರದಿ ಕಳೆದುಹೋಗಿದೆ ಎಂದು ಆಯೋಗದ ಅಧ್ಯಕ್ಷರು ಹೇಳುವುದಾದರೆ ಯಾವುದನ್ನು ನಂಬಬೇಕು ಎಂದು ಕೇಳಿದರು. ವರದಿ ಬಗ್ಗೆ ಊಹಾಪೋಹ ಆಗುತ್ತಿದೆ. ಅದರ ಸಾರ್ವಜನಿಕ ಚರ್ಚೆ ಅಗತ್ಯ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಸರ್ಕಾರದ ನಿಲುವು ಸ್ಪಷ್ಟವಾಗಲಿ. ಈ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಒಂದು ನಿಲುವು ತಳೆದರೆ, ಉಪ ಮುಖ್ಯಮಂತ್ರಿಗಳು ಇನ್ನೊಂದು ನಿಲುವು ತಿಳಿಸುತ್ತಾರೆ. ಕರ್ನಾಟಕದ ಜನತೆ ಏನೆಂದು ಯೋಚಿಸಬೇಕು? ಸರ್ಕಾರವು ಸ್ಪಷ್ಟ ನಿಲುವನ್ನು ತಿಳಿಸಬೇಕಿದೆ ಎಂದು ಅವರು ಸುನಿಲ್ ಕುಮಾರ್ ಆಗ್ರಹಿಸಿದರು.
ಸರ್ಕಾರಿ ದಾಖಲೆ ಕಳ್ಳತನ ಆಗಿದ್ದರೆ ಸರ್ಕಾರ ಕಳ್ಳತನ ಮಾಡಿದೆಯೇ? ಆಯೋಗ ಕಳ್ಳತನ ಮಾಡಿದೆಯೇ? ಅಥವಾ ಗೃಹ ಇಲಾಖೆಯವರು ಕಳ್ಳತನ ಮಾಡಿದ್ದಾರಾ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು.
ಕೇವಲ ಲೋಕಸಭಾ ಚುನಾವಣೆ ದೃಷ್ಟಿಯಿಂದ, ಮತಗಳ ದೃಷ್ಟಿಕೋನದಿಂದ ಪರಿಶಿಷ್ಟ ಜಾತಿ, ಪಂಗಡದವನ್ನು ಕತ್ತಲೆಯಲ್ಲಿ ಇಡುವ ಪ್ರಯತ್ನ ಹೇಳಿಕೆಗಳಿಂದ ಆಗಬಾರದು. ಬೆಳಗಾವಿ ಅಧಿವೇಶನಕ್ಕೆ ಮೊದಲು ಸರ್ಕಾರ ಸ್ಪಷ್ಟ ನಿಲುವನ್ನು ತಿಳಿಸಲಿ. ಸಾರ್ವಜನಿಕ ಚರ್ಚೆಗೆ ಸರ್ಕಾರವೇ ಒಂದು ವೇದಿಕೆಯಲ್ಲಿ ನಿರ್ಮಿಸಲಿ ಎಂದು ಸುನಿಲ್ ಕುಮಾರ್ ಒತ್ತಾಯ ಮಾಡಿದರು.
ಅಸಮರ್ಥ ನಿರ್ವಹಣೆ ಕಾರಣಕ್ಕೆ ಕಲ್ಲಿದ್ದಲು ಕಳ್ಳತನ ನಡೆದಿದೆ. ಇನ್ನೊಂದೆಡೆ ಲೋಡ್ ಶೆಡ್ಡಿಂಗ್ ಆಗುತ್ತಿದೆ. ವಿದ್ಯುತ್ ಪಂಪ್‍ಸೆಟ್‍ಗಳಿಗೆ 7 ಗಂಟೆ ವಿದ್ಯುತ್ ಕೊಡುತ್ತಿಲ್ಲ. ಮಂತ್ರಿಗಳು 7 ಗಂಟೆ ವಿದ್ಯುತ್ತನ್ನು ಬೇಸಿಗೆ ಕಾಲದಲ್ಲಿ ಕೊಡುವುದಾಗಿ ಹೇಳುತ್ತಾರೆ. ಈಗ ಮಳೆಗಾಲ- ಚಳಿಗಾಲದಲ್ಲೇ ವಿದ್ಯುತ್ ಪಂಪ್‍ಸೆಟ್‍ಗಳಿಗೆ 7 ಗಂಟೆ ವಿದ್ಯುತ್ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ರೈತರ ವಿದ್ಯುತ್ ಪಂಪ್‍ಸೆಟ್‍ಗಳಿಗೆ 7 ಗಂಟೆ ವಿದ್ಯುತ್, ಗ್ರಾಹಕರು ಮತ್ತು ಮನೆಗಳಿಗೆ ನಿರಂತರ ವಿದ್ಯುತ್ ಕೊಟ್ಟರೆ ಅದು ಸರ್ಕಾರದ ಸಾಧನೆ ಎಂದು ಭಾವಿಸುವೆ. ಕಲ್ಲಿದ್ದಲು ಕೃತಕ ಕೊರತೆ ಸೃಷ್ಟಿಸಲಾಗುತ್ತಿದೆ. ಪವರ್ ಕಟ್ ಈಗಲೇ ಆರಂಭವಾಗಿದೆ. ಇನ್ನೊಂದೆಡೆ ಕಳ್ಳತನಕ್ಕೂ ನಾಂದಿ ಹಾಡುತ್ತಿದೆ ಎಂದು ಸುನಿಲ್ ಕುಮಾರ್ ಟೀಕಿಸಿದರು.
ಇದರ ಹಿಂದೆ ಕಾಂಗ್ರೆಸ್‌ನವರ ದುರುದ್ದೇಶ: ಅಶ್ವತ್ಥನಾರಾಯಣ
ಕಾಂತರಾಜು ಆಯೋಗ ವರದಿಯು ಸಮಾಜದಲ್ಲಿ ಸಮಸ್ಯೆ ಬಗೆಹರಿಸೋದಕ್ಕಿಂತ ರಾಜಕೀಯ ಪ್ರೇರಿತವಾಗಿದೆ. ಸಿಎಂ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್‌ನವರ ದುರುದ್ದೇಶ ಇದರ ಹಿಂದೆ ಇದೆ. ಸದುದ್ದೇಶ ಇದ್ದರೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತಿದ್ದರು. ಆಡಳಿತದಲ್ಲಿ ಪಾರದರ್ಶಕತೆ ಇಲ್ಲ. ಗುಣಮಟ್ಟ ಶಿಕ್ಷಣ, ಸೌಲಭ್ಯ ಇಲ್ಲ. ಯಾವುದೇ ಪ್ರಶ್ನೆಗಳಿಗೂ ಅವರ ಬಳಿ ಉತ್ತರ ಇಲ್ಲ. ಅಧಿಕಾರಕ್ಕೆ ಬಂದ ಬಳಿಕವಾದರೂ ಜನ ಕೊಟ್ಟ ಬೆಂಬಲಕ್ಕೆ ಕೆಲಸ ಮಾಡಬೇಕಿತ್ತು. ಆದರೆ, ಕಾಂತರಾಜು ವರದಿ ಕೇವಲ ಸಮೀಕ್ಷೆ ಅಂತಾರೆ. ಇದು ಸರಿ ಇಲ್ಲ ಎಂಬ ಮಾತು ಕೇಳಿಬರುತ್ತಿದೆ ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಮೂಲ ಪ್ರತಿ ಕಾಣೆ ಬಗ್ಗೆ ಗೊತ್ತಿಲ್ಲವೆಂದ ಸಿಎಂ ಸಿದ್ದರಾಮಯ್ಯ!
ಕಾಂಗ್ರೆಸ್‌ನವರಿಂದ ಸಬಲೀಕರಣ ಆಗಿಲ್ಲ
ಹಸ್ತಪ್ರತಿ ಇಲ್ಲ, ಕಾರ್ಯದರ್ಶಿ ಸಹಿ ಇಲ್ಲ ಎಂದು ಹೇಳಲಾಗುತ್ತಿದ್ದರೂ, ಬಿಡುಗಡೆ ಮಾಡಲಾಗುತ್ತಿದೆ. ಇದು ಸರಿಯಲ್ಲ. ಸರ್ವರಿಗೂ ಸಮಪಾಲು, ಸಮಬಾಳು ಅಂತಿದ್ದಾರೆ. ಬರೀ ಸ್ವಾರ್ಥ, ಕುಟುಂಬ ರಾಜಕಾರಣ ಮಾಡುತ್ತಿದದೀರಿ. ಜನರ ಮೇಲೆ ಎಳ್ಳಷ್ಟು ವಿಶ್ವಾಸ ಇಲ್ಲ. ವಿಷ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ರಿಸರ್ವೇಷನ್ ತಂದಿದ್ದು ಬಿಜೆಪಿ. ನೀವು ಯಾವುದೇ ಸಬಲೀಕರಣ ಮಾಡುತ್ತಿಲ್ಲ ಎಂದು ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.