ನವ ದೆಹಲಿ: ಕಾವೇರಿ ನೀರು ಹಂಚಿಕೆ (Cauvery dispute) ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರದ ಸಚಿವರು, ಸರ್ವ ಪಕ್ಷ ಸಂಸತ್ ಸದಸ್ಯರ ಸಭೆಯಲ್ಲಿ (All parties MPs meet) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರ ನಡುವೆ ಜಟಾಪಟಿ ನಡೆಯಿತು. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಧ್ಯಪ್ರವೇಶ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರೆ ಜೋಶಿ ಅವರು ಪ್ರಧಾನಿಯನ್ನು ಎಳೆಯಬೇಡಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ನಾಡು, ನುಡಿ, ಜಲ, ಭೂಮಿ, ಭಾಷೆ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದು ಹೇಳಿದರು. ಸಂಕಷ್ಟ ಸೂತ್ರ ಸಿದ್ಧವಾಗದೇ ಇರುವುದರಿಂದ ಕಾವೇರಿ ನೀರು ಹಂಚಿಕೆ ಎನ್ನುವುದು ನಮ್ಮ ರಾಜ್ಯಕ್ಕೆ ಕ್ಲಿಷ್ಟಕರವಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಬಿಡಲು ನಮ್ಮಲ್ಲಿ ನೀರೇ ಇಲ್ಲ ಎಂದ ಸಿದ್ದರಾಮಯ್ಯ
ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ. ಕನ್ನಡ ನಾಡು, ನುಡಿ, ಜಲ, ಭೂಮಿ, ಭಾಷೆ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ, ಗಟ್ಟಿಯಾಗಿ ನಿಲ್ಲಬೇಕು. ನಮಗೆ ಈಗ ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರು ನಮಗೆ ಅನಿವಾರ್ಯ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.
ನಮಗೆ ಆಗಸ್ಟ್ ಬಳಿಕ ಮಳೆ ಬರಲ್ಲ. ತಮಿಳುನಾಡಿಗೆ ಆಗಸ್ಟ್ ಬಳಿಕದ ಮಳೆ ಬರುತ್ತದೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ. ಆದ್ದರಿಂದ ನಾವು ಹೆಚ್ಚು ಸಂಕಷ್ಟದಲ್ಲಿದ್ದೇವೆ. ಈ ಪರಿಸ್ಥಿತಿಯನ್ನು ನಮ್ಮ ಕಾನೂನು ತಂಡ ಮತ್ತು ತಜ್ಞ ಹಾಗೂ ಅಧಿಕಾರಿಗಳ ತಂಡ CWMC ಎದುರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ 108.4 ಟಿಎಂಸಿ ನೀರನ್ನು ನಾವು ಬಿಡಬೇಕಿತ್ತು. ಆದರೆ ನಾವು ಬಿಟ್ಟಿರುವುದು 39.8 ಟಿಎಂಸಿ ನೀರು ಮಾತ್ರ. ಏಕೆಂದರೆ ನಮ್ಮಲ್ಲಿ ನೀರೇ ಇಲ್ಲ. ಆದ್ದರಿಂದ ನಮಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು ಸಿದ್ದರಾಮಯ್ಯ.
ಮೇಕೆದಾಟು ಯೋಜನೆ ಜಾರಿ ಅನಿವಾರ್ಯ ಎಂದು ಪ್ರತಿಪಾದಿಸಿದ ಸಿಎಂ
ಇಂಥಾ ಪರಿಸ್ಥಿತಿ ಎದುರಾದಾಗ ಸಮರ್ಥವಾಗಿ ಜನರ ಹಿತ ಕಾಪಾಡಲು ಮೇಕೆದಾಟು ನಮಗೆ ಅನಿವಾರ್ಯ. ಆದ್ದರಿಂದ ನಮ್ಮ ನೀರನ್ನು, ನಮ್ಮ ಜಾಗದಲ್ಲಿ ಬಳಸಿಕೊಳ್ಳಲು, ಸಂಗ್ರಹಿಸಿಕೊಳ್ಳಲು, ವಿದ್ಯುತ್ ಉತ್ಪಾದಿಸಿಕೊಳ್ಳಲು ಮೇಕೆದಾಟು ನಮಗೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂಥಾ ಪರಿಸ್ಥಿತಿಗೆ ಮೇಕೆದಾಟು ಪರಿಹಾರ ಆಗುತ್ತದೆ ಎಂದರು.
ಜಲಶಕ್ತಿ ಸಚಿವರು, ಪ್ರಧಾನಿ ಭೇಟಿಗೆ ಅವಕಾಶ ಕೇಳಿದ್ದೇವೆ
ಈಗಾಗಲೇ ನಾವು ಕೇಂದ್ರ ನೀರಾವರಿ ಸಚಿವರಿಗೆ ಎರಡು ಬಾರಿ ಪತ್ರ ಬರೆದು ಪರಿಸ್ಥಿತಿಯನ್ನು ಸಮಗ್ರವಾಗಿ ವಿವರಿಸಿದ್ದೇವೆ. ಸರ್ವ ಪಕ್ಷ ನಿಯೋಗದೊಂದಿಗೆ ಭೇಟಿ ಮಾಡಲು ಕೇಂದ್ರದ ಜಲ ಶಕ್ತಿ ಸಚಿವರು ಹಾಗೂ ಪ್ರಧಾನಿ ಅವರ ಸಮಯ ಕೇಳಿದ್ದೇವೆ. ಹೀಗಾಗಿ ಮುಂದೆ ನಾವು ಇಡಬೇಕಾದ ಹೆಜ್ಜೆಗಳ ಕುರಿತು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ಚರ್ಚಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ಈ ಹಂತದಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ ಅವರು ಜಲಶಕ್ತಿ ಸಚಿವರನ್ನು ಭೇಟಿ ಮಾಡಿಸುತ್ತೇನೆ ಎಂದರು.
ಜಲಶಕ್ತಿ ಸಚಿವರ ಭೇಟಿಗೆ ಎಲ್ಲರೂ ಒಟ್ಟಿಗೇ ಹೋಗೋಣ ಎಂದ ಜೋಶಿ
ಸಂಸದರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ʻʻಇಂದು ಕೇಂದ್ರ ಜಲಶಕ್ತಿ ಸಚಿವರನ್ನ ನಾನು ಭೇಟಿ ಮಾಡಿಸುತ್ತೇನೆ. ಸಂಸತ್ ಭವನದಲ್ಲಿ ಸಂಜೆ 4.30 ಗಂಟೆಗೆ ಭೇಟಿಗೆ ಕಾಲಾವಕಾಶ ಕೇಳುತ್ತೇನೆ. ಎಲ್ಲಾ ಸಂಸದರು ಒಟ್ಟಿಗೆ ಹೋಗಿ ಭೇಟಿ ಮಾಡೋಣʼʼ ಎಂದರು.
ಈ ಹಂತದಲ್ಲಿ ಮಧ್ಯ ಪ್ರವೇಶ ಮಾಡಿದ ಸಿದ್ದರಾಮಯ್ಯ ಅವರು, ʻʻಪ್ರಧಾನಿ ಮೋದಿ ಭೇಟಿಗೆ ನಾನು ಎರಡು ಬಾರಿ ಪತ್ರ ಬರೆದಿದ್ದೇನೆ. ಭೇಟಿಗೆ ಕಾಲಾವಕಾಶ ನೀಡುತ್ತಿಲ್ಲʼʼ ಎಂದು ಹೇಳಿದರು.
ಅದಕ್ಕೆ ಪ್ರಲ್ಹಾದ್ ಜೋಶಿ ಅವರು ಈ ವಿಷಯದಲ್ಲಿ ಪ್ರಧಾನಿಯವರನ್ನು ಎಳೆದು ತರೋದು ಸರಿಯಲ್ಲ ಎಂದರು.
ಇದಕ್ಕೆ ಡಿಕೆ ಶಿವಕುಮಾರ್ ಮಧ್ಯಪ್ರವೇಶ ಮಾಡಿ ಮಾತನಾಡಿ, ʻʻಕಾವೇರಿ ನದಿ ನೀರಿನ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡೊಣ. ಇದರಲ್ಲಿ ರಾಜಕೀಯ ಕೆಸರೆರಚಾಟ ಬೇಡ ಎಂದು ಸಲಹೆ ನೀಡಿದರು.
ಕಾವೇರಿ ಕುರಿತ ಸಂಸದರ ಸಭೆಯಲ್ಲಿ ಭಾಗವಹಿಸಿದ ಸಂಸದರ ಪಟ್ಟಿ ಇಲ್ಲಿದೆ
ಲೋಕಸಭೆ ಸದಸ್ಯರು: ಪಿಸಿ ಗದ್ದಿಗೌಡರ, ಪಿ.ಸಿ. ಮೋಹನ್, ಡಿ ವಿ ಸದಾನಂದ ಗೌಡ, ಡಿ ಕೆ ಸುರೇಶ್, ತೇಜಸ್ವಿ ಸೂರ್ಯ, ಮಂಗಳಾ ಸುರೇಶ ಅಂಗಡಿ, ವೈ.ದೇವೇಂದ್ರಪ್ಪ, ಭಗವಂತ ಖೂಬಾ, ರಮೇಶ ಜಿಗಜಿಣಗಿ, ಬಿ.ಎನ್. ಬಚ್ಚೆಗೌಡ, ಅಣ್ಣಾಸಾಹೇಬ ಜೊಲ್ಲೆ, ಎ.ನಾರಾಯಣಸ್ವಾಮಿ, ನಳಿನ್ ಕುಮಾರ್ ಕಟೀಲ್, ಜಿ ಎಂ ಸಿದ್ದೇಶ್ವರ, ಪ್ರಲ್ಹಾದ್ ಜೋಶಿ, ಡಾ.ಉಮೇಶ್ ಜಿ.ಜಾಧವ್, ಶಿವಕುಮಾರ ಉದಾಸಿ, ಎಸ್.ಮುನಿಸ್ವಾಮಿ, ಕರಡಿ ಸಂಗಣ್ಣ, ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ, ರಾಜಾ ಅಮರೇಶ್ವರ ನಾಯ್ಕ್, ಬಿ.ವೈ. ರಾಘವೇಂದ್ರ, ಜಿ ಎಸ್ ಬಸವರಾಜ್, ಶೋಭಾ ಕರಂದ್ಲಾಜೆ, ಪ್ರಜ್ವಲ್ ರೇವಣ್ಣ
ರಾಜ್ಯಸಭಾ ಸದಸ್ಯರು: ರಾಜೀವ್ ಚಂದ್ರಶೇಖರ್, ಈರಣ್ಣ ಕಡಾಡಿ, ಎಲ್ ಹನುಮಂತಯ್ಯ, ಜಗ್ಗೇಶ್, ವೀರೇಂದ್ರ ಹೆಗ್ಗಡೆ, ಲೆಹರ್ ಸಿಂಗ್, ನಾಸೀರ್ ಹುಸೇನ್, ಕೆ ನಾರಾಯಣ
ಸಭೆಗೆ ಗೈರಾದ ಸಂಸದರು: ಮಲ್ಲಿಕಾರ್ಜುನ ಖರ್ಗೆ, ಹೆಚ್ ಡಿ ದೇವೆಗೌಡ, ನಿರ್ಮಲಾ ಸೀತಾರಾಮನ್, ಶ್ರೀನಿವಾಸ್ ಪ್ರಸಾದ್, ಅನಂತ್ ಕುಮಾರ್ ಹೆಗಡೆ,