ಮಂಡ್ಯ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುಗಡೆಗೆ CWRC ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಮತ್ತೆ ಕಾವೇರಿ ಹೋರಾಟದ (Cauvery Dispute) ಕಿಚ್ಚು ಭುಗಿಲೆದ್ದಿದೆ. ಇಂದು ರೈತರಿಂದ ಹೆದ್ದಾರಿ ತಡೆ (farmers protest) ಹಾಗೂ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
15 ದಿನ 5 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಮಂಡಳಿ (CWRC) ಸೂಚನೆ ನೀಡಿತ್ತು. ಇದನ್ನು ವಿರೋಧಿಸಿ ರೈತರು ಹೋರಾಡುತ್ತಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಶ್ರೀರಂಗಪಟ್ಟಣ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಿರುವ ರೈತರು, 12 ಗಂಟೆಗೆ ಜಿಲ್ಲಾ ರೈತ ಸಂಘ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ. ಭೂಮಿತಾಯಿ ಹೋರಾಟ ಸಮಿತಿಯಿಂದಲೂ ಪ್ರತಿಭಟನೆ ನಡೆಯಲಿದೆ. ರೈತ ಮುಖಂಡ ನಂಜುಂಡೆಗೌಡರ ನೇತೃತ್ವದಲ್ಲಿ ಕೆಆರ್‌ಎಸ್‌ನಲ್ಲಿ ಪ್ರತಿಭಟನೆ ನಡೆಯಲಿದೆ.
ಸಧ್ಯ KRS ಡ್ಯಾಂನಲ್ಲಿ ನೀರಿನ ಮಟ್ಟ 101 ಅಡಿಗೆ ಇಳಿಕೆಯಾಗಿದೆ. ಇದರಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದರೂ, ತಮಿಳುನಾಡಿಗೆ ನೀರು ಬಿಡಲು ಸೂಚನೆ ನೀಡಿರುವುದು ಅನ್ಯಾಯ ಎಂದು ಆರೋಪಿಸಿ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ವಿರುದ್ಧ ರೈತರಿಂದ ಪ್ರತಿಭಟನೆ ನಡೆಯುತ್ತಿದೆ. ತಮಿಳುನಾಡಿಗೆ ನೀರು ಹರಿಸುವುದನ್ನ ನಿಲ್ಲಿಸಲು ರೈತರು ಒತ್ತಾಯಿಸುತ್ತಿದ್ದಾರೆ.
ಕಾವೇರಿ ನೀರು ಹಂಚಿಕೆ; ಇಂದು ನಡೆಯಲಿದೆ ಪ್ರಾಧಿಕಾರ ಸಭೆ, ಇಂದಿನ ತೀರ್ಮಾನವೇ ಸುಪ್ರೀಂ ಕೋರ್ಟಿಗೆ
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಸಂಬಂಧ ಇಂದು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ (CWMA) ಸಭೆ ನಡೆಯಲಿದೆ. ನಿನ್ನೆಯ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.
ಕಾವೇರಿ ನೀರು ಹಂಚಿಕೆ ಸಂಬಂಧ ನಿನ್ನೆ CWRC ಸಭೆ ನಡೆದಿದ್ದು. ಅದರಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ CWRC ಕರ್ನಾಟಕಕ್ಕೆ ಆದೇಶ ನೀಡಿದೆ. ಇದರ ಕುರಿತು ಇಂದು ತಜ್ಞರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇಂದು ಮಧ್ಯಾಹ್ನ 2.30ಕ್ಕೆ ಸಭೆ ನಿಗದಿಯಾಗಿದೆ.
ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನ ಪ್ರಕಾರ ವರ್ಷಕ್ಕೆ 177 ಟಿಎಂಸಿ ನೀರನ್ನು ರಾಜ್ಯ ತಮಿಳುನಾಡಿಗೆ ಹರಿಸಬೇಕು. ವಿಶೇಷವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ನೀರು ಬಿಡುಗಡೆ ಆಗಬೇಕು. ಈ ಹಿನ್ನೆಲೆಯಲ್ಲಿ ತಮಿಳುನಾಡು ಪ್ರತಿನಿತ್ಯ 24000 ಕ್ಯೂಸೆಕ್ ನೀರು ಕೇಳಿತ್ತು. ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಈಗಾಗಲೇ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ಪ್ರಗತಿಯ ಹಂತದಲ್ಲಿದೆ.
ಆಗಸ್ಟ್ 10ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ 10000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿತ್ತು. ಆದರೆ ಈ ಆದೇಶವನ್ನ ವಿರೋಧಿಸಿ, ಅವತ್ತು ನಡೆದಿದ್ದ ಸಭೆಯನ್ನು ತಮಿಳುನಾಡು ಬಹಿಷ್ಕರಿಸಿತ್ತು. ಅದಾದ ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಕಾವೇರಿ ನೀರು ಹಂಚಿಕೆ ಪ್ರಾಧಿಕಾರದ ಆದೇಶದಂತೆ 10000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಕೋರ್ಟ್‌ಗೆ ಕರ್ನಾಟಕ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ CWMAಯಲ್ಲಿ ಸಭೆ ನಡೆಯುತ್ತಿದೆ. ಅದರ ರಿಪೋರ್ಟ್ ಆಧಾರದ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಸೆ.1ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ನಿನ್ನೆಯಷ್ಟೇ CWRC ಮೀಟಿಂಗ್ ನಡೆದಿದ್ದು, ಇಂದು CWMA ಸಭೆ ಮಹತ್ವ ಪಡೆದಿದೆ. ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವ ತೀರ್ಮಾನವನ್ನ ಪ್ರಾಧಿಕಾರ ಕೋರ್ಟಿಗೆ ವರದಿ ಮಾಡಲಿದೆ. ಈ ವರದಿ ಆಧಾರಿತವಾಗಿ ಕೋರ್ಟ್ ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ಇಂದಿನ ಸಭೆ ಬಹಳ ಮಹತ್ವ ಪಡೆದುಕೊಂಡಿದೆ.