Site icon Vistara News

Cauvery Dispute: ಕಾವೇರಿ ನೀರು ಹಂಚಿಕೆ; ಇಂದು ನಡೆಯಲಿದೆ ಪ್ರಾಧಿಕಾರ ಸಭೆ

Cauvery Water

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ (Cauvery river water) ಸಂಬಂಧ ಇಂದು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ (CWMA) ಸಭೆ ನಡೆಯಲಿದೆ. ನಿನ್ನೆಯ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.

ಕಾವೇರಿ ನೀರು ಹಂಚಿಕೆ ಸಂಬಂಧ ನಿನ್ನೆ CWRC (Cauvery Water Regulation Committee) ಸಭೆ ನಡೆದಿದ್ದು. ಅದರಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ CWRC ಕರ್ನಾಟಕಕ್ಕೆ ಆದೇಶ ನೀಡಿದೆ. ಇದರ ಕುರಿತು ಇಂದು ತಜ್ಞರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇಂದು ಮಧ್ಯಾಹ್ನ 2.30ಕ್ಕೆ ಸಭೆ ನಿಗದಿಯಾಗಿದೆ.

ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನ ಪ್ರಕಾರ ವರ್ಷಕ್ಕೆ 177 ಟಿಎಂಸಿ ನೀರನ್ನು ರಾಜ್ಯ ತಮಿಳುನಾಡಿಗೆ ಹರಿಸಬೇಕು. ವಿಶೇಷವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ನೀರು ಬಿಡುಗಡೆ ಆಗಬೇಕು. ಈ ಹಿನ್ನೆಲೆಯಲ್ಲಿ ತಮಿಳುನಾಡು ಪ್ರತಿನಿತ್ಯ 24000 ಕ್ಯೂಸೆಕ್ ನೀರು ಕೇಳಿತ್ತು. ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಈಗಾಗಲೇ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ಪ್ರಗತಿಯ ಹಂತದಲ್ಲಿದೆ.

ಆಗಸ್ಟ್ 10ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ 10000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿತ್ತು. ಆದರೆ ಈ ಆದೇಶವನ್ನ ವಿರೋಧಿಸಿ, ಅವತ್ತು ನಡೆದಿದ್ದ ಸಭೆಯನ್ನು ತಮಿಳುನಾಡು ಬಹಿಷ್ಕರಿಸಿತ್ತು. ಅದಾದ ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಕಾವೇರಿ ನೀರು ಹಂಚಿಕೆ ಪ್ರಾಧಿಕಾರದ ಆದೇಶದಂತೆ 10000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಕೋರ್ಟ್‌ಗೆ ಕರ್ನಾಟಕ ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ CWMAಯಲ್ಲಿ ಸಭೆ ನಡೆಯುತ್ತಿದೆ. ಅದರ ರಿಪೋರ್ಟ್ ಆಧಾರದ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಸೆ.1ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ನಿನ್ನೆಯಷ್ಟೇ CWRC ಮೀಟಿಂಗ್ ನಡೆದಿದ್ದು, ಇಂದು CWMA ಸಭೆ ಮಹತ್ವ ಪಡೆದಿದೆ. ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವ ತೀರ್ಮಾನವನ್ನ ಪ್ರಾಧಿಕಾರ ಕೋರ್ಟಿಗೆ ವರದಿ ಮಾಡಲಿದೆ. ಈ ವರದಿ ಆಧಾರಿತವಾಗಿ ಕೋರ್ಟ್ ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ಇಂದಿನ ಸಭೆ ಬಹಳ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: Cauvery Dispute : ಸುಪ್ರೀಂನಲ್ಲಿ ನಾಳೆ ಕಾವೇರಿ ಕದನ; ತ.ನಾಡು ಕೇಳಿದಷ್ಟು ನೀರು ಬಿಡಲಾಗದು ಎಂದ ಕರ್ನಾಟಕ

Exit mobile version