ಬೆಂಗಳೂರು: ಕಾವೇರಿ ನೀರು ವಿಚಾರದಲ್ಲಿ (Cauvery Water Dispute) ಈಗ ನಮಗೆ ಉಳಿದಿರುವುದು ಒಂದೇ ದಾರಿ. ನಾವು ಸುಪ್ರೀಂಕೋರ್ಟ್‌ಗೆ ಹೋಗಬೇಕಿದೆ, ವಾಸ್ತವಾಂಶ ತಿಳಿಸಲೇಬೇಕಿದೆ. ಈ ಬಗ್ಗೆ ಸಿಎಂ ಅವರ ಜತೆಯೂ ಮಾತನಾಡಿದ್ದೇನೆ. ನಾಳೆ ಅಥವಾ ನಾಡಿದ್ದು ದೆಹಲಿಗೆ ಹೋಗಿ ಸಂಸದರನ್ನು ಭೇಟಿ ಮಾಡಿ, ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿದ ನಂತರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ತಮಿಳುನಾಡಿಗೆ ಮತ್ತೆ 5000 ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದ ಜಲಾಶಯಗಳಿಗೆ ಒಳಹರಿವು ಸಾಕಾಗುತ್ತಿಲ್ಲ. ರಾಜ್ಯದ ಸಂಸದರೆಲ್ಲ ರಾಜ್ಯದ ಹಿತಕ್ಕೆ ಬದ್ಧ ಎಂದು ಹೇಳಿದ್ದಾರೆ. ನಾನು ಕೂಡ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇನೆ, ಅವರು ಸಹ ಕೇಂದ್ರ ಸಚಿವರನ್ನು ಭೇಟಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನೀರು ಬಿಡುವ ವಿಚಾರವಾಗಿ ನಮ್ಮ ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ನೀರನ್ನು ಬಿಡದೆ ಸುಪ್ರೀಂಕೋರ್ಟ್‌ಗೆ ಹೋದರೆ ಕೋರ್ಟ್ ನಮ್ಮನ್ನು ಪ್ರಶ್ನೆ ಮಾಡುತ್ತದೆ. ನೀವು ಆದೇಶ ಪಾಲಿಸಿದ್ದೀರಾ ಎಂದು ಕೇಳಿದ್ರೆ ನಾವು ಏನು ಉತ್ತರ ನೀಡುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ | Cauvery water dispute : ಕಾವೇರಿ ಸಮಸ್ಯೆ ಪರಿಹಾರಕ್ಕೆ ಸಂಧಾನ ಸೂತ್ರ ಪ್ರಸ್ತಾಪವಿಟ್ಟ ದೇವೇಗೌಡರು
5000 ಕ್ಯೂಸೆಕ್ ನೀರು ಬಿಟ್ಟರೆ ಅಲ್ಲಿ ಹೋಗುವುದೇ 2000 ಕ್ಯೂಸೆಕ್, ನಾವು ಜಾಸ್ತಿ ನೀರನ್ನು ಬಿಟ್ಟಿಲ್ಲ. ನಾವು ರಾಜ್ಯವನ್ನು ಕಾಪಾಡಬೇಕು, ಹೀಗಾಗಿ ಕೋರ್ಟ್ ಮುಂದೆ ಪ್ರಬಲವಾಗಿ ವಾದ ಮಂಡಿಸುತ್ತೇವೆ. ನೀವು ಎರಡು ರಾಜ್ಯಕ್ಕೆ ಬಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಎಂದು ಮನವಿ ಮಾಡುತ್ತೇವೆ, ಆಗ ಅವರಿಗೆ ಮನವರಿಗೆ ಆಗುತ್ತದೆ ಎಂದು ತಿಳಿಸಿದ್ದಾರೆ.