Site icon Vistara News

Cauvery water dispute : ಕಾವೇರಿ ಸಮಸ್ಯೆ ಪರಿಹಾರಕ್ಕೆ ಸಂಧಾನ ಸೂತ್ರ ಪ್ರಸ್ತಾಪವಿಟ್ಟ ದೇವೇಗೌಡರು

Ex PM HD Deve Gowda

ನವದೆಹಲಿ: ಕಾವೇರಿ ನೀರು ಹಂಚಿಕೆ (Cauvery water dispute) ಕುರಿತು ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ನಡುವೆ ಇರುವ ವಿವಾದಗಳನ್ನು ಸಂಧಾನ ಸೂತ್ರದ ಮೂಲಕವೇ ಬಗೆಹರಿಸುವುದು ಉತ್ತಮ ಎಂದು ಮಾಜಿ ಪ್ರಧಾನ ಮಂತ್ರಿ ಎಚ್​. ಡಿ ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ. ಸೋಮವಾರ ಆರಂಭಗೊಂಡ ರಾಜ್ಯ ಸಭೆಯ ಕಲಾಪದಲ್ಲಿ ಮಾತನಾಡಿದ ಅವರು, ಈ ವಿವಾದದ ಸಾಧಕ, ಬಾಧಕಗಳನ್ನು ಅರಿತು ಕುಳಿತು ಮಾತನಾಡುವುದೇ ಪರಿಹಾರ ಎಂಬುದಾಗಿ ಹೇಳಿದ್ದಾರೆ.

ಕಾವೇರಿ ನೀರು ಹಂಚಿಕೆ ವಿವಾದ ಕಳೆದ 60 ವರ್ಷಗಳಿಂದ ಜೀವಂತವಾಗಿದೆ. ಅಷ್ಟೂ ವರ್ಷಗಳಿಂದ ನಾನು ಈ ವಿಚಾರದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಹೋರಾಟ ನಡೆಸಿದ್ದೇನೆ. ನಮ್ಮ ನೆರೆಯ ರಾಜ್ಯದ ಹೆಚ್ಚು ಸದಸ್ಯರು ಈ ಸದನದಲ್ಲಿ ಇದ್ದಾರೆ. ಆದರೂ ನಾನು ಈ ಸಂದರ್ಭದಲ್ಲಿ ಸಂಧಾನ ಸೂತ್ರವನ್ನು ಪ್ರಸ್ತಾಪಿಸುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡ ಅವರು ಹೇಳಿದ್ದಾರೆ.

ಈ ಹಿಂದೇ ಏನು ನಡೆದಿದೇ, ಅದರ ಸಾಧಕ, ಬಾಧಕಗಳೇನು ಎಂಬುದನ್ನು ಚರ್ಚೆ ನಡೆಸುವುದು ಅನಗತ್ಯ. ಆದರೆ, ಎಲ್ಲವನ್ನೂ ಬಗೆಹರಿಸಲು ಸಂಧಾನ ಸೂತ್ರವೇ ಉತ್ತಮ. ಕಾನೂನು ಸಮರದಿಂದು ಸಮಸ್ಯೆ ಪರಿಹಾರವಾಗುವುದಿಲ್ಲ. ತಮಿಳುನಾಡು ಸರ್ಕಾರಕ್ಕೆ ಸಮಸ್ಯೆ ಬಗೆ ಹರಿಸುವಂತೆ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಆಲಮಟ್ಟಿ ಸಮಸ್ಯೆ ಬಗೆ ಹರಿಸಲು ತೆಲಂಗಾಣ ಹಾಗೂ ಮಹದಾಯಿ ನೀರು ಹಂಚಿಕೆ ವಿಚಾರದ ಗೊಂದಲವನ್ನು ಪರಿಹರಿಸಲು ಗೋವಾ ಸರ್ಕಾರಕ್ಕೂ ಅವರು ಮನವಿ ಮಾಡಿದ್ದಾರೆ.

ಇದೇ ವೇಳೆ ಅವರು ತಾವು, ಕಾವೇರಿ ಸಮಸ್ಯೆ ಪರಿಹಾರದ ಕುರಿತು ಆಸಕ್ತಿ ಹೊಂದಿಲ್ಲ ಎಂಬ ಆರೋಪವನ್ನು ನಿರಾಕರಿಸಿದರು. ಕೆಲವು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದೆ. ಆದರೆ, ಈ ವಿಚಾರದಲ್ಲಿ 60 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.

ಬೆಂಗಳೂರಿಗೆ ನೀರು, ದೇವೇಗೌಡ ಆತಂಕ

ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳವರೆಗೆ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಸಂಸದ ದೇವೇಗೌಡ, ನಮ್ಮ ರಾಜ್ಯದ ರಾಜಕಾರಣಿಗಳಲ್ಲಿ ಒಗ್ಗಟ್ಟು ಇಲ್ಲದಿರುವುದೇ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ : Cauvery Dispute : ಕಾವೇರಿ ಅನ್ಯಾಯಕ್ಕೆ ಸಿಡಿದ ಅನ್ನದಾತರು, CWMA ಆದೇಶದ ವಿರುದ್ಧ ತೀರದಲ್ಲಿ ಪ್ರತಿಭಟನೆ

ದೆಹಲಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಇವತ್ತಿನ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶ ಮಹತ್ತರವಾದ ಪೆಟ್ಟು ಎಂದು ಹೇಳಿದ್ದಾರೆ. ಬೆಂಗಳೂರಿಗೆ ಕುಡಿಯುವ ನೀರು ಬೇಕು, ಮುಂದೇನು ಆಗುತ್ತದೆ ಎಂದು ಗೊತ್ತಿಲ್ಲ. ನಮ್ಮ ರಾಜ್ಯ ಸರಕಾರ ತೆಗೆದುಕೊಂಡ ನಿರ್ಣಯ ದುರಂತ. ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡರೋ ಗೊತ್ತಿಲ್ಲ ಎಂದು ಹೇಳಿದರು.

ಇವತ್ತು ಸದನದಲ್ಲಿ ಕಾವೇರಿ ವಿಚಾರ ಎತ್ತಿದ್ದೇನೆ. ವಾಸ್ತವಿಕ ವರದಿಯನ್ನು ಅಧಿಕಾರಿಗಳ ತಂಡ ಸಲ್ಲಿಸಲಿ ಎಂದು ದೇವೇಗೌಡ ಅವರು ಆಗ್ರಹಿಸಿದರು. ಪ್ರಾಧಿಕಾರದ ಅದೇಶವನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ತಮಿಳುನಾಡು ಒಪ್ಪಿಕೊಳ್ಳುತ್ತಿಲ್ಲ. ತಮಿಳುನಾಡಿನ ರಾಜಕಾರಣಿಗಳಲ್ಲಿ ಒಗ್ಗಟು ಇದೆ. ನಮ್ಮ ರಾಜಕಾರಣಿಗಳಲ್ಲಿ ಒಗ್ಗಟ್ಟು ಇಲ್ಲ ಎಂದು ದೇವೇಗೌಡ ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.

Exit mobile version