ಬೆಂಗಳೂರು: ಇದು ಇಡೀ ಬೆಂಗಳೂರಿನ ನಾಗರಿಕರು (Citizens of Bangalore) ಗಮನಿಸಬೇಕಾದ ಸುದ್ದಿ. ಒಂದು ಕಡೆ ಮಳೆ ಇಲ್ಲ, ಕಾವೇರಿಯಲ್ಲಿ ನೀರು (Cauvery Water) ಹರಿಯುತ್ತಿಲ್ಲ. ಕೆ.ಆರ್.ಎಸ್ನಲ್ಲಿ ನೀರಿನ ಪ್ರಮಾಣ ಇಳಿಯತ್ತಿದೆ. ಇಂಥ ಹೊತ್ತಿನಲ್ಲಿ ಬೆಂಗಳೂರಿಗೆ ಒಂದು ಶಾಕಿಂಗ್ ಸುದ್ದಿ (Shocking News) ಬಂದಿದೆ. ಅದೇನೆಂದರೆ, ಈ ವೀಕೆಂಡ್ನಲ್ಲಿ ಇಡೀ ಬೆಂಗಳೂರಿಗೆ ನೀರು ಸರಬರಾಜು ಸ್ಟಾಪ್ (water supply stop) ಆಗಲಿದೆ.
ಹೌದು, ಮುಂದಿನ ಶನಿವಾರ ಅಂದರೆ, ಸೆಪ್ಟೆಂಬರ್ 23ಕ್ಕೆ ಇಡೀ ಬೆಂಗಳೂರು ನಗರಕ್ಕೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ಏನಾಯಿತು? ಯಾಕೆ ಹೀಗೆ ನೀರು ಬಂದ್?
ಈ ಕುತೂಹಲ ನಿಮಗಿದ್ದರೆ ಮುಂದೆ ಓದಿ. ಹಾಗಂತ ಇದು ಕಾವೇರಿಯಲ್ಲಿ ನೀರಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿಗೆ ನೀರು ಪೂರೈಕೆ ಸ್ಥಗಿತ ಮಾಡುತ್ತಿರುವುದಲ್ಲ. ಈಗಲೂ ಕೆಆರ್ಎಸ್ನಲ್ಲಿ 20 ಟಿಎಂಸಿ ನೀರು ಇದೆ. ಇದನ್ನು ಬೆಳೆಗಳಿಗೆ ಬಳಸದೆ ಬೆಂಗಳೂರು, ಮಂಡ್ಯ ಮತ್ತು ಮೈಸೂರಿನ ಜನರ ಕುಡಿಯುವ ನೀರಿಗಾಗಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಮಳೆ ಮತ್ತು ಕಾವೇರಿ ಜಲವಿವಾದಕ್ಕೂ ಈ ನೀರು ಬಂದ್ಗೂ ಸಂಬಂಧವಿಲ್ಲ.
ಇದು ಸಾಮಾನ್ಯವಾಗಿ ನಡೆಯುವ ಕಾರ್ಮಿಕರ ಮುಷ್ಕರಕ್ಕೆ ಸಂಬಂಧಿಸಿವ ವಿಚಾರವೂ ಅಲ್ಲ. ನೀರು ಬಿಡುವವರು ಮುಷ್ಕರ ಹೂಡಿದ್ದಾರೆ ಎಂಬ ಕಾರಣಕ್ಕೆ ಇಲ್ಲಿ ನೀರು ಬಂದ್ ಆಗುತ್ತಿಲ್ಲ. ಹಾಗಾಗಿ ಅದರ ಬಗ್ಗೆ ತಲೆ ಬಿಸಿ ಬೇಕಾಗಿಲ್ಲ.
ಇದು ಪ್ಯೂರ್ಲೀ ತಾಂತ್ರಿಕ ಕಾರಣದಿಂದ ಉಂಟಾಗಲಿರುವ ಅಡಚಣೆ
ತಾತಗುಣಿ 220 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಸರ್ಕ್ಯುಟ್ ಬ್ರೇಕರ್ (Circuit Breaker) ಮತ್ತು ಕರೆಂಟ್ ಟ್ರಾನ್ಸ್ ಫಾರ್ಮರ್ ಸ್ಥಾಪನೆ ಮಾಡಲಿರುವುದರಿಂದ ಅವುಗಳನ್ನು ಪರೀಕ್ಷಿಸಿ ಮತ್ತು ಕಾರ್ಯಗತಗೊಳಿಸುವ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಜಲಮಂಡಳಿ 5 ಹಂತದಲ್ಲಿ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಿ ಕಾಮಗಾರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಇನ್ನೊಂದು ಖುಷಿಯ ವಿಷಯ, ಇಡೀ ದಿನ ಬಂದ್ ಅಲ್ಲ, ಕೇವಲ ಎರಡು ಗಂಟೆ ಮಾತ್ರ
ನೀರು ಪೂರೈಕೆ ಸ್ಥಗಿತದ ಆತಂಕದ ಸುದ್ದಿಯ ನಡುವೆಯೇ ಇನ್ನೊಂದು ಖುಷಿಯ ಸಂಗತಿ ಏನೆಂದರೆ, ಇಡೀ ದಿನ ನೀರು ಪೂರೈಕೆ ಸ್ಥಗಿತವಾಗುವುದಿಲ್ಲ. ಕೇವಲ ಎರಡು ಗಂಟೆ ಮಾತ್ರ.
ಅಂದರೆ, ಸೆಪ್ಟೆಂಬರ್ 23ರ ಶನಿವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನೀರು ಪೂರೈಕೆ ಸ್ಥಗಿತವಾಗಲಿದೆ ಎಂದು ಜಲಮಂಡಳಿ ಹೇಳಿದೆ. ಸುಮಾರು 2 ಗಂಟೆಗಳ ಕಾಲ ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ 5 ಹಂತದಲ್ಲೂ ನೀರು ಪೂರೈಕೆ ವ್ಯತ್ಯಯ ಆಗಲಿದೆ. ಅಂದರೆ ಜಲಮಂಡಳಿ ಐದು ಹಂತಗಳಲ್ಲಿ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಿ ಕಾಮಗಾರಿಗೆ ಅವಕಾಶ ಮಾಡಿಕೊಡಲಿದೆ.
ಸಾರ್ವಜನಿಕರು ಅಗತ್ಯವಿರುವ ನೀರು ಶೇಖರಣೆ ಮಾಡಿಕೊಂಡು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ.
ಸಾರ್ವಜನಿಕರು ಏನು ಮಾಡಬೇಕು?
- ಜಲಮಂಡಳಿ ಕೇವಲ ಎರಡು ಗಂಟೆ ಮಾತ್ರ ನೀರು ಪೂರೈಕೆ ಸ್ಥಗಿತ ಎಂದು ಹೇಳಿದೆ. ಆದರೆ, ಇದು ವಿಸ್ತರಣೆಯಾಗುವ ಸಾಧ್ಯತೆಯೂ ಇರಬಹುದು.
- ಹೀಗಾಗಿ ಸಾರ್ವಜನಿಕರು ಒಂದು ದಿನಕ್ಕೆ ಬೇಕಾದಷ್ಟು ನೀರನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದು ಒಳ್ಳೆಯದು.
- ಶುಕ್ರವಾರ ಮನೆಯ ಹೊರಭಾಗವನ್ನು ನೀರಿನಿಂದ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರೆ ಅದನ್ನು ಮಾಡಬೇಡಿ. ಮರುದಿನಕ್ಕೆ ಟ್ಯಾಂಕ್ ಖಾಲಿ ಮಾಡಬೇಡಿ.
- ಕೆಲವರು ಶನಿವಾರ ಎಲ್ಲಾ ಬಟ್ಟೆಗಳನ್ನು ವಾಷಿಂಗ್ ಮೆಷಿನ್ಗೆ ಹಾಕಲು ಪ್ಲ್ಯಾನ್ ಮಾಡಿಟ್ಟುಕೊಂಡಿರುತ್ತಾರೆ. ಆದರೆ, ಈ ಬಾರಿ ಅದನ್ನು ಅವಾಯ್ಡ್ ಮಾಡಿ. ಅದನ್ನು ಭಾನುವಾರಕ್ಕೆ ಶಿಫ್ಟ್ ಮಾಡಿಕೊಳ್ಳಿ.
- ಅನಗತ್ಯವಾಗಿ ನೀರು ಪೋಲಾಗದಂತೆ ನೋಡಿಕೊಳ್ಳಿ.
- ನೆಂಟರನ್ನು ಈ ಶನಿವಾರ ಕರೆಯದಿದ್ದರೆ ಒಳ್ಳೆಯದು.