ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಗೆ ತೆರಳಿದ್ದರೆ, ಇತ್ತ ಬೆಂಗಳೂರಿನಲ್ಲಿ ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ನ್ಯಾಷನಲ್ ಎಜುಕೇಷನ್ ಫೌಂಡೇಶನ್‌ಗೆ ಡಿ.ಕೆ.ಶಿವಕುಮಾರ್ ಮಾಲೀಕರಾದರೆ, ಅವರ ಪುತ್ರಿ ಸೌಂದರ್ಯ ಅವರು ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಬೆಳಗ್ಗಿನಿಂದಲೇ ಸಿಬಿಐ ಅಧಿಕಾರಿಗಳು ಶಿಕ್ಷಣ ಸಂಸ್ಥೆ ಮತ್ತು ಅದರ ಇದರ ಕಚೇರಿಗಳ ಮೇಲೆ ದಾಳಿ ಮಾಡುತ್ತಿದ್ದು, ಎಲ್ಲ ಕಡೆ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಡಿ.ಕೆ. ಶಿವಕುಮಾರ್ ಅವರ ಮೇಲೆ ಈಗಾಗಲೇ ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚಿನ ಸಂಪತ್ತು ಸಂಗ್ರಹಿಸಿರುವ ಪ್ರಕಣದಲ್ಲಿ ಐಟಿ, ಇ.ಡಿ. ಇಲಾಖೆಗಳು ವಿಚಾರಣೆ ನಡೆಯುತ್ತಿದೆ. ಅಕ್ರಮ ಹಣ ವರ್ಗಾವಣೆ, ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ನೀಡಿರುವ ದೇಣಿಗೆ ಮತ್ತು ದಿಲ್ಲಿಯ ಮನೆಯಲ್ಲಿ ದೊಡ್ಡ ಮೊತ್ತ ಹಣ ಪತ್ತೆಯಾದ ಪ್ರಕರಣವೂ ಪ್ರತ್ಯೇಕ ವಿಚಾರಣೆಯಲ್ಲಿದೆ. ಇದಕ್ಕಾಗಿಯೇ ಡಿ.ಕೆ. ಶಿವಕುಮಾರ್ ಅವರು ಆಗಾಗ ದಿಲ್ಲಿಗೆ ಹೋಗಬೇಕಾಗಿ ಬರುತ್ತಿದೆ.
ಈ ನಡುವೆ, ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಮುಚ್ಚಿದ್ದ ಕೇಸೂ ಮತ್ತೆ ತೆರೆದುಕೊಂಡಿದೆ. ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಅವರ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್, ಸರಿಯಾದ ದಾಖಲೆ ನೀಡದ ಕಾರಣಕ್ಕೆ ಅರ್ಜಿದಾರರಿಗೆ ೨೫ ಲಕ್ಷ ರೂ. ದಂಡ ವಿಧಿಸಿತ್ತು. ಆದರೆ, ಈಗ ಸಿಬಿಐ ಅದೇ ಅರ್ಜಿದಾರರನ್ನು ಕರೆದು ಈ ಕುರಿತು ಇರುವ ಎಲ್ಲ ದಾಖಲೆಗಳನ್ನು ನೀಡಿ ಎಂದು ಸೂಚಿಸಿದೆ.
ಒಟ್ಟಿನಲ್ಲಿ ಚುನಾವಣೆಯ ಹೊತ್ತಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಸುತ್ತ ಚಕ್ರವ್ಯೂಹವೊಂದು ನಿರ್ಮಾಣವಾಗುವುದು ಖಚಿತ ಎಂಬಂಥ ವಾತಾವರಣ ಕಂಡುಬರುತ್ತಿದೆ. ಇದಕ್ಕೆ ಪೂರಕವಾಗಿ ಶಿವಕುಮಾರ್ ನೇತೃತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ.
ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ಏನು?
ಸಿಬಿಐ ಅಧಿಕಾರಿಗಳು ನಮ್ಮ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ನಿಜ. ಇದು ನನಗೆ ನಿರಂತರ ಕಿರುಕುಳ ನೀಡುವ ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರಾಜಕೀಯ ಹಗೆತನಕ್ಕಾಗಿ ನನಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಸಂಸ್ಥೆಯಿಂದ ಕೆಲವು ದಾಖಲೆಗಳನ್ನು ಪಡೆದಿದ್ದಾರೆ. ನಾನು ತಪ್ಪು ಮಾಡಿಲ್ಲ. ಹಾಗಾಗಿ ನನಗೆ ಭಯವಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಇವರು ಕೊಡುತ್ತಿರುವ ಕಿರುಕುಳ ಒಂದೆರಡಲ್ಲ. ನಾನು ನಮ್ಮ ವಕೀಲರೊಬ್ಬರಿಗೆ 5 ಲಕ್ಷ ಕೊಟ್ಟಿದ್ದೆ. ಅವರಿಗೂ ನೋಟಿಸ್ ಕೊಟ್ಟು ಪೀಡಿಸುತ್ತಿದ್ದಾರೆ. ನಮ್ಮ ಜಮೀನಿಗೂ ಹೋಗಿ ಪರಿಶೀಲಿಸಿದ್ದಾರೆ. ತಹಸೀಲ್ದಾರ್ ಕಚೇರಿಗೂ ಹೋಗಿ ಮಾಹಿತಿ ಪಡೆದಿದ್ದಾರೆ. ರಾಜಕೀಯ ಕಾರಣಕ್ಕಾಗಿ ನನಗೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ.
ಇದನ್ನೂ ಓದಿ DK Shivakumar | ಡಿಕೆಶಿಗೆ ಭೂಸಂಕಟ: ಅಡಿಗೆ ಬಿದ್ದಿದ್ದ ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ಕೇಸ್‌ಗೆ ಸಿಬಿಐ ಮರುಜೀವ