Site icon Vistara News

CBI raids | ಡಿ.ಕೆ. ಶಿವಕುಮಾರ್ ಮೇಲೆ ಸಿಬಿಐ ದಾಳಿ: ಇದು ದ್ವೇಷದ ರಾಜಕಾರಣವೆಂದು ಕಾಂಗ್ರೆಸ್ ಆಕ್ರೋಶ

D K Shivakumar CBI raids protest

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ನಡೆಸಿರುವ ದಾಳಿಯನ್ನು (CBI raids) ವಿರೋಧಿಸಿ ಮಂಗಳವಾರ (ಡಿ.೨೦) ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

ನಗರದ ಕಾಂಗ್ರೆಸ್ ಭವನದಿಂದ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು
ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದರು.

ವಿರೋಧ ಪಕ್ಷಗಳ ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದು ದೂರಿದ್ದಾರೆ. ಸಿಬಿಐ, ಐಟಿ, ಇಡಿ ಮುಂತಾದ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದೆ. ಚುನಾವಣೆ ಸಮಯದಲ್ಲಂತೂ ಕಾಂಗ್ರೆಸ್ ಮುಖಂಡರನ್ನು ಬೆದರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದುವರೆಗೂ ನಡೆದಿರುವ ಐಟಿ, ಸಿಬಿಐ, ಇಡಿ ದಾಳಿಗಳಲ್ಲಿ ಶೇ.99ರಷ್ಟು ವಿರೋಧ ಪಕ್ಷಗಳ ಮುಖಂಡರೇ ಇದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ | Birthday Party | ವರ್ತೂರ್ ಪ್ರಕಾಶ್ ಹುಟ್ಟುಹಬ್ಬಕ್ಕೆ ಬಾಡೂಟ; ಬಿರಿಯಾನಿಗಾಗಿ ನೂಕುನುಗ್ಗಲು, ಲಾಟಿ ಏಟಿಗೆ ವೃದ್ಧನ ತಲೆಗೆ ಪೆಟ್ಟು

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪದೇ ಪದೆ ವಿರೋಧ ಪಕ್ಷಗಳ ಪ್ರಭಾವಿ ನಾಯಕರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಕೂಡ ಡಿ.ಕೆ. ಶಿವಕುಮಾರ್ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಅದರಲ್ಲೂ ಡಿಕೆಶಿ ಪ್ರಭಾವಿ ನಾಯಕರು ಎಂದು ಹೆದರಿ ಸಿಬಿಐ ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರ ಶಿಕ್ಷಣ ಸಂಸ್ಥೆಗಳು ಯಾವುದೂ ಇಲ್ಲವೇ? ಡಿಕೆಶಿಯವರ ಶಿಕ್ಷಣ ಸಂಸ್ಥೆಯೇ ಇವರಿಗೆ ಬೇಕಿತ್ತೇ? ಚುನಾವಣೆ ಸಮಯ ಬಂದರೆ ಸಾಕು ಇಂತಹ ಕಿರುಕುಳಗಳನ್ನು ನೀಡುತ್ತಾರೆ. ವಿಚಾರಣೆಯ ನೆಪದಲ್ಲಿ ಬೆದರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿಸಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್, ರೇಖಾ ರಂಗನಾಥ, ಎಚ್.ಸಿ. ಯೋಗೀಶ್, ದೇವೇಂದ್ರಪ್ಪ, ನಾರಾಯಣಸ್ವಾಮಿ, ಗಿರೀಶ್, ಮಧುಸೂದನ್, ಚಂದ್ರಭೂಪಾಲ್ ಇದ್ದರು.

ಇದನ್ನೂ ಓದಿ | Xiaomi Job cuts | ಶೇ.15ರಷ್ಟು ಉದ್ಯೋಗ ಕಡಿತ ಮಾಡಿದ ಸ್ಮಾರ್ಟ್‌ಫೋನ್ ಕಂಪನಿ ಶವೊಮಿ?

Exit mobile version