ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನ ಮೇರೆಗೆ ಏಕಕಾಲಕ್ಕೆ 500ಕ್ಕೂ ಹೆಚ್ಚು ಬಾರ್, ಪಬ್, ಹುಕ್ಕಾ ಬಾರ್ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ (CCB Police Raid) ಮಾಡಿದ್ದಾರೆ. ಕೋರಮಂಗಲ, ಇಂದಿರಾನಗರ, ಎಚ್ಎಸ್ಆರ್ ಲೇಔಟ್ , ಬಾಣಸವಾಡಿ, ಹೆಣ್ಣೂರು ಸೇರಿದಂತೆ ಹಲವೆಡೆ ಸಿಸಿಬಿ ದಾಳಿ ಮಾಡಿದೆ. ದಾಳಿ ವೇಳೆ ಹೆಚ್ಚಾಗಿ ಅಪ್ರಾಪ್ತರೇ ಇರುವುದು ಕಂಡು ಬಂದಿದೆ.
20ಕ್ಕೂ ಹೆಚ್ಚು ಅಪ್ರಾಪ್ತರು ಮದ್ಯಸೇವಿಸಿ ನಶೆಯಲ್ಲಿ ತೇಲಾಡುತ್ತಿರುವುದು ಕಂಡು ಬಂದಿದೆ. ಕೆಲ ಅಪ್ರಾಪ್ತೆಯರು ನಾವು ಮಾಜಿ ಸಚಿವ ಹಾಗೂ ಹಾಲಿ ಶಾಸಕರ ಕಡೆಯವರು ಎಂದು ಹೆಸರು ಹೇಳಿ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಬಾಣಸವಾಡಿಯ ಪಬ್ ಒಂದರಲ್ಲಿ ಅಪ್ರಾಪ್ತೆಯೊಬ್ಬಳು ಮದ್ಯ ಸೇವಿಸಿ ನಾನು ಸೀರಿಯಲ್ ಆರ್ಟಿಸ್ಟ್, ನಾವು ಎಂಎಲ್ಎ ಕಡೆಯವರು ಎಂದೇಳಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ಸದ್ಯ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಿದ ಆರೋಪದಲ್ಲಿ ಪಬ್, ಬಾರ್ಗಳ ಮೇಲೆ ಪೊಲೀಸರು ಕೇಸ್ ಹಾಕಿದ್ದಾರೆ. ಇತ್ತೀಚೆಗೆ ಶಾಲಾ -ಕಾಲೇಜು ಮುಖ್ಯಸ್ಥರು ಪೊಲೀಸ್ ಆಯುಕ್ತರಿಗೆ ಮನವಿ ಪತ್ರವನ್ನು ಕೊಟ್ಟಿದ್ದರು. ಅಪ್ರಾಪ್ತರು ಬಾರ್- ಪಬ್ಗಳಿಗೆ ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರ ನಿರ್ದೇಶನ ಮೇರೆಗೆ 500ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಕೇಸ್ ದಾಖಲು ಮಾಡಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯಿಸಿದ್ದಾರೆ. ಅನಧಿಕೃತವಾಗಿ ಅಪ್ರಾಪ್ತರಿಗೂ ಧೂಮಪಾನ, ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ದಾಳಿಯನ್ನು ಮಾಡಲಾಗಿದೆ. ಕೆಲವು ಕಡೆ ನಿಯಮ ಉಲ್ಲಂಘನೆಯಾಗಿದೆ. ಜ್ಯೂವನಲ್ ಆಕ್ಟ್ ಅಡಿ ಕೋಪ್ಟಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ