Site icon Vistara News

CCB Raid : ರೇಸ್‌ ಕುದುರೆಗಳ ಹಿಂದೆ ಬಿದ್ದ ಸಿಸಿಬಿ; ಟರ್ಫ್ ಕ್ಲಬ್‌ ರೇಸ್‌ ಕೋರ್ಸ್‌ ಬೇಟೆಯಲ್ಲಿ ಸಿಕ್ಕಿದ್ದು ಎಷ್ಟು?

CCB Police Raids On Bengaluru Turf club Race Course Booking Counters

ಬೆಂಗಳೂರು: ಡರ್ಬಿ.. ಓಡುವ ಕುದುರೆ ಹಿಂದೆ ಬಾಜಿ ಕಟ್ಟಿ ಗೆಲ್ಲುವುದು ಇಂದು-ನಿನ್ನೆಯದಲ್ಲ. ಬೆಂಗಳೂರಲ್ಲಿ ಹಲವು ವರ್ಷಗಳಿಂದಲೂ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿರುವ ರೇಸ್‌ ಆಟ. ಸದ್ಯ ಈ ಆಟದಲ್ಲಿ ಅಕ್ರಮದ ವಾಸನೆಯು ಸಿಸಿಬಿಗೆ (CCB Raid) ಮುಟ್ಟಿತ್ತು. ಕೋಟಿ ‌ಕೋಟಿ ಬೆಟ್ಟಿಂಗ್ ಅಕ್ರಮವಾಗಿ‌ ನಡೆಯುತ್ತಿದೆ ಎನ್ನಲಾಗಿತ್ತು. ಇದರಿಂದ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ವಂಚನೆ ಮಾಡುತ್ತಿರುವುದರ ಬಗ್ಗೆ ಮಾಹಿತಿ ಇತ್ತು. ಹೀಗಾಹಿ ಜ.12ರ ಸಂಜೆ ರೇಸ್‌ಕೋರ್ಸ್‌ನ ಟರ್ಫ್‌ ಕ್ಲಬ್‌ ಮೇಲೆ ದಾಳಿ ನಡೆಸಿದ (race course bangalore) ಸಿಸಿಬಿ ಅಧಿಕಾರಿಗಳು ಬೆಳಗಾಗುವುದರೊಳಗೆ ಬರೋಬ್ಬರಿ ಮೂರುವರೆ ಕೋಟಿ ರೂಪಾಯಿ ವಶಪಡಿಸಿಕೊಂಡಿದೆ.

ರೇಸ್ ಕೋರ್ಸ್‌ನಲ್ಲಿ ನಿನ್ನೆ ಶುಕ್ರವಾರ ಕುದುರೆಗಳ ಓಟದ ಬದಲಿಗೆ ಸಿಸಿಬಿ ಬೇಟೆ ಶುರುವಾಗಿತ್ತು. ಸಂಜೆ ಏಕಾಏಕಿ ಎಂಟ್ರಿ ಕೊಟ್ಟ ಸಿಸಿಬಿ ಅಧಿಕಾರಿಗಳು ಬುಕ್‌ ಮೇಕರ್‌ಗಳ ಕೌಂಟರ್‌ಗೆ ಎಂಟ್ರಿ ಕೊಟ್ಟಿದ್ದರು. ಕೌಂಟರ್‌ನಲ್ಲಿದ್ದ ಗರಿಗರಿ ನೋಟುಗಳು, ಗ್ರಾಹಕರಿಗೆ ಹಂಚುತ್ತಿದ್ದ ಟಿಕೆಟ್‌ಗಳ ಪರಿಶೀಲನೆಗೆ ಮುಂದಾಗಿದ್ದರು.

ಟರ್ಫ್ ಕ್ಲಬ್‌ನಲ್ಲಿ ನಡೆಯುವ ವ್ಯವಹರದಲ್ಲಿ ಅಕ್ರಮ ನಡೆಯುತ್ತಿದ್ದು, ಸರ್ಕಾರಕ್ಕೆ ಭಾರಿ ವಂಚನೆ ಮಾಡಲಾಗುತ್ತಿದೆ ಎನ್ನಲಾಗಿತ್ತು. ನಿಗದಿ ಮಾಡಲಾದ ಟಿಕೆಟ್‌ನ ದರಕ್ಕಿಂತ ಹೆಚ್ಚಿನ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡಿ, ಹೆಚ್ಚಿನ ಹಣ ಪಡೆಯುತ್ತಿದ್ದರು. ಅಷ್ಟೇ ಅಲ್ಲದೇ ಬಂದ ಹಣದಲ್ಲಿ ಜಿಎಸ್‌ಟಿ ಕಟ್ಟದೇ ಸರ್ಕಾರಕ್ಕೆ ತೆರಿಗೆ ವಂಚನೆಯನ್ನೂ ಮಾಡಲಾಗುತ್ತಿದೆ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ದಾಳಿ ನಡೆಸಿದ್ದ ಸಿಸಿಬಿ ಬರೋಬ್ಬರಿ 26ಕ್ಕೂ ಅಧಿಕ ಬುಕ್ ಮೇಕರ್‌ಗಳ ಕೌಂಟರ್‌ಗಳಿಗೆ ದಾಳಿ ಮಾಡಿತ್ತು.

ಇದನ್ನೂ ಓದಿ: Tiger Attack : ಕರುವಿನ ಹೊಟ್ಟೆ ಬಗೆದು ತಿಂದ ವ್ಯಾಘ್ರ; ಕಾರವಾರದಲ್ಲಿ ಹುಲಿ ಭೀತಿ ಶುರು

ದಾಳಿ ವೇಳೆ ಪತ್ತೆಯಾದ ದಾಖಲೆ, ಟಿಕೆಟ್ ಹಾಗೂ ಇದ್ದ ಹಣಗಳ ಪರಿಶೀಲನೆ ನಡೆಸಿದ ಸಿಸಿಬಿಗೆ ಜಿಎಸ್‌ಟಿ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿರುವುದು ಪತ್ತೆಯಾಗಿದೆ. ಲೆಕ್ಕಕ್ಕೆ ಸಿಗದ 3 ಕೋಟಿ 47 ಲಕ್ಷ ರೂಪಾಯಿ ಪತ್ತೆಯಾಗಿದೆ. ಇನ್ನು ಸಿಸಿಬಿ ದಾಳಿ ವೇಳೆ ಅಧಿಕೃತ ಬೆಟ್ಟಿಂಗ್ ನಡುವೆಯೇ ಅನಧಿಕೃತ ಬೆಟ್ಟಿಂಗ್‌ಗಳು ಪತ್ತೆಯಾಗಿವೆ. ಯಾವುದೇ ಡಾಕ್ಯುಮೆಂಟ್ ಅಥವಾ ರಶೀದಿ ಕೊಡದೇ ಹಣದ ವ್ಯವಹಾರವನ್ನು ಕೆಲವರು ನಡೆಸುತ್ತಿರುವುದು ಕಂಡು ಬಂದಿದೆ. ಇನ್ನು ಈ ವ್ಯವಹಾರಗಳು ಕಾಣದಂತೆ ನಡೆಯುತ್ತಿದ್ದು, ಸರ್ಕಾರಕ್ಕೆ ಭಾರಿ ಮೊತ್ತದ ಜಿಎಸ್‌ಟಿ ಸಹ ವಂಚನೆ ಮಾಡಲಾಗಿದೆ. ಸದ್ಯ ದಾಳಿ ವೇಳೆ ಸಿಕ್ಕ ನಗದು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಈ ಸಂಬಂಧ 66 ಮಂದಿಯನ್ನು ವಶಕ್ಕೆ ಪಡೆದು ಹೇಳಿಕೆ ಪಡೆದು ಬಿಟ್ಟು ಕಳುಹಿಸಿದ್ದಾರೆ.

66 ಮಂದಿಯನ್ನು ವಿಚಾರಣೆ ಮಾಡಿರುವ ಸಿಸಿಬಿ ಅಧಿಕಾರಿಗಳು ಅನಧಿಕೃತ ಬೆಟ್ಟಿಂಗ್ ದಂಧೆ ಹಿಂದೆ ಯಾರಿದ್ದಾರೆ? ಇದರ ಲಾಭ ಯಾರು ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಇದರಲ್ಲಿ ಕೆಲವು ರೌಡಿಗಳ ಹೆಸರು ಕೂಡ ಕೇಳಿ ಬಂದಿದೆ ಎನ್ನಲಾಗಿದೆ. ಹೀಗಾಗಿ ದಾಳಿ ಸಂಬಂಧ ಈಗ ಬುಕ್ ಮೇಕರ್‌ಗಳಿಗೆ ಸಿಆರ್‌ಪಿಸಿ 41ರ ಅಡಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version