ಬೆಂಗಳೂರು: ಅಂಗನವಾಡಿ ಮಕ್ಕಳಿಗೆ ನೀಡಲಾಗಿದ್ದ ಮೊಟ್ಟೆಯನ್ನು ತಟ್ಟೆಯಿಂದ ಎತ್ತಿಕೊಳ್ಳುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಶಿಶು ಅಭಿವೃದ್ಧಿಕಾರಿ (ಸಿಡಿಪಿಒ) ಅಮಾನತು (CDPO suspended) ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ. ಜೊತೆಗೆ ಕೊಪ್ಪಳ ಜಿಲ್ಲಾ ಉಪ ನಿರ್ದೇಶಕರಿಗೆ (ಡಿಡಿ) ನೋಟೀಸ್ ನೀಡಲು ಸೂಚಿಸಿದ್ದಾರೆ.
ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿಯ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಸಹಾಯಕಿ ಶಹನಾಜ್ ಬೇಗಂ ಅವರ ಮೊಟ್ಟೆ ವಂಚನೆ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತಕ್ಷಣ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಿದರು. ಇಡೀ ಪ್ರಕರಣದ ವರದಿ ನೀಡುವಂತ ಆದೇಶಿಸಿದ್ದಾರೆ.
ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಕೆಳ ಹಂತದಿಂದ ಇಲಾಖೆಯಲ್ಲಿ ಸುಧಾರಣೆ ತರಬೇಕು ಅಂತ ಕಷ್ಟ ಪಡುತ್ತಿದ್ದೇನೆ. ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣ ಅಂಗನವಾಡಿಯ ಮೂಲ ಉದ್ದೇಶ. ಆದರೆ, ಬಡಮಕ್ಕಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಒಂದು ಮಗುವಿಗೆ ಊಟಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 8 ರೂ. ಭರಿಸಲಾಗುತ್ತಿದೆ. ಕಳೆದ 9 ವರ್ಷಗಳಿಂದ ಯೂನಿಟ್ ದರ ಏರಿಕೆ ಮಾಡಿಲ್ಲ. ಬೇಳೆಗಳ ಬೆಲೆ ಬಹಳಷ್ಟು ಹೆಚ್ಚಳವಾಗಿದೆ. ಮೊಟ್ಟೆ, ಗುಣಮಟ್ಟದ ಕೆನೆ ಭರಿತ ಹಾಲು ಕೊಡುವುದು ಸಿಎಂ ಸಿದ್ದರಾಮಯ್ಯ ಸರ್ಕಾರದ ಯೋಜನೆ. ಮಕ್ಕಳಿಗೆ ಊಟ ಬಡಿಸುವ ವೇಳೆ ಕಡ್ಡಾಯವಾಗಿ ವೀಡಿಯೊ ಚಿತ್ರೀಕರಣ ಮಾಡಬೇಕು ಎಂದು ತಿಳಿಸಿದರು.
ಚಿತ್ರೀಕರಣದ ಬಳಿಕ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ವಾಟ್ಸ್ ಆ್ಯಪ್ ಗ್ರೂಪ್‌ಗಳ ಮೂಲಕ ಅಪ್ ಲೋಡ್ ಆಗಬೇಕು. ಇದೇ ರೀತಿಯ ಪ್ರಕರಣ ಕಳೆದ ಬಾರಿಯೂ ಕೇಳಿಬಂದಿದ್ದು, ನಂತರ ವೀಡಿಯೊ ಚಿತ್ರೀಕರಣ ಕಡ್ಡಾಯ ಮಾಡಿದ್ದೇವೆ. ಇದೀಗ ವೀಡಿಯೋ ಚಿತ್ರೀಕರಣ ಕಡ್ಡಾಯದಿಂದಲೇ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದರು.
ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನೋ ಸ್ಥಿತಿ ಮಕ್ಕಳಿಗೆ ಆಗಿದೆ. 69 ಸಾವಿರ ಅಂಗನವಾಡಿಗಳನ್ನು ಕರ್ನಾಟಕ ರಾಜ್ಯದಲ್ಲಿ ನಡೆಸುತ್ತಿದ್ದೇವೆ ಎಲ್ಲೋ ಒಂದು ಕಡೆ ಆದ್ರೆ ಸಂಪೂರ್ಣ ಇಲಾಖೆಗೆ ಕಷ್ಟ ಆಗುತ್ತೆ. ನಿನ್ನೆ ರಾತ್ರಿಯೇ ಈ ಪ್ರಕರಣ ನನ್ನ ಗಮನಕ್ಕೆ ಬಂದಿದ್ದು ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಆ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನ ಈಗಾಗಲೇ ಕೆಲಸದಿಂದ ಸಸ್ಪೆಂಡ್ ಮಾಡಲಾಗಿದ್ದು , ಇಂತಹ ತಪ್ಪನ್ನು ಮಾಡಿದ್ರೆ ಕಡ್ಡಾಯವಾಗಿ ಕೆಲಸದಿಂದ ನಿವೃತ್ತಿಗೊಳಿಸುತ್ತೇನೆ. ಬೇರೆಯವರಿಗೆ ಈ ಪ್ರಕರಣ ಪಾಠ ಆಗಬೇಕು. ಸಿಡಿಪಿಒ ಅಮಾನತು ಮಾಡಿ, ಡಿಡಿಗೆ ನೋಟೀಸ್ ನೀಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅಧ್ಯಕ್ಷತೆಯಲ್ಲಿ ಸಭೆ
ಬೆಂಗಳೂರು: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಅನ್ನಪೂರ್ಣ ದೇವಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರುಗಳ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸಿದರು.
ಇಲಾಖೆ ವತಿಯಿಂದ ಕರ್ನಾಟಕದಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಇಲಾಖೆಯ ಪ್ರಗತಿ ಕುರಿತು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದ ಸಚಿವರು, ಜತೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಎಲ್ಲಾ ಅನುದಾನದ ಕುರಿತು ಮತ್ತೊಮ್ಮೆ ಸದರಿ ಸಭೆಯಲ್ಲಿ ಪ್ರಸ್ತಾಪ ಮಾಡಿದರು.
ಇದನ್ನೂ ಓದಿ | CM Siddaramaiah: ಆರೋಪಗಳ ವಿರುದ್ಧ ರಾಜಕೀಯ, ಕಾನೂನು ಹೋರಾಟಕ್ಕೆ ಸಿದ್ಧ: ಸಿಎಂ ಸಿದ್ದರಾಮಯ್ಯ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಶಾಮಲಾ ಇಕ್ಬಾಲ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್ ಉಪಸ್ಥಿತರಿದ್ದರು.