ಶಿವಮೊಗ್ಗ: ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿನ ಅಡಿಕೆ ತೋಟಗಳ ನಾಶಕ್ಕೆ ಕಾರಣವಾಗುತ್ತಿರುವ ಎಲೆ ಚುಕ್ಕಿ ರೋಗದ (arecanut leaf spot disease) ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿರುವ ಏಳು ತಜ್ಞರ ಸಮಿತಿಯು ಜಿಲ್ಲೆಯ ತೀರ್ಥಹಳ್ಳಿಗೆ ಆಗಮಿಸಿದ್ದು, ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ.
ಈ ವಿಷಯವನ್ನು ರಾಜ್ಯ ಅಡಿಕೆ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ತಿಳಿಸಿದ್ದಾರೆ. ಮಂಗಳವಾರ ಈ ತಜ್ಞರ ತಂಡದೊಂದಿಗೆ ಸಭೆ ನಡೆಸಿದ ಸಚಿವರು, ಕೊರೊನಾಕ್ಕೆ ಲಸಿಕೆ ಕಂಡು ಹಿಡಿದಂತೆಯೇ ಅತಿ ಶೀಘ್ರವಾಗಿ ಈ ಎಲೆ ಚುಕ್ಕಿ ರೋಗದ ನಿಯಂತ್ರಣಕ್ಕೂ ಔಷಧಿ ಕಂಡು ಹಿಡಿಯಬೇಕೆಂದು ತಜ್ಞರ ತಂಡಕ್ಕೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಒಟ್ಟು 45,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಎಲೆ ಚುಕ್ಕಿ ರೋಗ ಹರಡಿದೆ. ಕೇಂದ್ರ ಸರ್ಕಾರ 50 ಲಕ್ಷ ರೂ. ಸಂಶೋಧನೆಗಾಗಿ ಬಿಡುಗಡೆ ಮಾಡಿದೆ. ಅಡಿಕೆ ಟಾಸ್ಕ್ ಫೋರ್ಸ್ ವತಿಯಿಂದ 3 ಕೋಟಿಯನ್ನು ಸಂಶೋಧನೆಗಾಗಿ ನೀಡಲಾಗುವುದು. ಈ ರೋಗಕ್ಕೆ ಕೂಡಲೇ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮತ್ತು ದೀರ್ಘಕಾಲಿಕ ಪರಿಹಾರವನ್ನು ತಜ್ಞರು ಸಂಶೋಧಿಸಿ ಸೂಚಿಸಲಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದು ಹೊಸ ರೋಗ ಅಲ್ಲ. 1994ರಲ್ಲಿ ಕಾಫಿ ಬೆಳೆಗೆ ಕಾಣಿಸಿಕೊಂಡಿತ್ತು. ನಮ್ಮಲ್ಲಿ ಹಿಂದಿನಿಂದಲೇ ಇದ್ದ ರೋಗ. ಈಗ ಇದ್ದಕ್ಕಿದ್ದಂತೆ ವ್ಯಾಪಕವಾಗಿ ಹರಡುತ್ತಿದೆ. ಹವಾಮಾನ ವೈಪರೀತ್ಯದ ಕಾರಣಕ್ಕೆ ಈಗ ಈ ರೀತಿಯಾಗುತ್ತಿರಬಹುದು. ಈ ಬಗ್ಗೆ ಅಡಿಕೆ ಬೆಳೆಗಾರರು ಚಿಂತಿಸಬೇಕಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಮ್ಮೊಂದಿಗಿದೆ. ಆದಷ್ಟು ಬೇಗ ಈ ಕಾಯಿಲೆಗೆ ಔಷಧಿ ಕಂಡು ಹಿಡಿಯುತ್ತೇವೆ. ವಿಜ್ಞಾನಿಗಳ ಈ ತಂಡ ತೋಟಗಳ ಪರಿಶೀಲನೆ ನಡೆಸಿದ ನಂತರ ತೀರ್ಥಹಳ್ಳಿಯಲ್ಲಿಯೇ ವಿಜ್ಞಾನಿಗ ಸಭೆ ಕರೆಯುತ್ತೇವೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಸಂಸ್ಥೆಗಳ ವಿಜ್ಞಾನಿಗಳು, ಅಂತರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲರೂ ನೀಡಿ ಇದಕ್ಕೊಂದು ಪರಿಹಾರ ಕಂಡು ಹಿಡಿಯುವಂತೆ ಮಾಡುತ್ತೇವೆ ಎಂದು ಜ್ಞಾನೇಂದ್ರ ಹೇಳಿದರು.
ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ (ಸಿಪಿಸಿಆರ್‌ಐ) ಮುಖ್ಯಸ್ಥ ಡಾ. ಮುರುಳೀಧರ್, ಕೇಂದ್ರ ಸಸ್ಯ ರೋಗ ಶಾಸ್ತ್ರ ವಿಜ್ಞಾನಿ ವಿನಾಯಕ ಹೆಗಡೆ, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎಂ.ವಾಲಿ, ಕಲ್ಲಿಕೋಟೆಯ ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಹೋಮಿ ಚೆರಿಯನ್, ಮಂಗಳೂರು ತೋಟಗಾರಿಕೆ ಉಪ ನಿರ್ದೇಶಕ ಡಾ. ಹೆಚ್ ಆರ್ ನಾಯಕ್, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ತೋಟಗಾರಿಕೆ ಆಡಳಿತ ಮಂಡಳಿ ಸದಸ್ಯ ಅರುಣ್ ಕುಮಾರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ಈ ಸಭೆಯಲ್ಲಿ ಭಾಗವಹಿಸಿದ್ದರು.
ಎಲೆ ಚುಕ್ಕೆ ರೋಗದಿಂದ ಅಡಕೆ ತೋಟ ನಾಶವಾಗುತ್ತಿರುವ ಕುರಿತು ಅಕ್ಟೋಬರ್ 19ರಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ರಾಜ್ಯ ಅಡಿಕೆ ಕಾರ್ಯಪಡೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಕೇಂದ್ರ ಸರ್ಕಾರದ ಗಮನ ಸೆಳೆದು, ಇದಕ್ಕೆ ಔಷಧವನ್ನು ಕಂಡು ಹಿಡಿಯಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿತ್ತು.
ಇದಕ್ಕೆ ತಕ್ಷಣ ಸ್ಪಂದಿಸಿದ ಕೇಂದ್ರ ಕೃಷಿ ಇಲಾಖೆಯು ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ (ಸಿಪಿಸಿಆರ್‌ಐ) ಭಾರತೀಯ ಕೃಷಿ ವಿಜ್ಞಾನ ಪರಿಷತ್‌ನ ನಿರ್ದೇಶಕಿ ಅನಿತಾ ಕರುಣ್ ಅವರನ್ನೊಳಗೊಂಡ ಏಳು ಸದಸ್ಯರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿತ್ತು. ಅಡಿಕೆಯ ಎಲೆ ಚುಕ್ಕಿ ರೋಗದ ಸಮಸ್ಯೆ ಬಗೆಹರಿಸಲು ಕಾರ್ಯತಂತ್ರಗಳನ್ನು ರೂಪಿಸುವಂತೆ ಈ ಸಮಿತಿಗೆ ಆದೇಶ ನೀಡಿತ್ತು.
ಈಗಾಗಲೇ ಒಂದು ಸಭೆ ನಡೆಸಿರುವ ತಂಡ ಇದೀಗ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸೋಮವಾರ ತಜ್ಞರ ತಂಡವು ಚಿಕ್ಕಮಗಳೂರಿನ ಶೃಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿನ ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಿತ್ತು. ಸ್ಥಳೀಯ ಶಾಸಕ ಟಿ.ಡಿ. ರಾಜೇಗೌಡ ತಜ್ಞರ ತಂಡಕ್ಕೆ ಈ ರೋಗದಿಂದ ಆಗುತ್ತಿರುವ ಅನಾಹುತಗಳನ್ನು ವಿವರಿಸಿದ್ದರು. ಕೂಡಲೇ ಇದಕ್ಕೆ ಪರಿಹಾರವನ್ನು ಕಂಡು ಹಿಡಿಯುವಂತೆ ಮನವಿ ಕೂಡ ಮಾಡಿದ್ದರು.
ಸಮಿತಿಯು ನವೆಂಬರ್ 3 ರಂದು ಕಾಸರಗೋಡಿನ ಸಿಪಿಸಿಆರ್‌ಐನಲ್ಲಿ ಸಭೆ ನಡೆಸಿದ್ದು, ಈ ರೋಗ ವೇಗವಾಗಿ ಹರಡುತ್ತಿರುವ ಕುರಿತು ಚರ್ಚೆ ನಡೆಸಿದೆ. ಅಲ್ಲದೆ ನವೆಂಬರ್ ೪ ರಂದು ಮಂಗಳೂರಿನಲ್ಲಿ ಕ್ಯಾಂಪ್ಕೊ ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ್ದ ಅಡಿಕೆಯ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗದ ಅಧ್ಯಯನದ ಕುರಿತ ವಿಚಾರ ಸಂಕಿರಣದಲ್ಲಿಯೂ ಈ ಸಮಿತಿಯ ತಜ್ಞರು ಭಾಗವಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | ಅಡಕೆ ಎಲೆಚುಕ್ಕಿ ರೋಗ | ಕೇಂದ್ರದ ಗಮನ ಸೆಳೆದ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ನಿಯೋಗ