ನವದೆಹಲಿ: ಕರ್ನಾಟಕ ಸರ್ಕಾರದ ಮಹದಾಯಿ (Mahadayi ) ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್)ಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದಕ್ಕೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇದರ ಮಧ್ಯೆಯೇ ರಾಜ್ಯಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಮಹದಾಯಿ ಯೋಜನೆ ಕುರಿತು ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯು ಕರ್ನಾಟಕ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದೇ ಹೇಳಲಾಗುತ್ತಿದೆ.
ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಕಂಬಗಳ ಬಳಕೆ ಬೇಡ. ಬದಲಿಗೆ ಭೂಮಿಯೊಳಗೆ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಯೋಜನೆಗೆ ಬಳಕೆಯಾಗುವ ಅರಣ್ಯ ಪ್ರದೇಶ ನಾಶ ಮಾಡುವುದು ಬೇಡ. ಯಾವುದೇ ಮರಗಳನ್ನು ಕಡಿಯಲು ಅರಣ್ಯ ಸಚಿವಾಲಯದ ಅನುಮತಿ ಇಲ್ಲ. ಈಗಾಗಲೇ ಕಡ್ಡಾಯ ಅರಣ್ಯೀಕರಣಕ್ಕೆ ಗುರುತಿಸಿರುವ 60 ಹೆಕ್ಟೇರ್ ಅರಣ್ಯ ಭೂಮಿಯ ಮಾಹಿತಿ ನೀಡಿ ಎಂಬುದು ಸೇರಿ ಹಲವು ಸೂಚನೆಗಳನ್ನು ನೀಡಲಾಗಿದೆ. ಇದರಿಂದಾಗಿ ಕರ್ನಾಟಕ ಸರ್ಕಾರವು ಸುಗಮವಾಗಿ ಯೋಜನೆ ಜಾರಿಗೊಳಿಸುವುದು ಕಷ್ಟ ಎನ್ನಲಾಗುತ್ತಿದೆ.
ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ, ನಿಗದಿಪಡಿಸಿರುವ ಅರಣ್ಯೇತರ ಭೂಮಿ ಋಣಭಾರದ ಪಟ್ಟಿಯಲ್ಲಿದೆ. ಆದ್ದರಿಂದ, ಸಮಾನವಾದ ಅರಣ್ಯೇತರ ಭೂಮಿಯನ್ನು ಸರ್ಕಾರ ಸೂಚಿಸಬೇಕು. ಸೂಚಿಸುವ ಅರಣ್ಯೇತರ ಭೂಮಿ ಮತ್ತು ಅದರ ವಿವರ ಒದಗಿಸಬೇಕು. ಪ್ರಮಾಣಪತ್ರ, ಯೋಜನೆ, ನಕ್ಷೆ ಸಹಿತ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ಯೋಜನೆಗೆ ಓವರ್‌ಹೆಡ್ ಟ್ರಾನ್ಸ್‌ಮಿಷನ್ ಲೈನ್‌ಗಳನ್ನು ಅಳವಡಿಸಬೇಕಾಗುತ್ತದೆ. ಇದು ಹಾಲಿ ಯೋಜನಾ ಸ್ಥಳ, ವನ್ಯಜೀವಿ ಸಂರಕ್ಷಣಾ ಪ್ರದೇಶಕ್ಕೆ ಹತ್ತಿರವಾಗಿದೆ. ಹಾಗಾಗಿ, ಇದನ್ನು ಅತೀ ಸೂಕ್ಷ್ಮ ಪ್ರದೇಶವಾಗಿರುವುದು ಗುರುತಿಸಲಾಗಿದೆ. ಈ ಯೋಜನೆಯಿಂದ ಪ್ರಾಣಿ ಸಂರಕ್ಷಣೆಗೆ ಯಾವುದೇ ಯಾವುದೇ ಹಾನಿಯಾಗಿವುದಿಲ್ಲವೆಂದು ಪ್ರಮಾಣ ಪತ್ರ ಒದಗಿಸಿ ಎಂಬುದಾಗಿ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರವು ಮಹದಾಯಿ ಯೋಜನೆಯ ಡಿಪಿಆರ್‌ಗಳಿಗೆ ಅನುಮೋದನೆ ನೀಡಿತ್ತು. ಇದರಿಂದ ರಾಜ್ಯದ ಯೋಜನೆ ಜಾರಿ ಕುರಿತು ಆಶಾಭಾವನೆ ಮೂಡಿತ್ತು. ಆದರೀಗ, ಕೇಂದ್ರ ಪರಿಸರ ಸಚಿವಾಲಯವು ಸ್ಪಷ್ಟನೆ ನೀಡಿದ್ದು, ಮುಂದಿನ ಬೆಳವಣಿಗೆಗಳು ಆತಂಕ ಮೂಡಿಸಿವೆ.
ಇದನ್ನೂ ಓದಿ | Mahadayi Dispute | ಮಹದಾಯಿ ಡಿಪಿಆರ್‌ಗೆ ಕೇಂದ್ರದ ಸಮ್ಮತಿ ವಿರೋಧಿಸಿ ಶೀಘ್ರವೇ ಮೋದಿ ಬಳಿ ನಿಯೋಗ ಎಂದ ಗೋವಾ