ಬೆಂಗಳೂರು: ರಾಜ್ಯ ಎನ್ಎಸ್ಎಸ್ ಕೋಶಕ್ಕೆ ಮತ್ತಷ್ಟು ಬಲ ತುಂಬಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಕೇಂದ್ರ 10 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್ಎಸ್ಎಸ್ ಕೋಶಕ್ಕೆ ಹೆಚ್ಚುವರಿಯಾಗಿ 42,800 ಸ್ವಯಂ ಸೇವಕರನ್ನು ಸೇರಿಸಿಕೊಳ್ಳಲು ಕೇಂದ್ರ ಅನುಮೋದನೆ ನೀಡಿದೆ.
ಇದನ್ನೂ ಓದಿ | ಸಚಿವ ನಾರಾಯಣಗೌಡ ಪೊಲಿಟಿಕಲ್ ಬೆಗ್ಗರ್: ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್
ಇದುವರೆಗೂ 2,78,200 ಸ್ವಯಂಸೇವಕರನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ಎನ್ಎಸ್ಎಸ್ ಕೋಶವು ಇದುವರೆಗೆ 5,00,000 ಸ್ವಯಂಸೇವಕರನ್ನು ನೋಂದಾಯಿಸಿದೆ. 2022-23ನೇ ಸಾಲಿಗೆ ರಾಜ್ಯ ಎನ್ಎಸ್ಎಸ್ ಕೋಶವು ಹೆಚ್ಚುವರಿ ಸ್ವಯಂಸೇವಕರ ಹಂಚಿಕೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 42,800 ಸ್ವಯಂಸೇವಕರ ಸಂಖ್ಯಾಬಲವನ್ನು ಹಂಚಿಕೆ ಮಾಡಿದೆ. ರಾಜ್ಯದ ಎನ್‌ಎಸ್ಎಸ್ ಸ್ವಯಂ ಸೇವಕರ ಸಂಖ್ಯೆ 2,78,200 ರಿಂದ 3,21,000ಕ್ಕೆ ಏರಿಕೆಯಾಗಿದ್ದು, ಕರ್ನಾಟಕವು ಹೆಚ್ಚುವರಿ ಸ್ವಯಂಸೇವಕರ ಸಂಖ್ಯಾಬಲದ ಹಂಚಿಕೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.
ಅನುದಾನ ಪರಿಷ್ಕರಣೆ
ಕೇಂದ್ರ ಸರ್ಕಾರವು ರಾಷ್ಟ್ರೀಯ ಸೇವಾ ಯೋಜನೆಯ ದೈನಂದಿನ ಚಟುವಟಿಕೆಗಳಿಗೆ ಮತ್ತು ವಿಶೇಷ ಶಿಬಿರಗಳಿಗೆ ಪ್ರತಿ ಸ್ವಯಂಸೇವಕರಿಗೆ ನೀಡುತ್ತಿದ್ದ ಅನುದಾನ 250 ರೂ. ಮತ್ತು 450 ರೂ. ಪರಿಷ್ಕರಿಸಿ, 400 ರೂ. ಮತ್ತು 700 ರೂ.ಗಳಿಗೆ ಹೆಚ್ಚಳ ಮಾಡಿದೆ. ಈ ಹಿನ್ನೆಲೆಯಲ್ಲಿ NSS ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕರ್ನಾಟಕಕ್ಕೆ ಒಟ್ಟು 24.75 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ವಿದ್ಯಾರ್ಥಿಯ ಮಾನಸಿಕ ವಿಕಾಸವೆ ಶಿಕ್ಷಣದ ಉದ್ದೇಶ: ಸಾಹಿತಿ ಶ್ರೀಧರ ಬಳಗಾರ