ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋಗೆ (Karnataka Tableau) ಅವಕಾಶ ನೀಡಲಾಗಿದೆ. ಸುಮಾರು 13 ವರ್ಷಗಳಿಂದ ಕರ್ನಾಟಕವು ಪ್ರತಿನಿಧಿಸುತ್ತಿದ್ದರಿಂದ ಈ ಬಾರಿ ಕೈ ಬಿಡಲಾಗಿತ್ತು. ಆದರೆ, ಮೂರ್ನಾಲ್ಕು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ, ಈ ವಿಷಯವು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಹೀಗಿದ್ದೂ, ಜನವರಿ 15ರಂದು ಟ್ಯಾಬ್ಲೋ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಅಂದು ಅಧಿಕೃತ ಮಾಹಿತಿ ಹೊರಬೀಳಲಿದೆ.
ಪ್ರತಿಪಕ್ಷವು ಕಾಂಗ್ರೆಸ್ ಟ್ಯಾಬ್ಲೋ ವಿಷಯದಲ್ಲಿ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿಯನ್ನು ಮಾಡಿತ್ತು. ಹಾಗಾಗಿ, ಅಂತಿಮ ಕ್ಷಣದಲ್ಲಿ ಕೇಂದ್ರ ಸರ್ಕಾರವು, ಕರ್ನಾಟಕದ ಟ್ಯಾಬ್ಲೋಗೆ ಅವಕಾಶ ಕಲ್ಪಿಸಿದೆ. ಇದರೊಂದಿಗೆ 14ನೇ ಬಾರಿಗೆ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ಸಿಕ್ಕಂತಾಗಿದೆ. ಕರ್ನಾಟಕದ ನಾರಿಶಕ್ತಿ ಪರಿಕಲ್ಪನೆಯ ಟ್ಯಾಬ್ಲೋಗೆ ಕೇಂದ್ರ ಸರ್ಕಾರವು ತನ್ನ ಒಪ್ಪಿಗೆಯನ್ನು ನೀಡಲಿದೆ.
ಜನವರಿ 15ಕ್ಕೆ ಸಭೆ
ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಟ್ಯಾಬ್ಲೋಗಳ ಆಯ್ಕೆ ಸಮಿತಿಯು ಜನವರಿ 15ಕ್ಕೆ ಸಭೆ ಸೇರಲಿದೆ. ಅಂದು ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಲಿದೆ. ಈಗಿನ ಮಾಹಿತಿಗಳ ಪ್ರಕಾರ, ಗಣ ರಾಜ್ಯೋತ್ಸವದಲ್ಲಿ ಕರ್ನಾಟಕವು ಪ್ರತಿನಿಧಿಸಲು ಅವಕಾಶ ದೊರೆತಿರುವುದು ಖಚಿತಪಟ್ಟಿದೆ. ಈವರೆಗೆ ಕರ್ನಾಟಕವು 13 ಬಾರಿ ತನ್ನ ಟ್ಯಾಬ್ಲೋಗಳನ್ನು ಪ್ರದರ್ಶನ ಮಾಡಿದೆ. ಕಳೆದ ಬಾರಿ ಕರ್ನಾಟಕವು ಸಾಂಸ್ಕೃತಿಕ ಥೀಮ್ ಟ್ಯಾಬ್ಲೋ ಪ್ರದರ್ಶನ ಮಾಡಿತ್ತು.
ನಾರಿಶಕ್ತಿ ಟ್ಯಾಬ್ಲೋ
ಕರ್ನಾಟಕವು ಈ ಬಾರಿ ನಾರಿಶಕ್ತಿ ಪರಿಕಲ್ಪನೆಯ ಟ್ಯಾಬ್ಲೋ ಮಾದರಿ ಸಿದ್ಧಪಡಿಸಿ, ಆಯ್ಕೆಗೆ ಕಳುಹಿಸಿಕೊಟ್ಟಿತ್ತು. ಆದರೆ, ಬೇರೆ ಬೇರೆ ರಾಜ್ಯಗಳಿಗೂ ಅವಕಾಶ ನೀಡುವುದಕ್ಕಾಗಿ ಕರ್ನಾಟಕದ ಟ್ಯಾಬ್ಲೋವನ್ನು ತಿರಸ್ಕರಿಸಲಾಗಿತ್ತು. ಈಗ ಮತ್ತೆ ಒಪ್ಪಿಗೆ ದೊರೆತಿದೆ. ಕರ್ನಾಟಕವು ಈ ಬಾರಿ ಹೂ ಕೃಷಿ, ರೇಷ್ಮೆ, ನಾರಿಶಕ್ತಿ ಪರಿಕಲ್ಪನೆಗಳನ್ನು ನೀಡಿತ್ತು. ಕೊನೆಗೆ ನಾರಿಶಕ್ತಿ ಮಾದರಿ ಫೈನಲ್ ಆಗಿತ್ತು.
ಕಾಂಗ್ರೆಸ್ ವಾಗ್ದಾಳಿ
ಕರ್ನಾಟಕದ ಟ್ಯಾಬ್ಲೋವನ್ನು ತಿರಸ್ಕರಿಸಲಾಗಿದೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಪ್ರತಿಪಕ್ಷವಾಗಿರವ ಕಾಂಗ್ರೆಸ್, ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ರಾಜ್ಯದ ಹೆಮ್ಮೆಯ ಸಂಗತಿಗಳನ್ನು ಕಡೆಗಣಿಸಿರುವ ಬೊಮ್ಮಾಯಿ ಸರ್ಕಾರವು ಶೇ.40 ಭ್ರಷ್ಟಾಚಾರದಲ್ಲಿ ಬ್ಯೂಸಿಯಾಗಿದೆ ಎಂದು ಸಿದ್ದರಾಮಯ್ಯ ಅವರು ಟೀಕಿಸಿದ್ದರು.
ಆದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದನ್ನು ಬಿಡಬೇಕು. ಬೇರೆ ಬೇರೆ ರಾಜ್ಯಗಳಿಗೆ ಅವಕಾಶ ಕೊಡುವುದಕ್ಕಾಗಿ ಕರ್ನಟಕದ ಟ್ಯಾಬ್ಲೋ ತಿರಸ್ಕರಿಸಲಾಗಿದೆ ಎಂದು ಹೇಳಿದ್ದರು. ಮುಂದಿನ ಎರಡ್ಮೂರು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಟ್ಯಾಬ್ಲೋ ತಿರಸ್ಕಾರವು ಭಾರೀ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ | No Karnataka Tableau | ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರವಿಲ್ಲ! ಕಾರಣ ಏನು?