ನವ ದೆಹಲಿ: ರಾಷ್ಟ್ರೀಯ ಹೆದ್ದಾರಿ 4ಕ್ಕೆ ಪರ್ಯಾಯವಾಗಿ ಹೊಸ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್ ವೇ (Pune-Bengl’r Expressway) ನಿರ್ಮಾಣವಾಗಲಿದೆ. ಈ ಹೆದ್ದಾರಿ ಕಾರ್ಯಾರಂಭವಾದರೆ ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣದ ಅವಧಿ ಸುಮಾರು 6 ಗಂಟೆಗಳಷ್ಟು ಕಡಿಮೆಯಾಗಲಿದೆ!
ಈ ಹೊಸ ಎಕ್ಸ್‌ಪ್ರೆಸ್ ವೇ 12 ಜಿಲ್ಲೆಗಳನ್ನು ಕವರ್ ಮಾಡಲಿದೆ. ಮಹಾರಾಷ್ಟ್ರದ ಪುಣೆ, ಸಾತಾರಾ, ಸಾಂಗ್ಲಿ ಮತ್ತು ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಕನೆಕ್ಟ್ ಮಾಡಲಿದೆ. ಆ ಕಡೆ, ಪುಣೆಯಿಂದ ಮುಂಬೈ ಕನೆಕ್ಟ್ ಆಗಲಿದೆ.
ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಾಥಮಿಕ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಒಪ್ಪಿಗೆ ಕೂಡ ದೊರೆತಿದೆ. ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಒಟ್ಟಾರೆ ವಿಸ್ತೃತ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ತಿಂಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುತ್ತದೆ. ಆ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ. ಪುಣೆ-ಮುಂಬೈ ಮತ್ತು ಬೆಂಗಳೂರು ನಡುವೆ ಈಗಿರುವುದಕ್ಕಿಂತಲೂ 95 ಕಿ.ಮೀ. ಅಂತರ ಕಡಿಮೆಯಾಗಲಿದೆ.
ಈ ಎಕ್ಸ್‌ಪ್ರೆಸ್ ವೇ ಒಟ್ಟು 14 ರಾಷ್ಟ್ರೀಯ ಮತ್ತು ಸ್ಟೇಟ್ ಹೈವೇಗಳನ್ನು ಕ್ರಾಸ್ ಮಾಡಲಿದೆ. 22 ಇಂಟರ್‌ಚೇಂಜ್‌ಗಳಿರುವ 55 ಫ್ಲೈಓವರ್ ಇರಲಿದ್ದು, ಹೆದ್ದಾರಿಯ ಎರಡೂ ಪಕ್ಕದಲ್ಲಿ ಮರಗಳನ್ನು ಬೆಳೆಸಲಾಗುತ್ತದೆ.
ಇದನ್ನೂ ಓದಿ | ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ