ಬೆಂಗಳೂರು: ಭೂತಾನ್‌ನಿಂದ ಪ್ರತಿ ವರ್ಷ ಸುಂಕವಿಲ್ಲದೆ 17 ಸಾವಿರ ಮೆಟ್ರಿಕ್‌ಟನ್ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಅನುಮತಿ ನೀಡಿರುವುದನ್ನು ರಾಜ್ಯದ ಅಡಕೆ ಬೆಳೆಗಾರರು, ಬೆಳೆಗಾರರ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿರುವುದರ ನಡುವೆಯೇ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಗಳು ಅಡಕೆ ಆಮದಿಗೆ ಸಿದ್ಧತೆ ಆರಂಭಿಸಿವೆ.
ಕನಿಷ್ಠ ಆಮದು ಬೆಲೆಯ (ಎಂಐಸಿ) ಷರತ್ತು ಇಲ್ಲದೇ 17 ಸಾವಿರ ಮೆಟ್ರಿಕ್‌ಟನ್ ಹಸಿ ಅಡಕೆಯನ್ನು ಮುಕ್ತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಿ ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (DGFT) ಸೆ.28 ರಂದು ಅಧಿಸೂಚನೆ ಹೊರಡಿಸಿತ್ತು.
ಇದರ ಬೆನ್ನಲ್ಲೇ ಪರೋಕ್ಷ ತೆರಿಗೆ ಮತ್ತು ಸುಂಕದ ಕೇಂದ್ರೀಯ ಮಂಡಳಿಯು (Central Board of Indirect Taxes and Customs -CBIC) ಅಡಕೆ ಆಮದಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸೂಚಿಸಿ, ಕಸ್ಟಮ್ಸ್ ನ ಕೊಲ್ಕತ್ತಾ ಝೋನ್‌ನ ಚೀಫ್ ಕಮೀಷನರ್‌ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆ, ಅಧಿಕಾರಿಗಳಿಗೆ ಆದೇಶ ನೀಡಿದೆ. ಅಕ್ಟೋಬರ್ 7 ರಂದು ಈ ಆದೇಶ ಹೊರಡಿಸಲಾಗಿದೆ.
ಸಿಬಿಐಸಿಯು ನೀಡಿರುವ ಆದೇಶದ ಪ್ರತಿ;
ನಿಗದಿತ ಪ್ರಮಾಣದ ಹಸಿರು ಅಡಕೆಯನ್ನು ಆಮದು ಮಾಡಿಕೊಳ್ಳಲು ಕೊಲ್ಕತ್ತಾ ಕಸ್ಟಮ್ಸ್ ಝೋನ್ ತೆಗೆದುಕೊಳ್ಳಬೇಕಾಗಿರುವ ಕ್ರಮಗಳನ್ನು ಈ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಭೂತಾನ್‌ನಿಂದ ಭೂಮಾರ್ಗದಲ್ಲಿ, ಅದರಲ್ಲೂ ಜೈಗಾನ್(INJIGB) ಮಾರ್ಗದಲ್ಲಿ ಮಾತ್ರ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಆಮದು ಮಾಡಿಕೊಳ್ಳುವವರು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ ನೀಡುವ ಅಧಿಕೃತ ಪರವಾನಿಗೆಯನ್ನು (ರಿಜಿಸ್ಟೇಷನ್‌ಸರ್ಟಿಫಿಕೇಟ್-ಆರ್‌ಸಿ) ಹೊಂದಿರಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಈಗ ತೆರಿಗೆ ಇಲಾಖೆಯು ರಿಜಿಸ್ಟೇಷನ್‌ಸರ್ಟಿಫಿಕೇಟ್-ಆರ್‌ಸಿ ವಿತರಿಸುವ ಮತ್ತು ನಿಗಾ ವಹಿಸುವ ವ್ಯವಸ್ಥೆಯನ್ನು ರೂಪಿಸಬೇಕಾಗಿದ್ದು, ಇದಕ್ಕೆ ಸೂಚನೆಗಳನ್ನು ನೀಡಲಾಗಿದೆ.
ಪ್ರಸಕ್ತ ಸಾಲಿನ ( 2022-23) ಸಾಲಿನ ದ್ವಿತೀಯ ಅರ್ಧದಲ್ಲಿ 8,500 ಮೆಟ್ರಿಕ್‌ಟನ್ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಮುಂದಿನ ಆರ್ಥಿಕ ಸಾಲಿನಲ್ಲಿ 17,000 ಸಾವಿರ ಮೆಟ್ರಿಕ್‌ಟನ್ ಆಮದು ಮಾಡಿಕೊಳ್ಳಬಹುದು. ರಿಜಿಸ್ಟೇಷನ್ ಸರ್ಟಿಫಿಕೇಟ್ ಅನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿತರಿಸಲಾಗುತ್ತದೆ. ಒಮ್ಮೆ ಪಡೆದ ಆರ್‌ಸಿಯಲ್ಲಿ ಒಬ್ಬ ವ್ಯಾಪಾರಿಯು 500ಮೆಟ್ರಿಕ್ ಟನ್ ಅಡಕೆ ಆಮದು ಮಾಡಿಕೊಳ್ಳ ಬಹುದಾಗಿರುತ್ತದೆ.
ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳುವ ವ್ಯಾಪಾರಿಗಳು DGFT ವೆಬ್‌ಸೈಟ್‌ನ ಸರ್ವೀಸಸ್ ವಿಭಾಗದಲ್ಲಿ ಲಾಗಿನ್‌ಆಗಿ, ಇಂಪೋರ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನಲ್ಲಿನ ಅಪ್ಲೈ ಫಾರ್ ರಿಜಿಸ್ಟೇಷನ್ ಸರ್ಟಿಫಿಕೇಟ್ ಫಾರ್ ಇಂಪೋರ್ಟ್‌ನಲ್ಲಿ “ಆರ್‌ಸಿʼʼಯನ್ನು ಪಡೆಯಬಹುದಾಗಿದೆ.
ಈ ರೀತಿ ಆರ್‌ಸಿ ಪಡೆದವರು ನಿಗದಿಯಷ್ಟೇ ಅಡಕೆ ಆಮದು ಮಾಡಿಕೊಳ್ಳುವಂತೆ ನೋಡಿಕೊಳ್ಳಲು ಆಮದು ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳು ಸೂಕ್ತ ವ್ಯವಸ್ಥೆಯನ್ನು ರೂಪಿಸಲಿದ್ದಾರೆ. ಆದರೆ ಮುಕ್ತವಾಗಿ ಅಡಕೆ ಆಮದಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಇದನ್ನು ದುರುಪಯೋಗ ಪಡಿಸಿಕೊಳ್ಳುವ ವ್ಯಾಪಾರಿಗಳು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭೂತಾನ್‌ನಿಂದ ಅಡಕೆ ಆಮದು ಮಾಡಿಕೊಳ್ಳುವ ಅಪಾಯವಿದೆ ಎಂದು ಅಡಕೆ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ | ಭೂತಾನ್‌ನಿಂದ ಬರಲಿದೆ ಹಸಿ ಅಡಕೆ; 17 ಸಾವಿರ ಮೆಟ್ರಿಕ್ ಟನ್ ಆಮದಿಗೆ ಮುಕ್ತ ಅವಕಾಶ ನೀಡಿದ ಕೇಂದ್ರ