ಬೆಂಗಳೂರು: ಉದಯಪುರ ಮತ್ತು ಅಮಾರಾವತಿ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜೀವ ಬೆದರಿಕೆ ಇರುವ ಹಿಂದೂಪರ ಹೋರಾಟಗಾರರಿಗೆ ವಿಶೇಷ ರಕ್ಷಣೆ ನೀಡಲು ಮುಂದಾಗಿದ್ದು, ರಾಜ್ಯಗಳಿಂದ ಮಾಹಿತಿ ಕೇಳಿದೆ.
ರಾಜ್ಯದಲ್ಲಿ ಜೀವ ಬೆದರಿಕೆ ಇರುವ ಹಿಂದೂಪರ ಹೋರಾಟಗಾರರ ಮಾಹಿತಿ ನೀಡುವಂತೆ ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಸರ್ಕಾರವನ್ನು ಕೋರಿದೆ. ಅಲ್ಲದೆ ಈ ಹೋರಾಟಗಾರರ ಹಿನ್ನೆಲೆ, ವೃತ್ತಿ, ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ಕಲೆ ಹಾಕುವಂತೆಯೂ ಸೂಚನೆ ನೀಡಿದೆ.
ಉದಯಪುರದ ಕನ್ಹಯ್ಯ ಹತ್ಯೆಯಲ್ಲಿ ಭಾಗಿಯಾದ ಹಂತಕರು ಪ್ರಮುಖ ಬಿಜೆಪಿ ನಾಯಕರನ್ನೂ ಟಾರ್ಗೆಟ್ ಮಾಡುವ ಸಂಚು ಹೊಂದಿದ್ದರು. ಪಾಕ್ ಸಂಘಟನೆಗಳ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತನಿಖೆಯಿಂದ ಗೊತ್ತಾಗಿರುವುದರಿಂದ ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ಈ ರೀತಿ ಮುಂದೆ ಹತ್ಯೆ ನಡೆಯದಂತೆ ನೋಡಿಕೊಳ್ಳಲು ಸೂಕ್ಷ್ಮ ಪ್ರದೇಶಗಳನ್ನ ಗುರುತಿಸಿ, ಅಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ರಾಜ್ಯಕ್ಕೆ ಬರುವ ವ್ಯಕ್ತಿಗಳ ಮೇಲೆ ಗಮನ ಹರಿಸಬೇಕು. ಅಪರಿಚಿತರು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚಿಸಬೇಕು ಹೀಗೆ ಹಲವು ಸೂಚನೆಗಳನ್ನು ಕೇಂದ್ರ ಗುಪ್ತಚರ ಇಲಾಖೆ ನೀಡಿದೆ.
ಪ್ರಾರ್ಥನಾ ಮಂದಿರಗಳು, ಮಸೀದಿಗಳಲ್ಲಿ ನಡೆಯುವ ಸಭೆಗಳ ಬಗ್ಗೆ ವಿಶೇಷ ಗಮನ ಹರಿಸಿಸಬೇಕು. ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ನಡೆಯುವ ಸಭೆಗಳ ಮಾಹಿತಿಯನ್ನೂ ಪಡೆದುಕೊಳ್ಳಬೇಕೆಂದು ರಾಜ್ಯ ಗೃಹ ಇಲಾಖೆಗೆ ಸೂಚಿಸಲಾಗಿದ್ದು, ಪ್ರತಿಭಟನೆ, ರ‍್ಯಾಲಿಗಳಿಗೆ ಅನುಮತಿ ಕೇಳಿದಾಗ ಅಂತಹ ಸಂಘಟನೆಗಳ ಪೂರ್ವಾಪರ ಪರಿಶೀಲನೆ ನಡೆಸದೇ ಅನುಮತಿ ನೀಡಬಾರದು ಎಂದೂ ತಿಳಿಸಿದೆ.
ಉದಯಪುರದ ಕನ್ಹಯ್ಯ ಲಾಲ್ ಹತ್ಯೆ ನಂತರ ರಾಜ್ಯದಲ್ಲಿಯೂ ಕಾನೂನು ಸುವ್ಯವಸ್ಥೆ ಹದಗೆಡುವ ಸೂಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ಈ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಈಗಾಗಲೇ ರಾಜ್ಯ ಗುಪ್ತಚರ ಇಲಾಖೆಯೂ ಕೋಮುಗಲಭೆ ನಡೆಯುವ ಸಾಧ್ಯತೆಗಳ ಬಗ್ಗೆ ಮಾಹಿತಿ ಕಲೆ ಹಾಕಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಅಮರಾವತಿ ಹತ್ಯೆ ಪ್ರಕರಣ | ಮಾಸ್ಟರ್ ಮೈಂಡ್ ಸೇರಿದಂತೆ ಏಳು ಮಂದಿ ಬಂಧನ