ಬೆಂಗಳೂರು: ಕಾವೇರಿ ನೀರು ಹಂಚಿಕೆ ಸಮಸ್ಯೆಗೆ (Cauvery Dispute) ಅಂತಿಮ ತೆರೆ ಎಳೆಯಲು ಕೇಂದ್ರ ಸರ್ಕಾರವು ನಾಲ್ಕು ರಾಜ್ಯಗಳ ಜತೆ ಚರ್ಚೆ ಮಾಡಿ ಸಂಕಷ್ಟ ಪರಿಹಾರದ ಸೂತ್ರ ರೂಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಹೇಳಿದ್ದಾರೆ.
ಚಿತ್ರಕಲಾ ಪರಿಷತ್ ನಲ್ಲಿ ಕಾವೇರಿ ಸಮಸ್ಯೆ ಬಗ್ಗೆ ಸುದ್ದಿಗಾರರೊಂದಿಗೆ ಭಾನುವಾರ ಪ್ರತಿಕ್ರಿಯಿಸಿ, ನಾಲ್ಕು ರಾಜ್ಯಗಳ ಜತೆ ಚರ್ಚಿಸಿ ಯೋಗ್ಯ ತೀರ್ಮಾನ ತೆಗೆದುಕೊಳ್ಳಬೇಕು. ಶಾಶ್ವತ ಪರಿಹಾರಕ್ಕೆ ಇದೊಂದೇ ಮಾರ್ಗ. ಮಳೆ ಕಡಿಮೆ ಆದಾಗ ಕಾವೇರಿ ವಿವಾದ ಸದ್ದು ಮಾಡುತ್ತದೆ. ಮಳೆಗಾಲದಲ್ಲಿ ನೀರಿನ ಪ್ರಮಾಣ ಕುಸಿದಾಗ ನೀರಿಗೆ ಒತ್ತಡ ಇರುತ್ತದೆ. ನಮಗೆ ಹೋಲಿಸಿದರೆ ತಮಿಳುನಾಡಿನ ವಸ್ತುಸ್ಥಿತಿ ನಾಚಿಸುವಂತೆ ಇದೆ ಎಂದು ತಿಳಿಸಿದ್ದಾರೆ.
ನಾನು ಸಿಎಂ ಆಗಿದ್ದಾಗಲೂ ಕಾವೇರಿ ನೀರು ಹಂಚಿಕೆ ಬಗ್ಗೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆಗ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಉಭಯ ರಾಜ್ಯಗಳ ಸಿಎಂಗಳ ಜತೆ ಸಂಧಾನ ಮಾಡಲು ಪ್ರಯತ್ನಿಸಿದ್ದರು. ಆದರೆ ಸಫಲ ಆಗಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಬೇಕಾಯಿತು ಎಂದು ಸ್ಮರಿಸಿದ್ದಾರೆ.
ಇದನ್ನೂ ಓದಿ | HD Devegowda : ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಕೆಟ್ಟ ರಾಜಕೀಯ ಆಟ ನಡೆಯಲ್ಲ; ಗುಡುಗಿದ ಎಚ್.ಡಿ. ದೇವೇಗೌಡ
ರಾಜ್ಯ ಸರ್ಕಾರದ ನಿರ್ಧಾರ ಸರಿಯಾಗಿದೆ
ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರ ಜಸ್ಟೀಸ್ ರವೀಂದ್ರ, ಜಸ್ಟೀಸ್ ವೆಂಕಟಾಚಲಯ್ಯ ಸೇರಿ ನಿವೃತ್ತ ನ್ಯಾಯಮೂರ್ತಿಗಳ ಸಲಹೆಗಳನ್ನು ತೆಗೆದುಕೊಂಡು ಮುಂದಿನ ಹೆಜ್ಜೆ ಇಡುತ್ತಿರುವುದು ಸರಿಯಾದ ನಿರ್ಧಾರವಾಗಿದೆ. ಅದೇ ರೀತಿ ಮುಂದುವರಿಯಬೇಕು. ಇದನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ಕಾವೇರಿ ಭಾಗದ ರೈತರು ಹೋರಾಟ ಮಾಡುತ್ತಿರುವುದು ಸ್ವಾಭಾವಿಕವಾಗಿಯೇ ಇದೆ. ಅವರ ಭಾವನೆಗಳನ್ನು, ನಿಲುವುಗಳನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಕೃಷ್ಣ ಅವರ ಸಲಹೆ ಸ್ವಾಗತಿಸಿದ ಡಿಸಿಎಂ
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅತ್ಯಂತ ಅನುಭವಿ ನಾಯಕರು. ಅವರ ಅನುಭವದಿಂದ ಬಂದಿರುವ ಸಲಹೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ | JDS Politics : ಗಟ್ಟಿಯಾಯ್ತು ಬಿಜೆಪಿ ಮೈತ್ರಿ; ಪಕ್ಷದ ನಿರ್ಧಾರಕ್ಕೆ ಬದ್ಧವೆಂದ ಜೆಡಿಎಸ್ ಶಾಸಕರು, ನಾಯಕರು!
ರಾಜ್ಯದ ಜನರ ಹಿತ ಕಾಯುವ ಬದ್ಧತೆ ನಮ್ಮ ಸರ್ಕಾರಕ್ಕಿದೆ. ನಾವು ರಾಜಕೀಯಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್ಯದ ಹಿತಕ್ಕಾಗಿ ಯಾರೇ ಸಲಹೆಗಳನ್ನು ಕೊಟ್ಟರು ನಾವು ಅದನ್ನು ಸ್ವೀಕರಿಸುತ್ತೇವೆ” ಎಂದು ಶಿವಕುಮಾರ್ ಅವರು ತಿಳಿಸಿದ್ದಾರೆ.