ನವದೆಹಲಿ: ಮಾರಕ ಕ್ಯಾನ್ಸರ್ ರೋಗಕ್ಕೆ ಪ್ರತಿ ವರ್ಷ ಹಲವರು ಬಲಿಯಾಗುತ್ತಾರೆ. ಅದರಲ್ಲೂ ಗರ್ಭಕಂಠ ಕ್ಯಾನ್ಸರ್ (Cervical Cancer ) ಹೆಣ್ಣು ಮಕ್ಕಳಿಗೆ ಮಾರಕವಾಗಿ ಕಾಡುತ್ತದೆ. ಈ ಸಮಸ್ಯೆ ಎದುರಾಗದಂತೆ ತಡೆಯುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿಯೇ ನೀಡುವುದಕ್ಕೆ ಔಷಧ ಕಂಡುಹಿಡಿಯಲಾಗಿದ್ದು, ಇದೇ ವರ್ಷದ ಜೂನ್ ತಿಂಗಳಿನಿಂದ ಕರ್ನಾಟಕ ಸೇರಿ ಒಟ್ಟು ಆರು ರಾಜ್ಯಗಳಲ್ಲಿ ಲಸಿಕೆ ಹಂಚಿಕೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ ಸಿಗದ ಪ್ಯಾಕೇಜ್; 2ನೇ ಹಂತದ ಪಾದಯಾತ್ರೆಗೆ ಮಹಿಳೆಯರು ಸಜ್ಜು
ಕರ್ನಾಟಕ, ತಮಿಳುನಾಡು, ಮಿಜೋರಾಂ, ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಆರು ರಾಜ್ಯಗಳಲ್ಲಿ 9ರಿಂದ 14 ವರ್ಷದ 2.55 ಕೋಟಿ ಹೆಣ್ಣು ಮಕ್ಕಳಿದ್ದು, ಅವರಿಗೆ ಈ ಹ್ಯೂಮನ್ ಪ್ಯಾಪಿಲೋಮವೈರಸ್ (HPV Vaccine) ಲಸಿಕೆ ಹಾಕುವ ಗುರಿಯನ್ನು ಸರ್ಕಾರ ಹೊಂದಿದೆ. ಅದಕ್ಕೆಂದೇ ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ರಚಿಸಿದೆ. 2026ರೊಳಗೆ 16.02 ಕೋಟಿ ಡೋಸ್ ಖರೀದಿಸಲು ಏಪ್ರಿಲ್ ತಿಂಗಳಲ್ಲಿ ಜಾಗತಿಕ ಟೆಂಡರ್ ಅನ್ನೂ ಕರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಗರ್ಭಕಂಠ ಕ್ಯಾನ್ಸರ್ ವಿರುದ್ಧ ಹೋರಾಡಲು ಸೀರಮ್ ಇನ್‌ಸ್ಟಿಟ್ಯೂಟ್‌ನ CERVAVAC ಹೆಸರಿನ ಲಸಿಕೆಯನ್ನುಯ ಕಳೆದ ತಿಂಗಳು ಬಿಡುಗಡೆ ಮಾಡಿದೆ. ಎರಡು ಡೋಸ್ ಆಗಿರುವ ಈ ಲಸಿಕೆಯು ಖಾಸಗಿ ಮಾರುಕಟ್ಟೆಯಲ್ಲಿ ಪ್ರತಿ ಡೋಸ್‌ದೆ 2000 ರೂ.ನಂತೆ ಲಭ್ಯವಿರಲಿದೆ ಎಂದು ಸೀರಂ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಆರೋಗ್ಯ ಸಚಿವಾಲಯ ಟೆಂಡರ್ ಕರೆದಾಗ ಈ ಲಸಿಕೆಯನ್ನು ಕೈಗೆಟುಕುವ ದರದಲ್ಲಿ ಸರಬರಾಜು ಮಾಡಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಭಾರತವು ಪ್ರಪಂಚದ ಸುಮಾರು ಶೇ.16 ಮಹಿಳೆಯರನ್ನು ಹೊಂದಿದೆ. ಆದರೆ ವಿಶ್ವದಲ್ಲಿನ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳ ಕಾಲು ಭಾಗದಷ್ಟು ಮತ್ತು ಜಾಗತಿಕ ಗರ್ಭಕೋಶದ ಕ್ಯಾನ್ಸರ್ ಸಾವುಗಳಲ್ಲಿ ಸುಮಾರು ಮೂರನೇ ಒಂದು ಭಾಗ ಭಾರತದ್ದೇ ಆಗಿದೆ. ಇತ್ತೀಚಿನ ಕೆಲವು ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 80,000 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ಒಳಗಾಗುತ್ತಾರೆ ಮತ್ತು 35,000 ಮಂದಿ ಸಾಯುತ್ತಾರೆ.