Site icon Vistara News

CET Ranking | ಸಿಇಟಿ ಪರಿಷ್ಕೃತ ರ‍್ಯಾಂಕಿಂಗ್‌ ಫಲಿತಾಂಶ ಮುಂದೂಡಿಕೆ, ಕೌನ್ಸೆಲಿಂಗ್‌ ದಿನದಲ್ಲೂ ವ್ಯತ್ಯಾಸ

KCET 2022

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (CET Ranking) ರ‍್ಯಾಂಕಿಂಗ್‌ನ ಪರಿಷ್ಕೃತ ಫಲಿತಾಂಶ ಪ್ರಕಟ ದಿನಾಂಕವನ್ನು ಒಂದು ದಿನಕ್ಕೆ ಮುಂದೂಡಲಾಗಿದೆ. ಈ ಮೊದಲು ಸೆ.29ರಂದು ಪರಿಷ್ಕೃತ ರ‍್ಯಾಂಕಿಂಗ್‌ ಅನ್ನು ಪ್ರಕಟಪಡಿಸುವುದಾಗಿ ಕೆಇಎ ಘೋಷಣೆ ಮಾಡಿತ್ತು. ಆದರೆ, ಈಗ ಸೆ.30ರಂದು ಪ್ರಕಟಗೊಳ್ಳಲಿದೆ.

ತಾಂತ್ರಿಕ ಕಾರಣದಿಂದ ಒಂದು ದಿನ ಮುಂದೂಡಿಕೆ ಮಾಡಲಾಗಿದೆ ಎಂದು ಕೆಇಎ ಹೇಳಿದ್ದು, ಕೌನ್ಸೆಲಿಂಗ್ ದಿನಾಂಕವನ್ನೂ ಮುಂದೂಡಿಕೆ ಮಾಡಲಾಗಿದೆ. ಈ ಮೊದಲು ಅ.3ರಿಂದ ಕೌನ್ಸೆಲಿಂಗ್ ಆರಂಭಿಸಲು ನಿರ್ಧರಿಸಲಾಗಿತ್ತು. ಈಗ ಅಕ್ಟೋಬರ್ 5ರಿಂದ ಕೌನ್ಸೆಲಿಂಗ್ ಆರಂಭಿಸುವುದಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಹೇಳಿದ್ದಾರೆ.

ಏನಿದು ಪ್ರಕರಣ?
ಸಿಇಟಿ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವಂತೆ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ಬಾರಿ ಸುಮಾರು 24,000 ಮಂದಿ ರಿಪೀಟರ್ಸ್‌ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಆದರೆ, ಕಳೆದ 2020-21ನೇ ಸಾಲಿನಲ್ಲಿ ಸಾಂಕ್ರಾಮಿಕ ಕೋವಿಡ್‌ ಸೋಂಕು ಹರಡುವ ಭೀತಿಯಿಂದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ರದ್ದು ಮಾಡಲಾಯಿತು.

ಈ ಕಾರಣದಿಂದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ ಮಾಡಲು ನಿರ್ಧರಿಸಲಾಗಿತ್ತು. ಸಿಇಟಿ, ನೀಟ್ ಸೇರಿ ರಾಜ್ಯದಲ್ಲಿ ನಡೆದ ಎಲ್ಲ ವೃತ್ತಿಪರ ಕೋರ್ಸುಗಳಿಗೆ ಪಿಯುಸಿ ಅಂಕವನ್ನು ಪರಿಗಣನೆ ಮಾಡದಿರಲು ನಿರ್ಧರಿಸಲಾಗಿತ್ತು. 2022ನೇ ಸಾಲಿನಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ರಿಪೀಟರ್ಸ್‌ಗಳಿಗೆ ದ್ವಿತೀಯ ಪಿಯುಸಿ ಅಂಕಗಳನ್ನು (CET Ranking) ಪರಿಗಣಿಸುವುದಿಲ್ಲವೆಂದು ಕೆಇಎ ಸ್ಪಷ್ಟಪಡಿಸಿತ್ತು. ಇದಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಸೂಚನೆ ಮೇರೆಗೆ ಸರ್ಕಾರ ಪರಿಷ್ಕೃತ ರ‍್ಯಾಂಕಿಂಗ್‌ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ.

ಇದನ್ನೂ ಓದಿ | Karnataka DCET 2022 | ಡಿಸಿಇಟಿ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆ; ಹೊಸ ನಿಯಮ ಜಾರಿ

Exit mobile version