ಬೆಂಗಳೂರು: ರಿಪೀಟರ್‌ಗಳಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ ಸಿಇಟಿ ಫಲಿತಾಂಶವನ್ನು ರದ್ದುಪಡಿಸಿ ಹೊಸದಾಗಿ ಪರಿಷ್ಕೃತ ಪಟ್ಟಿ ಪ್ರಕಟಿಸಬೇಕು ಎಂಬ ರಾಜ್ಯ ಹೈಕೋರ್ಟ್‌ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಈಗಾಗಲೇ ಕಾನೂನು ತಜ್ಞರ ಜತೆ ಮಾತುಕತೆ ನಡೆಸಲಾಗಿದೆ. ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಇದನ್ನು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡುತ್ತೇವೆ. ಮಂಗಳವಾರ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸೋಮವಾರ ಬೆಳಗ್ಗೆ ಉನ್ನತ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಉನ್ನತ ಶಿಕ್ಷಣ ಸಚಿವ ಅಶ್ವತ್ಧ ನಾರಾಯಣ ಹೇಳಿದರು.
ಏನಿದು ಪ್ರಕರಣ?
ಸಿಇಟಿ ರ‍್ಯಾಂಕ್ ಪಟ್ಟಿ ಪ್ರಕಟಿಸುವಾಗ ಸಾಮಾನ್ಯವಾಗಿ ಆ ವರ್ಷ ನಡೆದ ಸಿಇಟಿ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ಕಳೆದ 2020-21ನೇ ಸಾಲಿನಲ್ಲಿ ಸಾಂಕ್ರಾಮಿಕ ಕೋವಿಡ್ ಸೋಂಕು ಹರಡುವ ಭೀತಿಯಿಂದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಈ ಕಾರಣದಿಂದ ೨೦೨೨ರಲ್ಲಿ ನಡೆದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ ಮಾಡಲು ನಿರ್ಧರಿಸಲಾಗಿತ್ತು.
2022ನೇ ಸಾಲಿನಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ರಿಪೀಟರ್ಸ್‌ಗಳಿಗೆ ದ್ವಿತೀಯ ಪಿಯುಸಿ ಅಂಕಗಳನ್ನು (CET Ranking) ಪರಿಗಣಿಸುವುದಿಲ್ಲವೆಂದು ಕೆಇಎ ಸ್ಪಷ್ಟಪಡಿಸಿತ್ತು.
ಈ ನಡುವೆ ಪುನರಾವರ್ತಿತ ವಿದ್ಯಾರ್ಥಿಗಳು ಇದರ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದರು. ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವಂತೆ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ಸುಮಾರು 24,000 ಮಂದಿ ರಿಪೀಟರ್ಸ್ ಪರೀಕ್ಷೆಯನ್ನು ತೆಗೆದುಕೊಂಡಿದ್ದರು.
ಇವರ ಮನವಿಯನ್ನು ಆಧರಿಸಿ ಹೈಕೋರ್ಟ್, ಪಿಯುಸಿ ಅಂಕಗಳನ್ನೂ ಪರಿಗಣಿಸಿ ರ‍್ಯಾಂಕ್ ಪಟ್ಟಿ ಪ್ರಕಟಿಸುವಂತೆ ಆದೇಶ ನೀಡಿದೆ.
ಪರ ವಕೀಲರ ವಾದವೇನಾಗಿತ್ತು?
ಚಿಕ್ಕಮಗಳೂರಿನ ಈಶ್ವರ್ ಎಂಬುವವರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಇಎ ಆದೇಶದ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ ನಡೆದ ವಾದ ವಿವಾದವನ್ನು ಆಲಿಸಿ, ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿದ್ದಾರೆ.
ಅರ್ಜಿದಾರರ ಪರ ವಕೀಲರು ನಡೆಸಿದ ವಾದದಲ್ಲಿ, ಕೆಇಎ ನಡೆಯು ವಿದ್ಯಾರ್ಥಿಗಳಿಗೆ ತಾರತಮ್ಯ ಎಸಗುವಂತಿದೆ. ಈ ಆದೇಶವು ಅತಾರ್ಕಿಕವಾಗಿದೆ. ಜತೆಗೆ ವಿವೇಚನೆಯಿಂದ ಕೂಡಿಲ್ಲ. ಪಿಯುಸಿ ಅಂಕಗಳನ್ನು ಪರಿಗಣಿಸದೇ ಸಿಇಟಿ ರ‍್ಯಾಂಕ್ ಪ್ರಕಟಿಸಿರುವುದು ಸಿಇಟಿ-2006 ಪ್ರವೇಶ ನಿಯಮಗಳ ಉಲ್ಲಂಘನೆಯಾಗಿದೆ. ಇದರಿಂದ ಪುನರಾವರ್ತಿತ ವಿದ್ಯಾರ್ಥಿಗಳ ಶ್ರೇಣಿ ಕಡಿಮೆಯಾಗಲಿದೆ ಎಂದು ಆಕ್ಷೇಪಿಸಿದ್ದರು.
ಅಶ್ವತ್ಥನಾರಾಯಣ ಹೇಳಿದ್ದೇನು?
ಸೋಮವಾರ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರು ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ʻʻನಾವು ಈ ಬಾರಿ ವಿಶೇಷ ಸವಾಲು ಎದುರಿಸುತ್ತೀದ್ದೇವೆ. 2೪ ಸಾವಿರ ರಿಪೀಟರ್ಸ್ ಈ ಬಾರಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಹಿಂದಿನ ಸಾರಿ ಪರೀಕ್ಷೆಯನ್ನೇ ಮಾಡಿರಲಿಲ್ಲ. ಹೀಗಾಗಿ ಗರಿಷ್ಠ ಅಂಕಗಳು ಬಂದಿದ್ದವು. ಹೀಗಾಗಿ, ಪಿಯುಸಿ ಅಂಕವನ್ನೂ ಪರಿಗಣಿಸಿದರೆ ಈ ಬಾರಿಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬ ನೆಲೆಯಲ್ಲಿ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲು ತೀರ್ಮಾನಿಸಲಾಗಿತ್ತು. ಈ ಹೈಕೋರ್ಟ್ ಹೇಳಿದಂತೆ ಫಲಿತಾಂಶ ಪರಿಷ್ಕರಣೆ ಮಾಡಿದರೆ 1.5 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ ಆಲಿದೆ. ಹೀಗಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನ ಮಾಡಲಾಗಿದೆʼʼ ಎಂದು ಹೇಳಿದರು.
ʻʻರಿಪೀಟರ್ಸ್ ಮೇಲೆ ನಮಗೇನು ಕೋಪ ಇಲ್ಲ. ಟೆಕ್ನಕಲ್ ವಿಷಯದಿಂದ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆʼʼ ಎಂದು ಹೇಳಿದ ಅವರು, ಸಮಯದ ಒಳಗೆ ಎಲ್ಲವೂ ಮುಗಿಸುತ್ತೇವೆ. ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆʼʼ ಎಂದು ಹೇಳಿದರು.
ಇದನ್ನೂ ಓದಿ | CET Rank | ಕೆಇಎ ಆದೇಶ ರದ್ದುಪಡಿಸಿದ ಹೈಕೋರ್ಟ್; ಸೋಮವಾರ ಸಭೆ ಕರೆದ ಸಚಿವ ಅಶ್ವತ್ಥ್ ನಾರಾಯಣ