Site icon Vistara News

Chain snatching Case : ಜಾಬ್‌ಗೆ ಹೋಗುವ ಹೆಣ್ಮಕ್ಕಳೇ ಟಾರ್ಗೆಟ್‌‌ ; ಸರಗಳ್ಳರ ಗ್ಯಾಂಗ್‌ಗೆ ಸಖತ್ ಗೂಸಾ

Chain snatching case

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಮನೆ, ಸಂಸಾರಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ಉದ್ಯಮಗಳಿಗೆ ಉದ್ಯೋಗಕ್ಕೆ ಹೋಗುವ ಹೆಣ್ಮಕ್ಕಳನ್ನೇ ಟಾರ್ಗೆಟ್‌ (Targeting woman workers) ಮಾಡಿ ಸರಕಳವು (Chain snatching case) ಮಾಡಿ ಎಸ್ಕೇಪ್‌ ಆಗುತ್ತಿದ್ದ ಖತರ್ನಾಕ್‌ ಗ್ಯಾಂಗ್‌ ಒಂದನ್ನು ಸ್ಥಳೀಯರೇ ಹಿಡಿದು ಹಿಗ್ಗಾಮುಗ್ಗಾ ಝಾಡಿಸಿದ ಘಟನೆಯೊಂದು ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿ (Doddaballapura Industrial Area) ನಡೆದಿದೆ. ಬಳಿಕ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಮಹಿಳೆಯರು ಕೆಲಸ ಮುಗಿಸಿ ಮನೆಗೆ ಹೋಗುವ ಹೊತ್ತಿನಲ್ಲಿ ಕಾದು ಕುಳಿತು ಚಿನ್ನದ ಸರ ಎಳೆದು ಪರಾರಿಯಾಗುವ ಪ್ಲ್ಯಾನ್‌ ಮಾಡಿ ಕಾದು ಕುಳಿತಿದ್ದ ತಂಡ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಹಣ್ಣುಗಾಯಿ, ನೀರುಗಾಯಿ ಆಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಜನ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಕೆಲಸ ಮುಗಿಸಿ ಸಂಜೆ ಮನೆಗಳಿಗೆ ವಾಪಸ್ ತೆರಳುತ್ತಾರೆ.

ಈ ವೇಳೆ ಒಂಟಿಯಾಗಿ ತೆರಳುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಇಬ್ಬರು ಯುವಕರು ಕಾರ್ಯಾಚರಿಸುತ್ತಿದ್ದರು. ಇವರ ಹೆಸರು ನರಸಿಂಹರಾಜು ಮತ್ತು ಸುಮನ್. ಬುಧವಾರ ಈ ಇಬ್ಬರು ಒಂಟಿ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆರೋಪಿ ಸುಮನ್ ಮುಂದೆ ನಿಂತು ಮಹಿಳೆ ಬಳಿ ವಿಳಾಸ ಕೇಳಿದರೆ ನರಸಿಂಹ ಹಿಂದಿನಿಂದ ಬಂದು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಎಸ್ಕೇಪ್ ಆಗಲು ರೆಡಿ ಆಗಿದ್ದ. ಮಾಂಗಲ್ಯ ಸರ ಕಿತ್ತುಕೊಂಡ ಆರೋಪಿ ಮಹಿಳೆಯ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಆಗ ಮಹಿಳೆ ಜೋರಾಗಿ ಕಿರುಚಾಡಿದ್ದಾಳೆ. ಇದನ್ನು ಕೇಳಿ ಅಕ್ಕಪಕ್ಕದವರು ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ. ಆಗ ನರಸಿಂಹರಾಜು ಮತ್ತು ಸುಮನ್‌ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾರೆ. ಆಗ ಸ್ಥಳೀಯರು ಅವರ ಬೆನ್ನು ಹತ್ತಿದ್ದಾರೆ.

ಬೈಕ್‌ನಲ್ಲಿ ಎಸ್ಕೇಪ್ ಆಗುತ್ತಿದ್ದ ಈ ಇಬ್ಬರನ್ನು ಸ್ಥಳೀಯರು ಬೆನ್ನಟ್ಟುತ್ತಿದ್ದಂತೆಯೇ ಬೈಕಿನಿಂದ ಇಳಿದ ನರಸಿಂಹ ತೋಟಗಳತ್ತ ತಲೆ ಮರೆಸಿಕೊಳ್ಳಲು ಹೋಗಿದ್ದಾನೆ. ಹೀಗಾಗಿ ಹಿಂದೆಯೇ ಹಿಂಬಾಲಿಸಿ ಬಂದ ಸ್ಥಳೀಯರು ನಂತರ ಆರೋಪಿಯನ್ನು ಸೆರೆ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಅವನನ್ನು ವಶಕ್ಕೆ ಪಡೆದ ಪೊಲೀಸರು ಅವನ ಮೂಲಕ ಎಸ್ಕೇಪ್‌ ಆಗಿದ್ದ ಸುಮನ್‌ನನ್ನು ಕರೆಸಿಕೊಂಡು ಬಂಧಿಸಿ ಜೈಲಿಗಟ್ಟಿದ್ದಾರೆ.

ದೊಡ್ಡಬಳ್ಳಾಫುರ ಕೈಗಾರಿಕಾ ಪ್ರದೇಶದಲ್ಲಿ ಪದೇಪದೆ ಮೊಬೈಲ್ ಮತ್ತು ಸರಗಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಪೊಲೀಸರು ಹೆಚ್ಚಿನ ಬೀಟ್ ವ್ಯವಸ್ಥೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: Theft Case: ಕ್ಯಾಬ್‌ ಡ್ರೈವರ್‌ಗಳೇ Be Careful.. ಪ್ರಯಾಣಿಕರ ಸೋಗಿನಲ್ಲಿ ಬರ್ತಾನೆ ಸುಲಿಗೆಕೋರ!

Exit mobile version