Site icon Vistara News

ಬಿಜೆಪಿ ನಾಯಕರ ವಿರುದ್ಧ ಸೂಲಿಬೆಲೆ ಕಿಡಿ; ಪೊಲೀಸ್‌ ದೌರ್ಜನ್ಯದ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು: ಪುತ್ತಿಲ

Chakravarthy Sulibele and Arun Kumar Puttila

ಮಂಗಳೂರು: ಪುತ್ತೂರಿನಲ್ಲಿ ಹಿಂದು ಕಾರ್ಯಕರ್ತರನ್ನು ಪೊಲೀಸರು ಕರೆದೊಯ್ದು ಬಾಸುಂಡೆ ಬರುವಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರು ಬಿಜೆಪಿ ಮುಖಂಡರ ಮೇಲೆ ಹರಿಹಾಯ್ದರೆ, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ (Kalladka Prabhakar Bhat), ಕಾಂಗ್ರೆಸ್‌ ಮೇಲೆ ಕಿಡಿಕಾರಿದ್ದಾರೆ. ಇನ್ನು ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ಪುತ್ತಿಲ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ (Arun Kumar Puttila) ಗುಡುಗಿದ್ದಾರೆ.

ಪೊಲೀಸರಿಂದ ಲಾಠಿ ಏಟು ತಿಂದು ಪುತ್ತೂರಿನಲ್ಲಿ ಆಸ್ಪತ್ರೆ ಸೇರಿರುವ ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು. ಬಿಜೆಪಿ ನಾಯಕರಿಗೆ ಆಸ್ಪತ್ರೆಗೆ ಬರಲು ಮುಖ ಇಲ್ಲ. ಅವರ ವಿರುದ್ಧ ಪೋಸ್ಟರ್ ಹಾಕಿದ್ದಾರೆಂಬ ಕಾರಣಕ್ಕಾಗಿ ಕಾರ್ಯಕರ್ತರನ್ನು ಬಂಧನ ಮಾಡಲಾಗಿದೆ. ಹೀಗಿರುವಾಗ ಇಲ್ಲಿಗೆ ಹೇಗೆ ಬಂದು ಅವರು ಮುಖ ತೋರಿಸುತ್ತಾರೆ? ಹರೀಶ್ ಪೂಂಜಾ ಬಂದಿದ್ದಾರೆ, ಅವರು ಹಿಂದೆಯೂ ಕಾರ್ಯಕರ್ತರ ಪರ ಇದ್ದಾರೆ. ಆದರೆ ಬೇರೆ ನಾಯಕರಿಗೆ ಇಲ್ಲಿ ಬಂದು ಮುಖ ತೋರಿಸೋ ಸ್ಥಿತಿ ಇಲ್ಲ. ವಿಶೇಷವಾಗಿ ಪುತ್ತೂರಿನಲ್ಲಿ ಆ ಪರಿಸ್ಥಿತಿ ಸದ್ಯಕ್ಕೆ ಇಲ್ಲ ಎಂದು ಹೇಳಿದರು.

ಆಸ್ಪತ್ರೆಯಲ್ಲಿರುವ ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಚಕ್ರವರ್ತಿ ಸೂಲಿಬೆಲೆ

ಇಲ್ಲಿ‌ ಬಂದು ಅವರು ಬಿಜೆಪಿ ನಾಯಕರು ಏನು ಮಾಡಲಿದ್ದಾರೆ? ಕೊನೇ ಪಕ್ಷ ತಪ್ಪಿತಸ್ಥರನ್ನು ಬಿಜೆಪಿ ಹುಡುಕಲಿ. ಯಾರದ್ದೋ ಒತ್ತಡಕ್ಕೆ ಯಾರದ್ದೋ ಮನೆಯ ಮಕ್ಕಳನ್ನು ಕರೆತಂದು ಈ ರೀತಿ ಹೊಡೆಯೋದು ತಪ್ಪು. ಪೊಲೀಸರಿಗೆ ಕಠಿಣ ಶಿಕ್ಷೆಯಾಗಲಿ, ಇದರ ಹಿಂದೆ ಇರುವವರು ಯಾರು ಎಂದೂ ಗೊತ್ತಾಗಲಿ. ಇದರ ಹಿಂದೆ ಯಾರು ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇಲ್ಲಿನ ಕಾಂಗ್ರೆಸ್ ಶಾಸಕರು ಹೊಸಬರು, ಅವರ ಬಗ್ಗೆಯೂ ಕೆಲವು ಮಾತಿದೆ. ಆದರೆ, ಏನೂ ಗೊತ್ತಾಗುತ್ತಿಲ್ಲ. ಇದರ ಹಿಂದೆ ಕಾಂಗ್ರೆಸ್ ಅಥವಾ ಬಿಜೆಪಿಯ ಯಾರೇ ಇದ್ದರೂ ಕ್ರಮ ಆಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಒತ್ತಾಯ ಮಾಡಿದರು.

ಇದನ್ನೂ ಓದಿ: ಉಚಿತ ಪ್ರಯಾಣ ಎಂಬ ಕಾರಣಕ್ಕಾಗಿ ದಿಲ್ಲಿಯಲ್ಲಿ ಹೆಣ್ಣುಮಕ್ಕಳಿಗೆ ಬಸ್‌ ನಿಲ್ಲಿಸದ ಡ್ರೈವರ್‌ಗಳು, ಕರ್ನಾಟಕದ ಕತೆ ಹೇಗೆ?

ಧಿಮಾಕು, ದುರಂಹಕಾರ ತಲೆಗೇರಿದರೆ ರಾಜ್ಯದ ಜನ ಬುದ್ಧಿ ಕಲಿಸುತ್ತಾರೆ. ಇದು ಬಿಜೆಪಿಗೂ ಗೊತ್ತಿದೆ, ಕಾಂಗ್ರೆಸ್ ಸಹ ಅದನ್ನು ಅರ್ಥ ಮಾಡಿಕೊಂಡಿದೆ. ಇದರ ಹಿಂದೆ ಇರುವವರು ತಮ್ಮನ್ನು ತಿದ್ದಿಕೊಂಡು ಪ್ರಾಯಶ್ಚಿತ್ತ ಅನುಭವಿಸಲಿ. ಪೊಲೀಸರಿಂದ ಹಲ್ಲೆಗೊಳಗಾದ ಕಾರ್ಯಕರ್ತರನ್ನು ನೋಡಿ ಸಂಕಟ ಆಗುತ್ತಿದೆ. ರೇಪ್‌, ದರೋಡೆ ಮಾಡಿದವರಿಗೆ ಹೊಡೆದ ಹಾಗೆ ಹೊಡೆದಿದ್ದಾರೆ. ಬ್ಯಾನರ್ ಹಾಕಿದ ಕಾರಣಕ್ಕೆ ‌ಬಂಧಿಸಿ ಹಲ್ಲೆ ಮಾಡಿಸಿರೋದು ರಾಷ್ಟ್ರೀಯ ಪಕ್ಷಕ್ಕೆ ತಕ್ಕುದಲ್ಲ. ಆ ಹುಡುಗರು ಹಿಂದೂ ಧರ್ಮಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು. ಇದರ ಹಿಂದೆ ಯಾರೇ ಇದ್ದರೂ ಅವರ ಮೇಲೆ ಕಠಿಣ ಕ್ರಮ ಆಗಲಿ ಎಂದು ಚಕ್ರವರ್ತಿ ಸೂಲಿಬೆಲೆ ಆಗ್ರಹಿಸಿದರು.

ಆಸ್ಪತ್ರೆಯಲ್ಲಿರುವ ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಾ. ಪ್ರಭಾಕರ ಭಟ್ ಕಲ್ಲಡ್ಕ

ನೂರಕ್ಕೆ ನೂರು ಕಾಂಗ್ರೆಸ್ ಮಾಡಿದ ಕಿತಾಪತಿ: ಡಾ. ಪ್ರಭಾಕರ ಭಟ್ ಕಲ್ಲಡ್ಕ

ಸರ್ಕಾರ ಬದಲಾದ ತಕ್ಷಣ ಏನು ಬೇಕಾದರು ಮಾಡಬಹುದಾ? ಇದು ನೂರಕ್ಕೆ ನೂರು ಕಾಂಗ್ರೆಸ್ ಮಾಡಿದ ಕಿತಾಪತಿ ಎಂದು ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಪುತ್ತೂರಿನಲ್ಲಿ ಹೇಳಿದ್ದಾರೆ.

ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾದ ಹಿಂದು ಕಾರ್ಯಕರ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಡಾ.‌ ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಡಿವೈಎಸ್‌ಪಿ ಅವರನ್ನು ಅಮಾನತು ಮಾಡಬೇಕು. ಕಾರ್ಯಕರ್ತರಿಂದ ಸಣ್ಣ ಪುಟ್ಟ ವ್ಯತ್ಯಾಸ ಆಗುತ್ತದೆ. ಹಾಗೆಂದು ಅದು ಅಕ್ಷಮ್ಯ ಅಪರಾಧ ಅಲ್ಲ. ನಾವು ಇದನ್ನು ಹೀಗೆಯೇ ಬಿಡುವುದಿಲ್ಲ. ಇದರ ಹಿಂದಿನ ಶಕ್ತಿ ಯಾರೆಂದು ಗೊತ್ತಾಗಬೇಕು. ಯಾರ ಒತ್ತಡ ಎಂದು ಹೇಳಲಿ? ಹಿಡಿ ತಡಿ ಬಡಿ ಎಂದು ನಾವು ಇವತ್ತಿನ ತನಕ ಯಾರಿಗೂ ಹೇಳಲಿಲ್ಲ. ಸರ್ಕಾರ ಬದಲಾದ ಕೂಡಲೇ ಇಂತಹ ಘಟನೆ ನಡೆಯುವುದು ಒಳ್ಳೆಯ ಲಕ್ಷಣ ಅಲ್ಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕಿಶೋರ್ ಬೊಟ್ಯಾಡಿ, ಮುರಳಿಕೃಷ್ಣ ಹಸಂತಡ್ಕ ಸಹಿತ ಬಿಜೆಪಿಯ ಹಲವಾರು ಮಂದಿ ಜತೆಗಿದ್ದರು.

ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು: ಅರುಣ್ ಕುಮಾರ್ ಪುತ್ತಿಲ

ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತ ಹಿಂದು ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ಮತ್ತು ಪ.ಜಾತಿ ಕಲ್ಯಾಣ ಇಲಾಖೆಗೆ ದೂರು ನೀಡಲಾಗುವುದು ಎಂದು ಹಿಂದು ಮುಖಂಡ, ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂಥ ಘಟನೆಗಳು ಇನ್ನು ಮರುಕಳಿಸದಂತೆ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸರ ಮೇಲೆ ಒತ್ತಡ ಹೇರಿ ಈ ಕೃತ್ಯ ನಡೆಸುವಂತೆ ಮಾಡಲಾಗಿದೆ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂದು ಭಾವಿಸಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆಯೇ ಹಲ್ಲೆ ಮಾಡಿಸಿದ್ದಾರೆ. ಆದರೆ ಹಲ್ಲೆ ಕೃತ್ಯಕ್ಕೆ ಇಲಾಖೆಯೇ ನೇರ ಹೊಣೆಯಾಗಿದೆ. ಪುತ್ತೂರಿಗೆ ಜನಸ್ನೇಹಿ ಅಧಿಕಾರಿಗಳು ಬೇಕು. ಹಲ್ಲೆ ನಡೆಸಿದ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆಕ್ರೋಶವನ್ನು ಹೊರಹಾಕಿದರು.

ಇದನ್ನೂ ಓದಿ: Puttur News: ಹಿಂದು ಕಾರ್ಯಕರ್ತರ ಮೇಲೆ ಪೊಲೀಸ್‌ ದೌರ್ಜನ್ಯ; ಇಬ್ಬರು ಸಸ್ಪೆಂಡ್, ಡಿವೈಎಸ್‌ಪಿಗೆ ಕಡ್ಡಾಯ ರಜೆ

ಮೇ 21ಕ್ಕೆ ಪಾದಯಾತ್ರೆ

ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಹೇಳುವ ಸಲುವಾಗಿ ಮೇ 21ರಂದು ಸಂಜೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದ ದೇವರ ಮಾರು ಗದ್ದೆಯಲ್ಲಿ `ನಮ್ಮ ನಡಿಗೆ ಮಹಾಲಿಂಗೇಶ್ವರನ ಕಡೆಗೆ’ ಎಂಬ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಬೆಂಬಲಿಸಿದ ಕಾರ್ಯಕರ್ತರು ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಹಾಗೂ ದೇವರಿಗೆ ವಂದನೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ ಎಂದ ಅವರು, ಸಂಜೆ 4 ಗಂಟೆಗೆ ದರ್ಬೆ ವೃತ್ತದ ಬಳಿಯಿಂದ ಸಾವಿರಾರು ಕಾರ್ಯಕರ್ತರ ಜತೆ ಪಾದಯಾತ್ರೆ ನಡೆಯಲಿದೆ. ಬಳಿಕ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

Exit mobile version