Site icon Vistara News

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

chakravarthy sulibele

ಮೈಸೂರು: ಮೈಸೂರಿನ ವೀರ ಸಾವರ್ಕರ್ ಪ್ರತಿಷ್ಠಾನವು ಮಂಗಳವಾರ ಸಂಜೆ ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರಿಗೆ ‘ವೀರ ಸಾವರ್ಕರ್ ಸಮ್ಮಾನ್-2024’ ಪ್ರಶಸ್ತಿ ಪ್ರದಾನ ಮಾಡಿತು. ಕಲಾಮಂದಿರದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಕೊಡವವರು ನಿಲ್ಲುವುದು, ಸ್ವೀಕರಿಸುವುದು ಕೂರುವುದು ವಾಡಿಕೆ. ಆದರೆ ಚಕ್ರವರ್ತಿ ಸೂಲಿಬೆಲೆ ಅವರು ಭೈರಪ್ಪ ಅವರನ್ನು ಕೂರಿಸಿ ತಾವು ಮಂಡಿಯೂರಿ ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಮಾತನಾಡಿದ ಎಸ್​ ಎಲ್ ಭೈರಪ್ಪ ಅವರು, ತ್ರಿವಿಧ ದಾಸೋಹಿಯಾಗಿ ತುಮಕೂರಿನ ಸಿದ್ಧಗಂಗಾ ಶ್ರೀಗಳು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದರೂ, ಅವರಿಗೆ ಮರಣೋತ್ತರ ಭಾರತ ರತ್ನ ನೀಡದಿರುವುದು ಇಂದಿಗೂ ನನ್ನನ್ನು ಕಾಡುತ್ತಿದೆ ಎಂದು ಹೇಳಿದರು.

ಕೆಲವು ಸ್ವಾಮೀಜಿಗಳು ತಮಗೆ ಡಾಕ್ಟರೇಟ್‌ ಕೊಡಲಿ ಎಂದು ಹಪಹಪಿಸುತ್ತಾರೆ. ಆದರೆ ತುಮಕೂರಿನ  ಸಿದ್ದಗಂಗಾ ಶ್ರೀಗಳು ಯಾವುದೇ ಅಪೇಕ್ಷೆ ಇಲ್ಲದೆ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಮಕ್ಕಳ ಜಾತಿ ಯಾವುದೆಂದು ಕೇಳದ ಸಿದ್ಧಗಂಗಾ ಸ್ವಾಮೀಜಿ ಅವರು, ಶಿಕ್ಷಣ ದಾಸೋಹ, ಅನ್ನ ದಾಸೋಹ ಮಾಡಿದ್ದಾರೆ. ಆ ಮೂಲಕ ಸಿದ್ದಗಂಗಾ ಸ್ವಾಮೀಜಿ ಅವರು ಸಮಾಜದ ಸೇವೆಗೆ ತಮ್ಮನ್ನು ಮುಡಿಪಾಗಿ ಇಟ್ಟಿದ್ದರು. ನಾನು ಸಹ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದೆ. ಆದರೆ ದುರಂತದ ಸಂಗತಿಯೆಂದರೆ ಸಾವರ್ಕರ್‌ ಅವರನ್ನು ಮೈಲಿಗೆಯಲ್ಲಿ ಇಟ್ಟಂತೆ ಸಿದ್ದಗಂಗಾ ಶ್ರೀಗಳನ್ನು ಇಡಲಾಗಿದೆ ಅನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರಾಪಗಾಂಡ ವಾರ್​

ಸಮಾರಂಭದಲ್ಲಿ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಇಂದು ಯಾವ ದೇಶವು ಭಾರತದ ಮೇಲೆ ಪ್ರತ್ಯಕ್ಷ ಯುದ್ಧ ಮಾಡಲು ಸಾಧ್ಯವಾಗದ ಪರಿಣಾಮ ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಎಂದು ಪ್ರಚುರಪಡಿಸುವ ಪ್ರಾಪಗಾಂಡ ವಾರ್‌ ನಡೆಸಲಾಗುತ್ತಿದೆ. ಭಾರತದ ಬಡತನದ ರಾಷ್ಟ್ರ, ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ಮೋದಿ ಮತ್ತು ಬಿಜೆಪಿ ಈ ಬಾರಿ ಸೋಲುತ್ತಾರೆ ಎಂದು ಸುಳ್ಳನ್ನು ಸತ್ಯವೆಂದು ಎಲ್ಲ ಕಡೆಗಳಲ್ಲೂ ಹಬ್ಬಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

ಪ್ರಶಸ್ತಿಯು 1 ಲಕ್ಷ ರೂ. ನಗದನ್ನು ಒಳಗೊಂಡಿದೆ. ಆದರೆ ಪ್ರಶಸ್ತಿ ರೂಪದಲ್ಲಿ ನೀಡಲಾದ 1 ಲಕ್ಷ ರೂ. ಹಣವನ್ನು ಗೋಶಾಲೆ ಅಭಿವೃದ್ಧಿಗೆ ನೀಡುವುದಾಗಿ ಚಕ್ರವರ್ತಿ ಸೂಲಿಬೆಲೆ ಘೋಷಿಸಿದರು.

ಸಮಾರಂಭದಲ್ಲಿ ಶಾಸಕ ಟಿ.ಎಸ್‌. ಶ್ರೀವತ್ಸ, ಮಾಜಿ ಮೇಯರ್‌ ಶಿವಕುಮಾರ್‌, ವೀರ ಸಾವರ್ಕರ್‌ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ ಎಸ್‌., ಆದಿತ್ಯ ಅಧಿಕಾರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್‌ ಮತ್ತಿತರರು ಇದ್ದರು.

Exit mobile version