ಶಿವಮೊಗ್ಗ: ಟ್ವಿಟರ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕರಣ ಸಂಬಂಧ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದ ಹಿನ್ನೆಲೆಯಲ್ಲಿ ವಿನೋಬನಗರದ (Shivamogga News) ಪೊಲೀಸ್ ಠಾಣೆ ಮುಂಭಾಗ ನೂರಾರು ಯುವ ಬ್ರಿಗೇಡ್ ಕಾರ್ಯಕರ್ತರು ಜಮಾಯಿಸಿದ್ದರಿಂದ ಬುಧವಾರ ರಾತ್ರಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ನಗರದಲ್ಲಿ ಉಪನ್ಯಾಸ ಕಾರ್ಯಕ್ರಮ ಮುಗಿದ ಬಳಿಕ ಚಕ್ರವರ್ತಿ ಸೂಲಿಬೆಲೆಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದರು. ಈ ವೇಳೆ ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಲಿಬೆಲೆ ಹೇಳಿಕೆ ಪಡೆದ ನಂತರ ಅವರನ್ನು ಪೊಲೀಸರು ವಾಪಸ್ ಕಳುಸಿದ್ದಾರೆ.
ಲಿಖಿತ ಹೇಳಿಕೆ ನೀಡಿ ವಾಪಸ್ಸಾದ ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು, ಸುಳ್ಳು ಕಂಪ್ಲೇಟ್ ನೀಡಿದ ವಿಷಯಕ್ಕೆ ಉತ್ತರಿಸಲು ಬಂದಿದ್ದೆ. ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ. ದೂರು ದಾಖಲು ಮಾಡಿಕೊಳ್ಳುವ ಸಂಗತಿಯೇ ಇದಲ್ಲ. ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಹ್ಯಾಂಡ್ಲರ್ ಮೋದಿ ಮೋರಿ ಅಂತ ಟ್ವೀಟ್ ಮಾಡಿದ್ದರು. ನಿನಗ್ಯಾಕೆ ಉರಿ ಎಂದು ಅದಕ್ಕೆ ಪ್ರತ್ಯುತ್ತರ ನೀಡಲಾಗಿತ್ತು. ಪ್ರಿಯಾಂಕ ಖರ್ಗೆ ನನ್ನನ್ನು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸುವುದಾಗಿ ಹೇಳಿದ್ದರು. ಆದರೆ ಈ ಥರ ಮೆಟ್ಟಿಲು ಹತ್ತಿಸುತ್ತಾರೆಂದು ತಿಳಿದುಕೊಂಡಿರಲಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಇಂತಹ ಘಟನೆಗಳು ನಡೆಯುತ್ತವೆ. ದಮನಿಸುವ ಕೆಲಸ ನಡೆಯುತ್ತಲೇ ಇರುತ್ತದೆ. ಸರ್ಕಾರ ಇಡೀ ಪೊಲೀಸ್ ಫೋರ್ಸ್ ಅನ್ನು ಬಳಸಿಕೊಂಡಿದೆ. ಪೊಲೀಸರು ಮೂರು ದಿನಗಳಿಂದ ಸರ್ಕಾರದ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸಣ್ಣ ದೂರು ಇಟ್ಟುಕೊಂಡು ದೊಡ್ಡ ಹೆಜ್ಜೆ ಇಟ್ಟಿದೆ. ದೂರಿನ ಆಧಾರದ ಮೇಲೆ ಹೇಳಿಕೆ ನೀಡಿದ್ದೇನೆ. ನಾನು ಕೋರ್ಟ್ ಮಾತನಾಡುವೆ ಎಂದು ಹೇಳಿದ್ದೆ. ಆ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದರು.
ಇದನ್ನೂ ಓದಿ | Cauvery Dispute: ರೈತಾಕ್ರೋಶದ ನಡುವೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು; ಸಿಡಿದೆದ್ದ ಮಂಡ್ಯದ ಅನ್ನದಾತರು
ಪೊಲೀಸ್ ಸ್ಟೇಷನ್ ಬಳಿ ಇಷ್ಟೊಂದು ಜನ ಸೇರಿದ್ದಕ್ಕೆ ಪ್ರೀತಿಪೂರ್ವಕ ನಮನ. ಕಾಂಗ್ರೆಸ್‌ನವರು ಕಪೋಲಕಲ್ಪಿತ, ಅವಮಾನಿಸುವ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಕಾಂಗ್ರೆಸ್‌ನವರು ಶೋಬಕ್ಕ ಬದಲು ಚೊಂಬಕ್ಕ, ಮೋದಿ ಬದಲು ಮೋರಿ ಅಂತೆಲ್ಲ ಟ್ವೀಟ್ ಮಾಡುತ್ತಾರೆ. ಈ ಪ್ರಕರಣದ ಫ್ಯಾಕ್ಟ್ ಚೆಕ್ ಕೂಡ ಮಾಡಲಿ. ಪೊಲೀಸರು ಪ್ರೀತಿಯಿಂದ ಕರೆದುಕೊಂಡು ಬಂದರು, ನೋಟಿಸ್ ಕೊಟ್ಟು ಕರೆಯಲು ಬಂದಿದ್ದರು ಎಂದು ತಿಳಿಸಿದರು.
ನಾವು ಯಾವುದೇ ಬೆದರಿಕೆಗೆ ಜಗ್ಗಲ್ಲ, ಕಾಂಗ್ರೆಸ್‌ನವರಿಗೆ ಅಭಿನಂದನೆಗಳು. ಬಿಟ್ಟಿ ಭಾಗ್ಯ ವಿಫಲ ಅಂದ ಸರ್ಕಾರಿ ನೌಕರರನ್ನೂ ಬೆದರಿಸಿದರು. ಸಮಾಜ ಸುಭದ್ರ ಆಗುವವರೆಗೆ ನಮ್ಮ ಹೋರಾಟ ನಿರಂತರ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.