Site icon Vistara News

Namma Metro: ಐಟಿ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌; ಅ.6ಕ್ಕೆ ಚಲ್ಲಘಟ್ಟ- ವೈಟ್‌ಫೀಲ್ಡ್‌ ಮೆಟ್ರೋ ಸಂಚಾರ ಆರಂಭ ಸಾಧ್ಯತೆ

Metro Rail

ಬೆಂಗಳೂರು: ರಾಜಧಾನಿಯ ಐಟಿ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗದ ಚಲ್ಲಘಟ್ಟ- ವೈಟ್‌ಫೀಲ್ಡ್‌ ನಡುವೆ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ರೈಲು (Namma Metro) ವಾಣಿಜ್ಯ ಸೇವೆ ಅಕ್ಟೋಬರ್ 6ರಂದು ಆರಂಭವಾಗುವ ಸಾಧ್ಯತೆ ಇದೆ. ಇದರಿಂದ ಹೆಚ್ಚು ಐಟಿ ಕಂಪನಿಗಳು ಇರುವ ಐಟಿಪಿಬಿ, ವೈಟ್‌ಫೀಲ್ಡ್‌ ಭಾಗಕ್ಕೆ ತೆರಳಲು ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ.

ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ನಿಲ್ದಾಣ (Namma Metro) ನಡುವೆ ಬಾಕಿ ಉಳಿದಿದ್ದ 2 ಕಿ.ಮೀ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದರಿಂದ ಸೆ. 21ರಂದು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಿದ್ದರು. ಇನ್ನು ಮಂಗಳವಾರ ಚಲ್ಲಘಟ್ಟ- ವೈಟ್‌ಫೀಲ್ಡ್‌ ಮಾರ್ಗವನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಸುರಕ್ಷತಾ ಪರಿಶೀಲನೆ ನಡೆಸಿ, ವಾಣಿಜ್ಯ ಸೇವೆಗೆ ಹಸಿರು ನಿಶಾನೆ ತೋರುವ ಸಾಧ್ಯತೆ ಇದೆ. ಹೀಗಾಗಿ ಶುಕ್ರವಾರ (ಅ.6ರಂದು) ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

ಇದನ್ನೂ ಓದಿ | Car Sales: ಆಟೊಮೊಬೈಲ್‌ ವಲಯ ಚೇತರಿಕೆ, ಸೆಪ್ಟೆಂಬರ್‌ನಲ್ಲಿ ಕಾರುಗಳ ಸಾರ್ವಕಾಲಿಕ ದಾಖಲೆ ಮಾರಾಟ

ವಿಳಂಬಕ್ಕೆ ಸಂಸದ ತೇಜಸ್ವಿ ಸೂರ್ಯ ಬೇಸರ

ಮೆಟ್ರೋ ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ರೈಲು ಸಂಚಾರ ವಿಳಂಬವಾಗುತ್ತಿರುವ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಅಸಮಾಧಾನ ಹೊರಹಾಕಿದ್ದಾರೆ. ಪ್ರತಿದಿನ ಸುಮಾರು 5 ರಿಂದ 6 ಲಕ್ಷ ಜನರು ಬೆಂಗಳೂರು ಮೆಟ್ರೋವನ್ನು ಬಳಸುತ್ತಾರೆ. ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗ ಉದ್ಘಾಟನೆಯಾದರೆ ಸುಮಾರು ಶೇ. 50-60 ರಷ್ಟು ಮೆಟ್ರೋ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.

ಪ್ರಾಯೋಗಿಕ ಪರೀಕ್ಷೆ ಸೇರಿ ಸಿಎಂಆರ್‌ಎಸ್‌ನಿಂದ ಅನುಮೋದನೆ ದೊರೆತಿದ್ದರೂ ರಾಜ್ಯ ಸರ್ಕಾರ ಉದ್ಘಾಟನೆಗೆ ಇನ್ನೂ ವಿಳಂಬ ಮಾಡುತ್ತಿದೆ. ರಾಹುಲ್ ಗಾಂಧಿ ಅಥವಾ ಇತರ ಕಾಂಗ್ರೆಸ್ ನಾಯಕರು ಬಂದು ಉದ್ಘಾಟನೆ ಮಾಡಲಿ ಎಂಬ ಕಾರಣದಿಂದ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಸರ್ಕಾರ ಮೀನ ಮೇಷ ಎಣಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಎಲ್ಲಾ ಸಿದ್ದಗೊಂಡಿದ್ದರೂ ಮೆಟ್ರೋ ರೈಲು ಸಂಚಾರ ಆರಂಭವಾಗದಿರುವುದರಿಂದ ಜನರು ನಿರಾಸೆಗೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರವು ರಾಜಕೀಯ ಕಾರಣಕ್ಕಾಗಿ ಅದನ್ನು ಮುಕ್ತಗೊಳಿಸುತ್ತಿಲ್ಲ. ಕೂಡಲೇ ಈ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, ಬೆಂಗಳೂರು ಜನರು ತೊಂದರೆ ಅನುಭವಿಸಲು ಬಿಡಬಾರದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ಟೆಕ್ಕಿಗಳಿಗೆ ಹೆಚ್ಚಿನ ಅನುಕೂಲ

ಚಲ್ಲಘಟ್ಟ- ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಿಂದ ಸಾವಿರಾರು ಟೆಕ್ಕಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದರಿಂದ ಐಟಿ ಉದ್ಯೋಗಿಗಳಿಗೆ ಕಷ್ಟಪಡುತ್ತಿದ್ದರು. ಬೆಳಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಈ ಮಾರ್ಗದಲ್ಲಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿ ವಾಹನ ಸವಾರರು ಪರದಾಡುತ್ತಾರೆ. ಈ ಮಾರ್ಗದ ಮೆಟ್ರೋ ಆರಂಭವಾದರೆ ಹೆಚ್ಚಿನ ಮಂದಿ ಮೆಟ್ರೋ ಅವಲಂಭಿಸಲಿದ್ದು, ಟ್ರಾಫಿಕ್‌ ದಟ್ಟಣೆ ಕೂಡ ಕಡಿಮೆಯಾಗಲಿದೆ. ಇದರಿಂದ ಐಟಿ ಉದ್ಯೋಗಿಗಳಿಗೆ ತುಸು ನೆಮ್ಮದಿ ಸಿಕ್ಕಂತಾಗಲಿದೆ.

ಕೆಂಗೇರಿಯಿಂದ ವೈಟ್‌ ಫೀಲ್ಡ್‌ ಕಡೆಗೆ ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿ.ಮೀ. ಬಸ್‌ನಲ್ಲಿ ಸಾಗುತ್ತಿದ್ದ ಪ್ರಯಾಣಿಕರು. ಮತ್ತೆ ಕೆ.ಆರ್.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಸಾಗಬೇಕಿತ್ತು, ಇದರಿಂದ ಮೆಟ್ರೊ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಆಗುತ್ತಿತ್ತು.

ಇದನ್ನೂ ಓದಿ | Rashtrotthana Parishat: ತಪಸ್-ಸಾಧನಾ ಯೋಜನೆಗೆ ಅರ್ಜಿ ಆಹ್ವಾನ; ಪಿಯುಸಿ ಜತೆಗೆ ಜೆಇಇ, ನೀಟ್‌ ಉಚಿತ ತರಬೇತಿ

ಮಾರ್ಚ್ 25ರಂದು ಕೆ.ಆರ್.ಪುರ- ವೈಟ್ ಫೀಲ್ಡ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಆದರೆ, ವೈಟ್ ಫೀಲ್ಡ್ – ಬೈಯಪ್ಪನಹಳ್ಳಿ‌ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಕೆ.ಆರ್. ಪುರದಲ್ಲಿ ಇಳಿದು ಇತರೆ ಸಾರಿಗೆಯನ್ನು ಅವಲಂಬಿಸಬೇಕಿತ್ತು. ಈಗ ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲು ಕಾರ್ಯಾಚರಣೆಗೆ ಬಿಎಂಆರ್‌ಸಿಎಲ್‌ ತಯಾರಿ ನಡೆಸುತ್ತಿದೆ.

Exit mobile version