ಚಾಮರಾಜನಗರ: ಚಾಮರಾಜ ನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯನ್ನು ನಾನು ನಂಬುವುದಿಲ್ಲ. ನನ್ನ ಪ್ರಕಾರ ಚಾಮರಾಜನಗರ ಜಿಲ್ಲೆಗೆ ಬಂದರೆ ಕಷ್ಟ ನಿವಾರಣೆ ಆಗುತ್ತದೆ, ಶುಭವಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಂಗಳವಾರ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರಗಳ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ಕೆಲವನ್ನು ಉದ್ಘಾಟನೆ ಮಾಡಿದರು.
ʻʻಸಚಿವ ಸ್ಪೀಡ್ ಸೋಮಣ್ಣ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಈಗ ಚಾಮರಾಜನಗರಕ್ಕೆ ಹೋದರೆ ರಾಜಕೀಯ ವೃದ್ಧಿ ಆಗುತ್ತದೆʼʼ ಎಂದು ಹೇಳಿದರು. ʻʻಅನೇಕ ವರ್ಷಗಳಿಂದ ಮೂಢನಂಬಿಕೆ ಇದೆ. ನಾನು ಇದನ್ನು ನಂಬುವುದಿಲ್ಲ. ಇಲ್ಲಿನ ಜನ ಮುತ್ತಿನಂತಹ ಜನ. ಚಾಮರಾಜನಗರ ಜಿಲ್ಲೆಗೆ ಬಂದರೆ ನಿಮ್ಮ ಕಷ್ಟ ನಿವಾರಣೆ ಆಗುತ್ತೆʼʼ ಎಂದು ಹೇಳಿದರು.
ʻʻಸುತ್ತೂರು ಸ್ವಾಮೀಜಿ ಅವರು ಜಿಲ್ಲೆಯಲ್ಲಿ ಕೆರೆ ತುಂಬಿಸುವ ಯೋಜನೆ ರೂಪಿಸಬೇಕು ಎಂದು ಹೇಳಿದರು. ನಾನು ನೀರಾವರಿ ಸಚಿವನಾಗಿದ್ದಾಗ ಮೊದಲ ಹಂತದ ಕಾಮಗಾರಿ ಪ್ರಾರಂಭ ಆಯಿತು. ಯಡಿಯೂರಪ್ಪ ನೇತೃತ್ವದಲ್ಲಿ ಯೋಜನೆ ಮಾಡಿದ್ದೇವೆ. 121 ಕೆರೆ ತುಂಬಿಸಲು ಯೋಜನೆ ಮಾಡಿದ್ದೇವೆ. ಸಮಗ್ರ ಕೆರೆ ಅಭಿವೃದ್ಧಿಗೆ 111 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ಮಂಜೂರಾತಿ ಸಿಗಲಿದೆ. ನಾನೂ ಇಲ್ಲಿ ಹಲವು ಕೆರೆಗಳಿಗೆ ಭೇಟಿ ನೀಡಿದ್ದೇನೆʼʼ ಎಂದು ಬೊಮ್ಮಾಯಿ ಹೇಳಿದರು.
ʻʻಚಾಮರಾಜ ನಗರಕ್ಕೆ ಕೈಗಾರಿಕಾ ಜಿಲ್ಲೆಯಾಗಲು ಅವಕಾಶ ಇದೆ. ಬೀದರ್ ಮಾದರಿಯಲ್ಲಿ ಚಾಮರಾಜನಗರ ಅಭಿವೃದ್ಧಿ ಮಾಡಬೇಕು. 1000 ಎಕರೆ ಜಾಗದಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸಲು ಸರ್ಕಾರ ಕೊಡುಗೆ ನೀಡಲಿದೆʼʼ ಎಂದು ಬೊಮ್ಮಾಯಿ ತಿಳಿಸಿದರು.
ನಕಾರಾತ್ಮಕ ರಾಜಕಾರಣ ನಡೆಯಲ್ಲ
ʻʻಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಯಿಂದ ಮತ ಕೇಳಬೇಕು. ಬಹಳ ವರ್ಷಗಳಿಂದ ನಕಾರಾತ್ಮಕ ರಾಜಕಾರಣ ನಡೆಯುತ್ತಿತ್ತು. ಇನ್ನೊಬ್ಬರ ವೈಫಲ್ಯಗಳ ಮೇಲೆ ಸರ್ಕಾರಗಳು ಬರುತ್ತಿತ್ತು. ಇದರಿಂದ ರಾಜ್ಯಕ್ಕೆ, ದುಡಿಯುವ ವರ್ಗಕ್ಕೆ ಅನುಕೂಲ ಆಗುತ್ತಿರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಸಕಾರಾತ್ಮಕ ರಾಜಕಾರಣ ಮಾಡುತ್ತಿದ್ದಾರೆʼʼ ಎಂದು ಬೊಮ್ಮಾಯಿ ಹೇಳಿದರು.
ʻʻಸಮಸ್ಯೆಗಳು ಇಲ್ಲ ಎಂದು ಹೇಳುವುದಿಲ್ಲ. ಅವುಗಳನ್ನು ಎದುರಿಸುವ ತಾಕತ್ತು ಬೇಕು. ಜನಪ್ರಿಯ ಸರ್ಕಾರಗಳು ಬಂದು ಹೋಗಿವೆ. ಜನಪರವಾದ ಸರ್ಕಾರ, ಶಾಸಕರು, ಮಂತ್ರಿಗಳು ಬೇಕುʼʼ ಎಂದು ಬೊಮ್ಮಾಯಿ ನುಡಿದರು.
ಶ್ರೀನಿವಾಸ ಪ್ರಸಾದ್ ಭಾಷಣ ವೇಳೆ ಅಡ್ಡಿ
ಸಂಸದ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಜಿಲ್ಲೆ ರಚನೆಯಾಗಿ ೨೫ ವರ್ಷ ಆಗಿದೆ. ಹೊಸ ಜಿಲ್ಲೆಗಳ ಪೈಕಿ ಉಡುಪಿ, ದಾವಣಗೆರೆ ಮೂಲಸೌಕರ್ಯ ಇತ್ತು. ಗದಗ, ಹಾವೇರಿ, ಚಾಮರಾಜನಗರಕ್ಕೆ ಮೂಲಸೌಕರ್ಯ ಇರಲಿಲ್ಲ. ಜಿಲ್ಲೆಗೆ ಇನ್ನಷ್ಟು ಮೂಲ ಸೌಕರ್ಯ ಬೇಕು ಮತ್ತು ಮುಖ್ಯವಾಗಿ ಕ್ರೀಡಾಂಗಣ ಬೇಕು ಎಂದು ಹೇಳಿದರು.
ಈ ನಡುವೆ, ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಬೆಂಬಲಿಗರು ಕೂಗಾಡಿ ಅಡ್ಡಿ ಮಾಡಿದರು. ಇದರಿಂದ ಸಿಟ್ಟಿಗೆದ್ದ ಶ್ರೀನಿವಾಸ್ ಪ್ರಸಾದ್, ʻʻಯಾಕ್ ರೀ, ಶಿಳ್ಳೆ ಹಾಕ್ತೀರಿ? ಮಾತಾಡುವವರೆಗೆ ಇರಿ. ನಿರಂಜನ್ ಮಾತನಾಡುವಾಗ ಕೂಗಿ. ಈಗ ಸುಮ್ಮನಿರಿʼʼ ಎಂದು ಗದರಿದರು.
ಮಧ್ಯ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ʻʻಶ್ರೀನಿವಾಸ ಪ್ರಸಾದ್ ಹಿರಿಯ ನಾಯಕರು. ಅನುಭವದ ಆಧಾರದ ಮೇಲೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಸುಮ್ಮನಿರಿ, ಇದು ಸರ್ಕಾರಿ ಕಾರ್ಯಕ್ರಮʼʼ ಎಂದು ಮನವಿ ಮಾಡಿದರು. ಬಳಿಕ ಪ್ರಸಾದ್ ಭಾಷಣ ಮುಂದುವರಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೊಕ್, ವಿ. ಸೋಮಣ್ಣ, ಶಾಸಕರಾದ ಪುಟ್ಟರಂಗಶೆಟ್ಟಿ, ನಿರಂಜನಕುಮಾರ್ ಹಾಗೂ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ | Human-Elephant conflict | ಮಾನವ-ಆನೆ ಸಂಘರ್ಷ; ಪರಿಹಾರ ದ್ವಿಗುಣಗೊಳಿಸಲು ಸಿಎಂ ಬೊಮ್ಮಾಯಿ ಸಮ್ಮತಿ