ಚಾಮರಾಜನಗರ: ಯುವಕನೊಬ್ಬ ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ (Intercaste Marriage) ಗ್ರಾಮದಿಂದಲೇ ಬಹಿಷ್ಕಾರ ಹಾಕಿ, ಗ್ರಾಮಕ್ಕೆ ಬಂದರೆ ಸಜೀವ ದಹನ ಮಾಡುವ ಬೆದರಿಕೆ ಹಾಕಿದ ಗ್ರಾಮದ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿತ್ತು.
ಉಪ್ಪಾರ ಸಮಾಜದ ಗೋವಿಂದರಾಜು ಎಂಬುವವರಿಗೆ ಬಹಿಷ್ಕಾರದ ಶಿಕ್ಷೆ ಜತೆಗೆ ದಂಡ ವಿಧಿಸಲಾಗಿತ್ತು. ಗೋವಿಂದರಾಜು ಕಳೆದ 2018ರಲ್ಲಿ ಮಳವಳ್ಳಿ ಮೂಲದ ಅನ್ಯಜಾತಿಯ ಯುವತಿಯೊಂದಿಗೆ ವಿವಾಹವಾಗಿದ್ದರು. ಮಳವಳ್ಳಿಯಲ್ಲಿ ವಾಸವಿದ್ದ ಗೋವಿಂದರಾಜು ತಾಯಿ ಅನಾರೋಗ್ಯಕ್ಕೀಡಾಗಿದ್ದರಿಂದ, ಅವರ ಆರೋಗ್ಯ ವಿಚಾರಿಸಲೆಂದು ಊರಿಗೆ ಬಂದಾಗ ಮುಖಂಡರು 3 ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಈ ಅನಿಷ್ಠ ಪದ್ಧತಿ ವಿರೋಧಿಸಿ ಗೋವಿಂದರಾಜು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ, ಮತ್ತೆ ದಂಡದ ಮೊತ್ತ 6 ಲಕ್ಷ ರೂಪಾಯಿಗೆ ಗ್ರಾಮಸ್ಥರು ಹೆಚ್ಚಿಸಿದ್ದರು.
ಬೇರೆ ಜಾತಿ ಹುಡುಗಿ ಮದುವೆ ಆಗಿದ್ದಕ್ಕೆ ಸಜೀವ ದಹನ ಮಾಡುವುದಾಗಿ ಸಮಾಜ ಮುಖಂಡರು ಬೆದರಿಕೆ ಹಾಕುತ್ತಿದ್ದಾರೆ ಎಂದು ಗೋವಿಂದ ರಾಜು ಆರೋಪಿಸಿದ್ದರು. ಹೀಗಾಗಿ ಈ ಸಂಬಂಧ ಅಗರ-ಮಾಂಬಳ್ಳಿ ಠಾಣೆಯಲ್ಲಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾರ್ಚ್ 6 ರಂದು ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಶುಕ್ರವಾರ 8 ಜನ ಆರೋಪಿಗಳು ಡಿವೈಎಸ್‌ಪಿಗೆ ಶರಣಾಗಿದ್ದಾರೆ. ಪ್ರಕರಣ ಸಂಬಂಧ ಒಟ್ಟು 12 ಜನ ಮಂದಿ ಪೊಲೀಸರ ವಶದಲ್ಲಿದ್ದು, ಮಹಿಳೆ ಸೇರಿದಂತೆ ಮೂವರು ನಾಪತ್ತೆ ಆಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ: Group Clash: ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ಘರ್ಷಣೆ; ಹಲವು ವಾಹನಗಳು ಜಖಂ, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ
ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹಾಗು ಐಪಿಸಿ ಸೆಕ್ಷನ್ 1860 ರಡಿ ಪ್ರಕರಣ ದಾಖಲು ಮಾಡಲಾಗಿದೆ. ನೊಂದ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 1 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ