ಚಾಮರಾಜನಗರ: ಅನ್ಯ ಜಾತಿಯ ಯುವತಿಯನ್ನು ಮದುವೆಯಾದ ಯುವಕನಿಗೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಇನ್ನೂ ಜೀವಂತವಾಗಿದೆ ಎಂಬುದು ಸಾಬೀತಾಗಿದೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ (Chamarajanagar News) ಇಂತಹದ್ದೊಂದು ಅಮಾನವೀಯ ಘಟನೆ ನಡೆದಿದೆ.
ಉಪ್ಪಾರ ಸಮಾಜದ ಗೋವಿಂದರಾಜು ಎಂಬುವವರಿಗೆ ಬಹಿಷ್ಕಾರದ ಶಿಕ್ಷೆ ಜತೆಗೆ ದಂಡ ವಿಧಿಸಿದ್ದಾರೆ. ಗೋವಿಂದರಾಜು ಕಳೆದ 2018ರಲ್ಲಿ ಮಳವಳ್ಳಿ ಮೂಲದ ಅನ್ಯಜಾತಿಯ ಯುವತಿಯೊಂದಿಗೆ ವಿವಾಹವಾಗಿದ್ದಾರೆ. ಸದ್ಯ ಮಳವಳ್ಳಿಯಲ್ಲಿ ಈ ಕುಟುಂಬ ವಾಸವಾಗಿದೆ.
ಆದರೆ, ಈ ಮಧ್ಯೆ ಗೋವಿಂದರಾಜು ತಾಯಿ ಅನಾರೋಗ್ಯಕ್ಕೀಡಾಗಿದ್ದು, ಅವರ ಆರೋಗ್ಯ ವಿಚಾರಿಸಲೆಂದು ಊರಿಗೆ ಬಂದಾಗ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಈ ಅನಿಷ್ಠ ಪದ್ಧತಿ ವಿರೋಧಿಸಿ ಗೋವಿಂದರಾಜು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ, ಠಾಣೆಗೆ ಹೋದ ಕಾರಣ ಮತ್ತೆ ದಂಡದ ಮೊತ್ತ 6 ಲಕ್ಷ ರೂಪಾಯಿಗೆ ಗ್ರಾಮಸ್ಥರು ಹೆಚ್ಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: Road Accident: ಕಾರು-ಕ್ರೂಸರ್ ನಡುವೆ ಅಪಘಾತ; ಶಾಲಾ ವಿದ್ಯಾರ್ಥಿಗಳಿದ್ದ ಕ್ರೂಸರ್ ಪಲ್ಟಿ, ವಿದ್ಯಾರ್ಥಿಗಳಿಗೆ ಗಾಯ
ಬೇರೆ ಜಾತಿ ಹುಡುಗಿ ಮದುವೆ ಆಗಿದ್ದಕ್ಕೆ ಸಜೀವ ದಹನ ಮಾಡುವುದಾಗಿ ಸಮಾಜ ಮುಖಂಡರು ಬೆದರಿಕೆ ಹಾಕುತ್ತಿದ್ದಾರೆ ಎಂದು ಗೋವಿಂದ ರಾಜು ಆರೋಪಿಸಿದ್ದಾರೆ. ಸದ್ಯ, ಅಗರ-ಮಾಂಬಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಗ್ರಾಮಸ್ಥರ ಈ ನಡೆಗೆ ಗೋವಿಂದರಾಜು ಕುಟುಂಬ ಕಿಡಿಕಾರಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ