Site icon Vistara News

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

Bharachukki falls

ಚಾಮರಾಜನಗರ: ಭಾರಿ ಮಳೆಗೆ (Karnataka Rain) ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ (Bharachukki Falls) ಭೋರ್ಗರೆಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಭರಚುಕ್ಕಿ ಜಲಪಾತ ಭೋರ್ಗರೆಯುತ್ತಿದೆ.

ಯುವಕರ ಗುಂಪೊಂದು ನಿರ್ಬಂಧ ಇದ್ದರೂ ಪೊಲೀಸರ ಕಣ್ಣು ತಪ್ಪಿಸಿ ಜಲಪಾತ ತುದಿಗೆ ಹೋಗಿದೆ. ತುದಿಯಲ್ಲಿ ನಿಂತು ಫೋಟೊ, ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸದಲ್ಲಿ ಈ ಗುಂಪು ತೊಡಗಿತ್ತು. ಇವರ ಹುಚ್ಚಾಟ ಮಿತಿ ಮೀರಿದಾಗ ಅದು ಪೊಲೀಸರ ಗಮನಕ್ಕೆ ಬಂತು.

hassan landslide

ಅದು ಕಳ್ಳ ಮಾರ್ಗದ ಮೂಲಕ ಜಲಪಾತದ ಮೇಲೆ ತೆರಳಿ ಹುಚ್ಚಾಟ ಮೆರೆಯುತ್ತಿದ್ದ ಯುವಕರು ಪೊಲೀಸರ ಕೈಗೆ ಲಾಕ್‌ ಆಗಿದ್ದಾರೆ. ಹೀಗೆ ಸಿಕ್ಕಿ ಬಿದ್ದ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಸಿ ಶಿಕ್ಷೆ ಕೊಟ್ಟಿದ್ದಾರೆ. ಬಸ್ಕಿ ಹೊಡಿಸಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಮತ್ತೊಮ್ಮೆ ಕದ್ದು ಮುಚ್ಚಿ ಇಲ್ಲಿಗೆ ಬರದಂತೆ ಬುದ್ಧಿವಾದ ಹೇಳಿ ಕಳಿಸಿದರು. ಯುವಕರು ಬಸ್ಕಿ ಹೊಡೆಯುವ ವಿಡಿಯೊ ವೈರಲ್ ಆಗಿದೆ.

ಹೊಗೇನಲ್‌ ಜಲಪಾತವೇ ಕಣ್ಮರೆ

ಕಾವೇರಿ ನದಿಯ ಆರ್ಭಟಕ್ಕೆ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹೊಗೇನಲ್‌ ಜಲಪಾತವೇ ಕಣ್ಮರೆಯಾಗಿದೆ. 72 ಅಡಿ ಎತ್ತರದಿಂದ ಆರ್ಭಟಿಸುತ್ತಾ ಧುಮ್ಮಿಕ್ಕುತ್ತಿದ್ದ ಜಲಪಾತದಲ್ಲಿ ಕಾವೇರಿ ತುಂಬಿ ಹರಿಯುತ್ತಿದ್ದಾಳೆ. ಕೆ‌ಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೊರ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹೊಗೇನಕಲ್ ಜಲಪಾತಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಲ್ಲು ಬಂಡೆಗಳ ನಡುವೆ ಧುಮ್ಮಿಕ್ಕುತ್ತಾ, ನಯನ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗಿದ್ದ ಹೊಗೇನಕಲ್ ಜಲಪಾತ ಇದೀಗ ಕಾಣದಂತಾಗಿದೆ. ಸದ್ಯ ನೀರು ಹೆಚ್ಚಿರುವ ಕಾರಣ ದೋಣಿ ವಿಹಾರಕ್ಕೂ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ: Karnataka Weather : 8 ಜಿಲ್ಲೆಗಳಿಗೆ ವ್ಯಾಪಕ ಮಳೆ ಎಚ್ಚರಿಕೆ, ಬಿರುಗಾಳಿ ಸಾಥ್‌

ಗುಡ್ಡ ಕುಸಿದು ಕತ್ತರಿಸಿ ಹೋದ ರಸ್ತೆ

ಹಾಸನ: ಹಾಸನ (Hassan news) ಜಿಲ್ಲೆಯಲ್ಲಿ ಮಳೆ ಹಾವಳಿ (karanataka Rain News) ಮುಂದುವರಿದಿದೆ. ಸಕಲೇಶಪುರ (Sakaleshpur) ಬಳಿ ಗುಡ್ಡ ಕುಸಿತದಿಂದ (Landslide) ಸುಮಾರು 200 ಅಡಿಗಳಷ್ಟು ದೂರದ ರಸ್ತೆಯೇ ಕತ್ತರಿಸಿಹೋಗಿ, ಮಂಗಮಾಯವಾಗಿದೆ. ಭಾರಿ ಭೂಕುಸಿತ ಉಂಟಾಗಿರುವ ಕಾರಣ ರಸ್ತೆ ಸರ್ವನಾಶವಾಗಿದ್ದು, ಇದರಿಂದ ಸಂಪರ್ಕಿತರಾಗಿದ್ದ ಸುಮಾರು 10 ಗ್ರಾಮಗಳ ಜನತೆ ಸಂಪರ್ಕ (communication cut) ಕಳೆದುಕೊಂಡಿದ್ದಾರೆ. ಈ ರಸ್ತೆಯ ಸಮೀಪದಲ್ಲಿ ಎತ್ತಿನಹೊಳೆ (Ettinahole project) ಪೈಪ್‌ಲೈನ್‌ ಹಾದುಹೋಗಿದ್ದು, ಅವೈಜ್ಞಾನಿಕವಾಗಿರುವ ಇದರ ಕಾಮಗಾರಿಯೇ ಈ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

hassan landslide

ಹಾಸನದಲ್ಲಿ ಮುಂದುವರೆದ ಮಳೆಯ ಅಬ್ಬರದ ಪರಿಣಾಮ ಉಂಟಾಗುತ್ತಿರುವ ಭೂಕುಸಿತಗಳ ಸಾಲಿಗೆ ಸಕಲೇಶಪುರದ ಬಳಿಯ ಈ ಬೃಹತ್ ಪ್ರಮಾಣದ ಭೂ ಕುಸಿತ ಸೇರಿದೆ. ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪ ಘಟನೆ ನಡೆದಿದೆ. ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಭೂ ಕುಸಿತವಾಗಿದೆ. 200 ಮೀಟರ್‌ಗೂ ಹೆಚ್ಚು ದೂರ ರಸ್ತೆಯ ಸಮೇತ ಭೂಮಿ ಕೊಚ್ಚಿ ಹೋಗಿದ್ದು, ಹತ್ತಾರು ಗ್ರಾಮಗಳ ಸಂಪರ್ಕ ಕಟ್ ಆಗಿದೆ. ಈ ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿಗಾಗಿ ಕೆಲಸ ಮಾಡಲಾಗಿತ್ತು. ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತವಾಗಿದೆ ಎಂದು ಆರೋಪಿಸಲಾಗಿದೆ.

hassan landslide

ಮುಂದುವರಿದ ಹಳಿ ತೆರವು

ಶಿರಾಡಿ ಘಾಡಿಯಲ್ಲಿ ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡವನ್ನು ತೆರವು ಮಾಡುವ ಕಾರ್ಯಾಚರಣೆ ನಾಲ್ಕನೇ ದಿನವೂ ಮುಂದುವರಿದಿದೆ. ಭಾರಿ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಯುತ್ತಿದ್ದು, 420ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಹದಿನೈದು ದಿನಗಳ ಕಾಲ ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ರೈಲು ಮಾರ್ಗ ಬಂದ್ ಆಗಿದೆ. ಕಾರ್ಯಾಚರಣೆಗೆ ಸತತ ಮಳೆ ಅಡ್ಡಿಯಾಗುತ್ತಿದೆ. ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version