ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery Dispute) ಮಾಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಚಾಮರಾಜ ನಗರದಲ್ಲಿ ಪ್ರತಿಭಟನೆ (Cauvery protest) ಜೋರಾಗಿದೆ. ಗಡಿ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ತಮಿಳುನಾಡಿನಿಂದ ಬರುವ ವಾಹನಗಳನ್ನು ತಡೆಯುವುದೂ ಸೇರಿದಂತೆ ಹಲವು ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಇದೀಗ ಸೆಪ್ಟೆಂಬರ್ 27ರಂದು ಬಂದ್‌ಗೆ (Chamarajanagar bandh on Sep. 27) ಕರೆ ನೀಡಲಾಗಿದೆ. ಅಂದೇ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಜಿಲ್ಲೆಗೆ ಭೇಟಿ ನೀಡುತ್ತಿರುವುದರಿಂದ ಅವರಿಗೆ ಬಿಸಿ ಮುಟ್ಟಿಸಲು ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ.
ಚಾಮರಾಜನಗರದಲ್ಲಿ ಬರದ ತೀವ್ರತೆ ಜೋರಾಗಿದೆ. ಇಲ್ಲಿ ಮನುಷ್ಯರಿಗೆ ಮತ್ತು ಪ್ರಾಣಿಗಳೂ ನೀರಿಲ್ಲದ, ಮೇವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಿದ್ದರೂ ತಮಿಳುನಾಡಿಗೆ ನೀರು ಬಿಡುತ್ತಿರುವ ಕ್ರಮದ ವಿರುದ್ಧ ಬಂದ್‌ಗೆ ಕರೆ ನೀಡಲಾಗಿದೆ.
20ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್‌ನ ನಿರ್ಧಾರ ಮಾಡಲಾಗಿದೆ. ಕನ್ನಡಪರ ಸಂಘಟನೆಗಳು, ವರ್ತಕರ ಸಂಘ, ರಾಜ್ಯ ರೈತ ಸಂಘ, ಎಸ್ ಡಿಪಿಐ, ಆಟೋ ಚಾಲಕರ ಸಂಘ ಸೇರಿದಂತೆ ಇತರ ಸಂಘಟನೆಗಳು ಇದರಲ್ಲಿ ಸೇರಿವೆ.
ನೀರು ನಿಲ್ಲಿಸಿ ಬಂದರೆ ಓಕೆ, ಇಲ್ಲವಾದರೆ ಶಕ್ತಿ ತೋರಿಸುತ್ತೇವೆ
ಸೆ. 27ರಂದು ಬೆಳಗ್ಗೆ 11 ಗಂಟೆಗೆ ಚಾಮರಾಜೇಶ್ವರ ದೇವಾಲಯದಿಂದ ಮೆರವಣಿಗೆ ನಡೆಸಲು ನಿರ್ಧಾರ ಮಾಡಲಾಗಿದೆ. ಅಂದೇ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯ ಅವರು ಕಬಿನಿ, ಕಾವೇರಿಯಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಿ ಜಿಲ್ಲೆಗೆ ಬರಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಇಲ್ಲವಾದರೆ ಚಾಮರಾಜನಗರ ರೈತರ ಶಕ್ತಿ ಏನೆಂದು ತೋರಿಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಇದೇವೇಳೆ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆಯನ್ನೂ ಕೊಡಲಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಬಂದ್ ನಿರ್ಣಯ ಕೈಗೊಳ್ಳಲಾಗಿದ್ದು, ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಾಗ್ಯರಾಜು ನೇತೃತ್ವದಲ್ಲಿ ಬಂದ್ ಗೆ ತಯಾರಿ ನಡೆದಿದೆ.
ಉಸ್ತುವಾರಿ ಸಚಿವ ಕೆ. ವೆಂಕಟೇಶ್ ವಿರುದ್ಧ ಆಕ್ರೋಶ
ಸೋಮವಾರ ಜನತಾ ದರ್ಶನ ಕಾರ್ಯಕ್ರಮಕ್ಕಾಗಿ ಚಾಮರಾಜನಗರಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಪ್ರತಿಭಟನೆಯ ಬಿಸಿ ಎದುರಿಸಿದರು.
ಚಾಮರಾಜನಗರ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಅಲ್ಲಿಗೆ ಕೆ. ವೆಂಕಟೇಶ್ ಅವರು ಬರಲಿಲ್ಲ. ತಮ್ಮ ಅಹವಾಲು ಆಲಿಸಿಲ್ಲ ಎಂದು ಅವರು ಸಿಟ್ಟಿಗೆದ್ದಿದ್ದರು.
ಕೈಯಲ್ಲಿ ಮಡಿಕೆ ಹಿಡಿದು ಧಿಕ್ಕಾರ ಕೂಗಿದ ರೈತರು ಪ್ರತಿಭಟನಾ ಸ್ಥಳಕ್ಕೆ ಸಚಿವರು ಬರಲೇ ಬೇಕು ಎಂದು ಪಟ್ಟು ಹಿಡಿದರು. ಬಳಿಕ ಕೆ. ವೆಂಕಟೇಶ್ ಅವರು ಅವರ ಅಹವಾಲು ಆಲಿಸಿದರು.
ಬೃಹತ್ ಗಾತ್ರದ ಗಂಟೆ ಬಾರಿಸುವ ಮೂಲಕ ಪ್ರತಿಭಟನೆ
ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳಿಂದ ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ನೀರು ಬಿಡುಗಡೆ ವಿರುದ್ಧ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆ ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಎಷ್ಟೇ ಹೋರಾಟ ಮಾಡುತ್ತಿದ್ದರೂ ಅವರಿಗೆ ಕೇಳಿಸುತ್ತಿಲ್ಲ ಎಂದು ಗಂಟೆ ಬಾರಿಸಿ ಚಳುವಳಿ ನಡೆಸಲಾಯಿತು.
ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಕಾರ್ಯಕ್ರಮವೇನು?
ಸೆ. 26-27ರಂದು ಚಾಮರಾಜನಗರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರಿಂದ ಸಕಲ ಸಿದ್ಧತೆ ನಡೆಯುತ್ತಿದೆ. ಎಸ್ಪಿ ಪದ್ಮಿನಿ ಸಾಹೋ, ಎಡಿಸಿ ಗೀತಾ ಹುಡೇದ ಹಾಗು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಸಿಎಂ ಅವರು ಸೆ. 26ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಲಿದ್ದು, ಸೆ. 27ರ ಬೆಳಗ್ಗೆ ಮ.ಬೆಟ್ಟ ಪ್ರಾಧಿಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.