Site icon Vistara News

CM Siddaramaiah : ಆಕ್ಸಿಜನ್‌ ದುರಂತದಲ್ಲಿ ಮೃತರ ಕುಟುಂಬಕ್ಕೆ ಕಾಯಂ ಉದ್ಯೋಗ; ಸಿಎಂ ಭರವಸೆ

Chamaraja Nagara Oxygen tragedy

ಚಾಮರಾಜನಗರ: ಕೊರೊನಾ ಸಂದರ್ಭ ಚಾಮರಾಜನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ (Chamarajanagara District Hospital) ಸಂಭವಿಸಿದ ಆಕ್ಸಿಜನ್‌ ದುರಂತದಲ್ಲಿ (Oxygen tragedy) ಮೃತಪಟ್ಟವರ ಕುಟುಂಬಗಳಿಗೆ ಕಾಯಂ ಉದ್ಯೋಗ (Permanent job to Family members of deceased family) ನೀಡುವುದಕ್ಕೆ ಸಂಬಂಧಿಸಿ ಪ್ರಸ್ತಾವನೆ ಕಳುಹಿಸುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಆಕ್ಸಿಜನ್‌ ದುರಂತದ ಪ್ರಸ್ತಾಪವಾದಾಗ ಈಗಿನ ವಾಸ್ತವಿಕ ಸ್ಥಿತಿಗತಿ ಏನಿದೆ ಎಂದು ಸಿಎಂ ವಿಚಾರಿಸಿದರು.

ʻʻಆಕ್ಸಿಜನ್ ದುರಂತದಲ್ಲಿ 32 ಜನ ಮೃತಪಟ್ಟಿದ್ದರು. ಅವರ ಮನೆಯವರಿಗೆ ಸರ್ಕಾರಿ ಉದ್ಯೋಗ ನೀಡಲು ಸೂಚನೆ ನೀಡಲಾಗಿತ್ತು. ಹೊರಗುತ್ತಿಗೆ ಉದ್ಯೋಗ ಕೊಡುವುದು ಬೇಡ, ಖಾಯಂ ಉದ್ಯೋಗ ನೀಡೋಣ ಅಂತ ಪ್ರಯತ್ನ ಮಾಡುತ್ತಿದ್ದೇವೆʼʼ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾಹಿತಿ ನೀಡಿದರು.

ಪರಿಹಾರ ನೀಡಿಕೆಯಲ್ಲೂ ತಾರತಮ್ಯ ಆಗಿದೆ

ʻʻಮೃತರಿಗೆ ಪರಿಹಾರ ನೀಡಲೂ ತಾರತಮ್ಯ ಆಗಿದೆ. ದುರಂತ ನಡೆದ ದಿನ ಮೃತಪಟ್ಟವರಿಗೆ 5 ಲಕ್ಷ ರೂ. ಕೊಡಲಾಗಿದೆ‌. ಮರುದಿನ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆವರೆಗೆ ಮೃತಪಟ್ಟವರಿಗೆ 2 ಲಕ್ಷ ರೂ. ನೀಡಲಾಗಿದೆʼʼ ಎಂದು ಮುಖ್ಯಮಂತ್ರಿಗಳ ವಿಶೇಷ ಕಾರ್ಯದರ್ಶಿ ಮಾಹಿತಿ ನೀಡಿದರು.

ʻʻಮೃತರ ಕುಟುಂಬಗಳಿಗೆ ಉದ್ಯೋಗ ನೀಡಲು ಮಾಹಿತಿ ಸಂಗ್ರಹಿಸಲಾಗಿದೆ. ಇಬ್ಬರನ್ನು ಹೊರತುಪಡಿಸಿ ಉಳಿದವರ ಮಾಹಿತಿ ಇದೆʼʼ ಎಂದು ತಿಳಿಸಿದರು. ಆದರೆ, ನೇಮಕಾತಿ ಪ್ರಕ್ರಿಯೆ ಮೀರಿ ಹೇಗೆ ಉದ್ಯೋಗ ನೀಡಲು ಸಾಧ್ಯ ಎಂಬ ಜಿಜ್ಞಾಸೆ ಕಾಡಿದಾಗ ಮೊದಲು ವಿಶೇಷ ಪ್ರಕರಣ ಎಂದು ಪ್ರಸ್ತಾವನೆ ಕಳುಹಿಸಿ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರು ಈ ಸಲಹೆಯನ್ನು ಅನುಮೋದಿಸಿದರು.

ಚಾಮರಾಜನಗರ ಜಿ.ಪಂ. ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಸಚಿವರಾದ ಡಾಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಹಾಗೂ ಸ್ಥಳೀಯ ಶಾಸಕರು ಇದ್ದಾರೆ. ಡಿಸಿ, ಎಸ್ಪಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗಿಯಾದರು.

ಇದನ್ನೂ ಓದಿ: CM Siddaramaiah : ಸಿಎಂ ಆಗಿ 13ನೇ ಬಾರಿ ಭೇಟಿ; ಚಾಮರಾಜ ನಗರದ ಮೌಢ್ಯ ತೊಡೆದೆ ಎಂದ ಸಿದ್ದರಾಮಯ್ಯ

ಇನ್ನೂ 1.24 ಲಕ್ಷ ಪಡಿತರ ಚೀಟಿದಾರರಿಗೆ ಯಾಕೆ ಅಕ್ಕಿ ಹಣ ತಲುಪಿಲ್ಲ?

ಎರಡು ಲಕ್ಷ ತೊಂಬತ್ತು ಸಾವಿರ ಪಡಿತರ ಚೀಟಿಗಳಿದ್ದೂ ಇನ್ನೂ ಒಂದು ಲಕ್ಷ 24 ಸಾವಿರ ಪಡಿತರ ಚೀಟಿದಾರರಿಗೆ ೫ ಕೆಜಿ ಅಕ್ಕಿಯ ಹಣ ಇನ್ನೂ ತಲುಪಿಲ್ಲ ಏಕೆ ? ಲೋಪಗಳನ್ನು ಸರಿಪಡಿಸಲು ಮೂರು ತಿಂಗಳಾದರೂ ಏಕೆ ಆಗಿಲ್ಲ ಎಂದು ಮುಖ್ಯಮಂತ್ರಿಗಳು ಆಹಾರ ಇಲಾಖೆಯ ಅಧಿಕಾರಿಯನ್ನು ಖಾರವಾಗಿ ಪ್ರಶ್ನಿಸಿದರು.

ಸರ್ಕಾರದ ಸವಲತ್ತು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ತಕ್ಷಣ ಏನೇ ಲೋಪಗಳಿದ್ದರೂ ಬಗೆಹರಿಸಿ ಜನರಿಗೆ ಸವಲತ್ತು ತಲುಪಿಸಿ, ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಸಿದರು.

Exit mobile version